ಮಂಗಳವಾರ, ಜನವರಿ 31, 2023
18 °C
ನೆರೆ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ಸಂಕಷ್ಟಷ್ಟಕ್ಕೀಡಾದ ರೈತರಿಗೆ ‘ಸೆಸ್ಕ್‌’ ಬರೆ

ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ರೈತರು ಹೈರಾಣಾಗಿದ್ದಾರೆ. ಅನಧಿಕೃತ ಲೋಡ್‌ಶೆಡ್ಡಿಂಗ್‌ ಜಾರಿಯಲ್ಲಿದ್ದು, ಮನಸೋ ಇಚ್ಛೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಪರಿಣಾಮ, ಬೆಳೆಗಳಿಗೆ ನೀರುಣಿಸಲು ಕೃಷಿಕರು ತೊಂದರೆ ಅನುಭವಿಸಬೇಕಾಗಿದೆ.

ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ (ತ್ರಿಫೇಸ್) ವಿದ್ಯುತ್‌ ಅನ್ನು ನಿತ್ಯವೂ 7 ತಾಸು ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಇದು ನಡೆಯುತ್ತಿಲ್ಲ. ಹಗಲಿನಲ್ಲಿ 4 ತಾಸು ಹಾಗೂ ರಾತ್ರಿ 3 ಗಂಟೆಗಳು ವಿದ್ಯುತ್ ಕೊಡಲಾಗುವುದು ಎಂದು ಸೆಸ್ಕ್ ತಿಳಿಸುತ್ತಿದೆ. ಆದರೆ, ಅದನ್ನು ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿಲ್ಲ. ವಿದ್ಯುತ್‌ ಸೌಲಭ್ಯ ಇದ್ದೂ ಇಲ್ಲದಂತಾದ ಸ್ಥಿತಿ ಎದುರಾಗಿದೆ.

‘ಅನಿಯಮಿತ ವಿದ್ಯುತ್‌ ಪೂರೈಕೆಯಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ತರಕಾರಿ ಬೆಳೆದವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ’ ಎನ್ನುವುದು ರೈತರ ಅಳಲಾಗಿದೆ. ಅನಧಿಕೃತ ಲೋಡ್‌ಶೆಡ್ಡಿಂಡ್‌ ಮಾಡುತ್ತಿರುವುದಕ್ಕೆ ಕಾರಣ ಕೇಳಿದರೆ, ಸಿಬ್ಬಂದಿ ಅಧಿಕಾರಿಗಳತ್ತ ಹಾಗೂ ಅಧಿಕಾರಿಗಳು ಹಿರಿಯ ಅಧಿಕಾರಿಗಳತ್ತ ಕೈ ತೋರುವುದು ನಡೆಯುತ್ತಿದೆ. ಇದು ರೈತರಿಗೆ ಸಮಸ್ಯೆ ತಂದೊಡ್ಡಿದೆ.

ನಷ್ಟ ಅನುಭವಿಸಿದ್ದವರಿಗೆ:

ನೆರೆ, ಅತಿವೃಷ್ಟಿ, ಬೆಲೆ ಕುಸಿತ ಹಾಗೂ ಕೊಯ್ಲಿನ ಸಂದರ್ಭದಲ್ಲಿ ಉಂಟಾದ ಪ್ರತಿಕೂಲ ವಾತಾವರಣ ಮತ್ತು ಚಂಡಮಾರುತದ ಪರಿಣಾಮ ಸುರಿದ ಅಕಾಲಿಕ ಮಳೆಯಿಂದಾಗಿ ನಷ್ಟ ಅನುಭವಿಸಿದ್ದ ರೈತರು ಸುಧಾರಿಸಿಕೊಳ್ಳುವಷ್ಟರಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯು ಬರೆ ಎಳೆಯುತ್ತಿದೆ! ಎಚ್‌.ಡಿ.ಕೋಟೆ, ಸರಗೂರು, ತಿ.ನರಸೀಪುರ, ನಂಜನಗೂಡು, ಪಿರಿಯಾ‍ಪಟ್ಟಣ, ಹುಣಸೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ‘ಪ್ರಜಾವಾಣಿ’ಗೆ ಕರೆ ಮಾಡಿದ್ದ ಹಲವು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ತರಕಾರಿ ಬೆಳೆಗೆ ಗೊಬ್ಬರ ಹಾಕಿದಾಗ ಸಕಾಲಕ್ಕೆ ನೀರು ಕೊಡದಿದ್ದರೆ, ಆ ಬೆಳೆಯು ಒಣಗಿ ಹೋಗುವ ಸಂಭವವಿರುತ್ತದೆ. ಮನ ಬಂದ ಸಮಯದಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ನಮಗೆ ನೀರು ಹಾಯಿಸಲು ಸಮಯ ಹೊಂದಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ತಡರಾತ್ರಿಯಲ್ಲೆಲ್ಲಾ ಜಮೀನಿನಲ್ಲೇ ಇರಬೇಕಾದ ಅಥವಾ ಬರಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಕಂಚಮಳ್ಳಿ ಹಾಗೂ ಮಲ್ಲಾರದಹುಂಡಿ ಭಾಗದ ರೈತರು ತಿಳಿಸಿದರು.

ಸಮಯ ಪಾಲಿಸುವುದಿಲ್ಲ:

‘ವಿದ್ಯುತ್‌ ಮಾಹಿತಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೆಸ್ಕ್‌ನಿಂದ ನೀಡಲಾಗುವ ಸಮಯವನ್ನು ಪಾಲಿಸಲಾಗುತ್ತಿಲ್ಲ. ಕಡಕೊಳ ಲೋಡ್‌ಶೆಡ್ಡಿಂಗ್ ಮಾಡಲಾಗಿದೆ. ವಿದ್ಯುತ್‌ ಬರುವುದು ತಡವಾಗುತ್ತದೆ. ಸಮಯವನ್ನು ತಿಳಿಸಲಾಗದು. ಬೆಳಿಗ್ಗೆ 4ಕ್ಕೆ ಕೊಡಬೇಕಾದ ವಿದ್ಯುತ್‌ ಅನ್ನು 9ಕ್ಕೆ ಪೂರೈಸಲಾಗುವುದು ಎಂದು ಕಾರಣ ಹೇಳಲಾಗುತ್ತಿದೆ. ಪರಿವರ್ತಕ ಹಾಳಾಗಿದೆ, ಮಾರ್ಗದಲ್ಲಿ ಅನುಮತಿ ಸಿಕ್ಕಿಲ್ಲ ಎಂಬಿತ್ಯಾದಿ ನೆಪಗಳನ್ನೂ ಹೇಳಲಾಗುತ್ತಿದೆ. ಮೂರು ತಾಸಿನಲ್ಲಿ ಒಂದು ತಾಸಷ್ಟೆ ವಿದ್ಯುತ್‌ ಕೊಟ್ಟು ನಂತರ ಕಡಿತಗೊಳಿಸಲಾಗುತ್ತಿದೆ. ಹೀಗಾದರೆ, ನಾವು ಕೃಷಿ ಮಾಡುವುದು ಹೇಗೆ? ಬೆಳೆ ಉಳಿಸಿಕೊಳ್ಳುವುದು ಹೇಗೆ?’ ಎಂಬ ಆಕ್ರೋಶದ ಪ್ರಶ್ನೆ ರೈತರದಾಗಿದೆ.

‘ಕೊನೆ ಕ್ಷಣದಲ್ಲಿ ಸಮಯ ಬದಲಿಸಲಾಗುತ್ತದೆ. ಮಧ್ಯರಾತ್ರಿ ನಂತರ ಕೊಟ್ಟರೂ ಸಮಯ ಪಾಲಿಸುವುದಿಲ್ಲ. ಯಾವ್ಯಾವುದೋ ಟೈಮಲ್ಲಿ ಕೊಡುವುದರಿಂದ ತೊಂದರೆ ಆಗುತ್ತಿದೆ. ದಿನದ 24 ಗಂಟೆಗಳಲ್ಲಿ ಪಂಪ್‌ಸೆಟ್‌ಗಳಿಗೆ ಕೊಡುವುದು ಏಳು ತಾಸು ಮಾತ್ರವೇ. ಅದನ್ನೂ ಸರಿಯಾಗಿ ಪೂರೈಸದಿದ್ದರಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಲಿದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

ಪರಿಶೀಲಿಸಿ ಕ್ರಮ

ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ತೊಂದರೆಯಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಪರಿಶೀಲಿಸಿ, ಸಮಸ್ಯೆ ಪರಿಹರಿಸಲಾಗುವುದು.

–ಎಸ್.ನಾಗೇಶ್‌, ಎಸ್ಇ, ಸೆಸ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು