ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ ಭರವಸೆಗಳನ್ನು ಜಾರಿ ಮಾಡದಿದ್ದರೆ ಹೋರಾಟ ನಡೆಸುತ್ತೇವೆ : ಪ್ರತಾಪ ಸಿಂಹ

ಸಂಸದ ಪ್ರತಾಪ ಸಿಂಹ ಎಚ್ಚರಿಕೆ; ‘ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಬೇಡಿ’
Published 25 ಮೇ 2023, 13:01 IST
Last Updated 25 ಮೇ 2023, 13:01 IST
ಅಕ್ಷರ ಗಾತ್ರ

ಮೈಸೂರು: ‘ಜನ ಕಾಂಗ್ರೆಸ್‌ ಮುಖ ನೋಡಿ ಆರಿಸಿಲ್ಲ. ಗ್ಯಾರಂಟಿಗಳನ್ನು ನೋಡಿ ಆಯ್ಕೆ ಮಾಡಿದ್ದಾರೆ. ಅವನ್ನು ಎಲ್ಲರಿಗೂ ಅನ್ವಯವಾಗುವಂತೆ ಜೂನ್‌ 1ರೊಳಗೆ ಜಾರಿಗೊಳಿಸದಿದ್ದರೆ ನಾವು ಹೋರಾಟ ಮಾಡಿ ಜನರ ಧ್ವನಿಯಾಗುತ್ತೇವೆ’ ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನೀಡಿದ ಕೆಲವು ಗ್ಯಾರಂಟಿಗಳು ಜನರ ಬವಣೆಯನ್ನು ತೀರಿಸುತ್ತವೆ. ಅದರ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕಾರ್ಡ್‌ನಲ್ಲಿ ‘ಷರತ್ತುಗಳು ಅನ್ವಯ’ ಎಂದು ನಮೂದಿಸಿಲ್ಲ. ಹೀಗಾಗಿ ಕೊಟ್ಟ ಮಾತಿನಂತೆ ಎಲ್ಲರಿಗೂ ಅನ್ವಯಿಸುವಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿ. ಆದರೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅರಿತು, ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಬಾರದೆಂದು ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಮಾಡಿದ ನಿಯಮ ನೆನಪಿರಲಿ. ಜೂನ್‌ 1ರಿಂದ ಜನರು 200 ಯೂನಿಟ್‌ವರೆಗಿನ ವಿದ್ಯುತ್‌ ಶುಲ್ಕ ಕಟ್ಟಬೇಡಿ. ಮಹಿಳೆಯರಿಗೆ ಉಚಿತವಾಗಿ ಬಸ್‌ಗಳಲ್ಲಿ ಸಂಚಾರ ಮಾಡಲು ಅವಕಾಶ ಕೊಡಿ. ಗೃಹಲಕ್ಷ್ಮಿ ಯೋಜನೆಯನ್ವಯ ಮನೆಯೊಡತಿಗೆ ₹2 ಸಾವಿರ ನೀಡಿ’ ಎಂದು ಒತ್ತಾಯಿಸಿದರು.

‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಜಯಲಕ್ಷ್ಮಿವಿಲಾಸ ಅರಮನೆಗೆ ಸ್ಥಳಾಂತರಿಸಿದ್ದು, ದುರಸ್ತಿಗೆ ₹27 ಕೋಟಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ.  ಗ್ಯಾಸ್‌ ಪೈಪ್‌ಲೈನ್‌ಗೆ ಕಡಿಮೆ ಭೂ ಬಳಕೆಯ ಶುಲ್ಕ ವಿಧಿಸುವ ಕುರಿತ ಕಡತ ಮುಖ್ಯ ಕಾರ್ಯದರ್ಶಿ ಬಳಿ ಸೇರಿದೆ. ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗೆ ಕೇಂದ್ರದ ಒಪ್ಪಿಗೆ ದೊರಕಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕಾಗಿ ಬೋಗಾದಿ ರಸ್ತೆಯ ಹುಯಿಳಾಲು ಬಳಿ 26 ಎಕರೆ ಜಮೀನು ಗುರುತಿಸಲಾಗಿದೆ. ರೋಜರ್ ಬಿನ್ನಿ ಹಾಗೂ ಬ್ರಿಜೇಶ್ ಪಠೇಲ್ ಜೊತೆಗೆ ಮಾತುಕತೆ ನಡೆಸಿದ್ದು, ಆರಂಭಿಕವಾಗಿ ₹60 ಕೋಟಿ ಹೂಡಿಕೆ ಮಾಡಲು ತಯಾರಿದ್ದಾರೆ. ಬೃಹತ್ ಮೈಸೂರು ಮಹಾನಗರ ನಿರ್ಮಾಣಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನು ನಗರಕ್ಕೆ ಸೇರಿಸಬೇಕು. ಫೆರಿಪೆರಲ್ ವರ್ತುಲ ರಸ್ತೆಗಳಿಗೆ ಕೇಂದ್ರದಿಂದ ಅನುದಾನ ತರುತ್ತೇನೆ. ಇವುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಬೇಕು. ಅಭಿವೃದ್ಧಿ ವಿಷಯಕ್ಕಾಗಿ ಸಿದ್ದರಾಮಯ್ಯ ಅವರ ಕಚೇರಿಗೆ ಖಂಡಿತ ತೆರಳುತ್ತೇನೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಕುರ್ಚಿ ಶಾಶ್ವತವಲ್ಲ, ಪೊಲೀಸ್ ವ್ಯವಸ್ಥೆ ಶಾಶ್ವತವಾದದ್ದು. ಅವರಿಗೆ ತೊಂದರೆ ಕೊಡಬೇಡಿ. ವಿಧಾನಸೌಧದಲ್ಲಿ ಕುಳಿತು ಪೊಲೀಸ್‌ ವ್ಯವಸ್ಥೆಗೆ ಧಮ್ಕಿ ಹೊಡೆಯುತ್ತೀರಾ? ಯಾವತ್ತು ವ್ಯವಸ್ಥೆ ರಾಜಕಾರಣಿಗಳ ವಿರುದ್ಧ ಸೆಟೆದು ನಿಲ್ಲುತ್ತದೋ ಆಗ ಏನೂ ಮಾಡಲು ಸಾಧ್ಯವಿಲ್ಲ. ಪೊಲೀಸ್ ವ್ಯವಸ್ಥೆಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಫೆಬ್ರುವರಿಯಲ್ಲಿ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆಗೆ ಮೇ ತಿಂಗಳಲ್ಲಿ ಎಫ್‌ಐಆರ್ ಮಾಡಿಸುತ್ತಿರುವುದನ್ನು ಗಮನಿಸಿದರೆ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದೀರಿ ಎಂದರ್ಥವಲ್ಲವೇ’ ಎಂದು ಪ್ರಶ್ನಿಸಿದರು.

‘ಪಂಜಾಬ್‌, ರಾಜಸ್ಥಾನ, ತಮಿಳುನಾಡಿನಲ್ಲಿ ಭರವಸೆಗಳನ್ನು ನೀಡಿ ಪಕ್ಷಗಳು ಗೆದ್ದಿರುವಾಗ, ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ತಂದಾಗ ಬಿಜೆಪಿಯು ಎಚ್ಚೆತ್ತುಕೊಂಡಿದ್ದರೆ ಇಂದು ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ನಾವು ಸೋತಿದ್ದೇವೆ, ಸತ್ತಿಲ್ಲ. ಮತ್ತೆ ಒಂದಾಗಿ ಆತ್ಮಾವಲೋಕನ ಮಾಡಿಕೊಂಡು ಮುಂದುವರೆಯುತ್ತೇವೆ. ಈ ಫಲಿತಾಂಶದಿಂದ ಲೋಕಸಭೆಗೆ ಪರಿಣಾಮವಾಗುವುದಿಲ್ಲ. ಕರ್ನಾಟಕದ ಜನ ಬುದ್ಧಿವಂತರಿದ್ದಾರೆ. ರಾಷ್ಟ್ರದ ಒಳಿತಿಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT