ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹೇಶ್‌ಚಂದ್ರಗುರು ವಿಚಾರ ನಿರಂತರ’

ನುಡಿ ನಮನ ಕಾರ್ಯಕ್ರಮದಲ್ಲಿ ಸಾಹಿತಿ ಕೆ.ಎಸ್‌.ಭಗವಾನ್‌ ಅಭಿಪ್ರಾಯ
Published 1 ಸೆಪ್ಟೆಂಬರ್ 2024, 2:52 IST
Last Updated 1 ಸೆಪ್ಟೆಂಬರ್ 2024, 2:52 IST
ಅಕ್ಷರ ಗಾತ್ರ

ಮೈಸೂರು: ‘ಪ್ರೊ.ಬಿ.ಪಿ.ಮಹೇಶ್‌ಚಂದ್ರಗುರು ಅವರ ಚಿಂತನೆ, ವಿಚಾರ ನಿರಂತರವಾದದ್ದು’ ಎಂದು ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಹೇಳಿದರು.

ನಗರದ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಮೈಸೂರು ವಿ.ವಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ, ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಶನಿವಾರ ನಡೆದ ಪ್ರೊ.ಬಿ.ಪಿ. ಮಹೇಶ್‌ಚಂದ್ರಗುರು ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹೇಶ್‌ಚಂದ್ರಗುರು ಆಶಯದಂತೆ ಸಮಾಜ ಎಚ್ಚರಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ನೆನಪು ನಿರಂತರವಾಗಿಸಬೇಕು. ಅವರ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಬೇಕು’ ಎಂದರು.

‘ಅಸಮಾನತೆ, ಭೇದ– ಭಾವ ಧಿಕ್ಕರಿಸಿ ಹೋರಾಟ ಮಾಡುತ್ತಿದ್ದ ಅವರು, ನಮ್ಮ ನಡುವೆ ಇದ್ದಂತಹ ಧೀಮಂತ ವ್ಯಕ್ತಿ. ಸಮಾಜದ ಸಮಸ್ಯೆಗಳನ್ನು ದಿಟ್ಟತನದಿಂದ ಪ್ರಶ್ನಿಸುತ್ತಿದ್ದ ನಡೆ ಎಲ್ಲರಿಗೂ ಮಾದರಿ. ಅವರ ಅಗಲಿಕೆ ವೈಯಕ್ತಿಕವಾಗಿ ಮಿತ್ರನನ್ನು ಕಳೆದುಕೊಂಡು ಬಡವಾಗಿದ್ದೇನೆ. ಬದುಕಿನಲ್ಲಿನ ದೊಡ್ಡ ಸಂಪತ್ತು ಇಲ್ಲವಾಗಿದೆ. ಮೂಲ ರಾಮಾಯಣ ಬರೆದಾಗ ಅನೇಕ ಗೊಂದಲ ಉಂಟಾಗಿತ್ತು. ಆ ಸಂದರ್ಭದಲ್ಲಿ ದೊಡ್ಡ ಬೆಂಬಲ ನೀಡಿದ್ದರು’ ಎಂದು ಸ್ಮರಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ‘ಮಹೇಶ್‌ಚಂದ್ರಗುರು ಹೆಸರು ಚಿರಸ್ಥಾಯಿಯಾಗಿ ಉಳಿಯಲು ವಿಶ್ವವಿದ್ಯಾಲಯ, ಪತ್ರಿಕೋದ್ಯಮ ವಿಭಾಗದಿಂದ ಅವರ ನೆನಪಿನಲ್ಲಿ ವಿಶೇಷ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ಅವರ ಹೋರಾಟ, ತ್ಯಾಗ, ಬಲಿದಾನ, ಕೆಲಸಕ್ಕೆ ಗೌರವ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ), ಮಾಜಿ ಮೇಯರ್‌ ಪುರುಷೋತ್ತಮ್, ಸಮಾಜ ಸೇವಕ ರಘುರಾಂ ವಾಜಪೇಯ, ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್, ಪ್ರಾಧ್ಯಾಪಕರಾದ ಪ್ರೊ.ತೇಜಸ್ವಿ ನವೀಲೂರು, ಕವಿತಾ ರೈ, ಸಿಂಡಿಕೇಟ್‌ ಸದಸ್ಯ ನಟರಾಜ್ ಶಿವಣ್ಣ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ರಾಜ್ಯ ಹಿಂದುಳಿ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎಚ್.ಎಸ್ ಪ್ರಕಾಶ್, ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರವಿನಂದನ್ ಇದ್ದರು.

‘ವೈಚಾರಿಕ ಪ್ರಜ್ಞೆಯ ಮಿಂಚು’

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ‘ಶರಣ ಸಂತ ದಾರ್ಶನಿಕ ಹೋರಾಟಗಾರ ಚಳವಳಿಯಲ್ಲಿ ಸಕ್ರಿಯ ಹಾಗೂ ಜನಪರ ಕಾಳಜಿ ಹೊಂದಿರುವವರಿಗೆ ಎಂದಿಗೂ ಸಾವಿಲ್ಲ. ಬೌದ್ಧಿಕವಾಗಿ ದೇಹ ತ್ಯಜಿಸಬಹುದೆ ಹೊರತು ಅವರ ಹೋರಾಟ ಕನಸು ಆದರ್ಶ ಮನಸ್ಸಿನ ತುಡಿತಗಳು ಸಮಾಜದಲ್ಲಿ ಜೀವಂತವಾಗಿ ಇರುತ್ತವೆ. ಆ ನಿಟ್ಟಿನಲ್ಲಿ ಜಾತಿ ಧರ್ಮ ರಹಿತವಾಗಿ ಕರ್ನಾಟಕದ ವೈಚಾರಿಕ ಪ್ರಜ್ಞೆಯ ಮಿಂಚಾಗಿರುವ ಮಹೇಶ್‌ಚಂದ್ರಗುರು ‘ಎಮ್ಮವರಿಗೆ ಸಾವಿಲ್ಲ’ ಎಂಬ ಸಾಲಿಗೆ ಸೇರುವರು’ ಎಂದು ಬಣ್ಣಿಸಿದರು. ‘ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾದಾಗ ಸಾಮಾಜಿಕ ನ್ಯಾಯದಡಿ ಹೊರಹೊಮ್ಮುತ್ತಿದ್ದ ಮೊದಲ ದನಿ ಅವರದ್ದಾಗಿತ್ತು. ದಮನಿತರ ಶೋಷಿತರ ಪರವಾಗಿ ಬೆಳಕಾಗಿದ್ದರು. ಅವರ ಕೆಲಸ ವಿಚಾರ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದ್ದು ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT