ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ: ವಿವಿಧ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ

Published 9 ಮೇ 2024, 14:02 IST
Last Updated 9 ಮೇ 2024, 14:02 IST
ಅಕ್ಷರ ಗಾತ್ರ

ಮೈಸೂರು: ಕೈಗಾರಿಕೆಗಾಗಿ ಭೂಮಿ ನೀಡಿದವರ ಮಕ್ಕಳಿಗೆ ಉದ್ಯೋಗ ಕೊಡುವಂತೆ ಒತ್ತಾಯಿಸಿ ‘ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆ’, ಜನಾಂದೋಲನಗಳ ಮಹಾಮೈತ್ರಿ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟಿಸಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸುಮಾರು 15 ವರ್ಷದ ಹಿಂದೆಯೇ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಡಕನಹಳ್ಳಿ, ತಾಂಡ್ಯ, ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ರೈತರಿಗೆ ಕೈಗಾರಿಕೆಗಳಲ್ಲಿ ಕಾಯಂ ಉದ್ಯೋಗ ನೀಡಿಲ್ಲ’ ಎಂದು ಆರೋಪಿಸಿದರು.

‘ಹಲವು ಹೋರಾಟಗಳ ಬಳಿಕ 2023ರಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಯಿತು. ಸಮಿತಿ ಮೂಲಕ ಉದ್ಯೋಗ ನೀಡಲು ಅರ್ಜಿ ಸ್ವೀಕರಿಸಿದ್ದು, ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಉದ್ಯೋಗ ದೊರೆತಿದೆ. ಸಮಿತಿ ಆರಂಭವಾಗಿ ಎಂಟು ತಿಂಗಳು ಕಳೆದರೂ ರೈತರ ಅರ್ಜಿ ಪರಿಶೀಲಿಸಿ  ಉದ್ಯೋಗ ನೀಡಿಲ್ಲ’ ಎಂದು ದೂರಿದರು.

‘ಸಮಿತಿ ಅಧ್ಯಕ್ಷರು ಲೋಕಸಭೆ ಚುನಾವಣೆಯ ನೆಪವೊಡ್ಡಿ ನಡೆಯಬೇಕಿದ್ದ ಸಭೆಯನ್ನು ರದ್ದು ಮಾಡಿದ್ದಾರೆ. ರೈತರ ಸಮಸ್ಯೆಗೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ. ಇತ್ತ ರೈತರು ಭೂಮಿಯೂ ಇಲ್ಲದೆ, ಉದ್ಯೋಗವೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಇದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲದ್ದರಿಂದ ಚುನಾವಣೆ ಅಡ್ಡ ಬರುವುದಿಲ್ಲ. ರೈತರ ಜೀವನಾಧಾರವಾಗಿದ್ದ ಭೂಮಿಯನ್ನು ಏಕಪಕ್ಷೀಯವಾಗಿ ಸ್ವಾಧೀನ ಪಡಿಸಿಕೊಂಡಿರುವುದಕ್ಕೆ ಅವರ ಕುಟುಂಬಗಳಿಗೆ ಸಿಗಬೇಕಿರುವ ಕಾನೂನಾತ್ಮಕ ಹಕ್ಕು ಇದು. ಹೀಗಾಗಿ ಜಿಲ್ಲಾಧಿಕಾರಿಯು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಎಐಕೆಕೆಎಂಎಸ್‌ ಜಿಲ್ಲಾ ಸಂಚಾಲಕ ಬಸವರಾಜು ಎಚ್.ಎಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT