ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಳೆಯಿಂದಾಗಿ ಸೆಸ್ಕ್‌ಗೆ ₹2.05 ಕೋಟಿ ನಷ್ಟ

Published 17 ಮೇ 2024, 7:15 IST
Last Updated 17 ಮೇ 2024, 7:15 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈಚೆಗೆ ಸುರಿದ ಮುಂಗಾರು ಪೂರ್ವ ‘ಅಡ್ಡ’ ಮಳೆಯು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತಕ್ಕೆ (ಸೆಸ್ಕ್‌) ₹2.05 ಕೋಟಿ ಹಾನಿ ತಂದೊಡ್ಡಿದೆ. ಒಟ್ಟು 874 ಕಂಬಗಳು, 85 ಪರಿವರ್ತಕಗಳು ಹಾಗೂ 14 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ.

ಆಗಾಗ ಬೀಳುತ್ತಿರುವ ಮಳೆಯು ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪರೆಯುತ್ತಿದೆ. ಮುಂಗಾರು ಪೂರ್ವ ಹಾಗೂ ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಭೂಮಿ ಹದಗೊಳಿಸಲು ನೆರವಾಗಿದೆ. ಕೃಷಿಕರ ಮೊಗದಲ್ಲಿ ಮಂದಹಾಸವನ್ನೂ ಮೂಡಿಸಿದೆ. ಆಶಾದಾಯಕ ಮುಂಗಾರಿನ ಮುನ್ಸೂಚನೆಯನ್ನೂ ನೀಡಿದೆ.

ಆದರೆ, ಮಳೆಯ ಜೊತೆಗೆ ಬಂದ ಜೋರು ಗಾಳಿ–ಬಿರುಗಾಳಿಯು ದುರ್ಬಲ ಮರಗಳು ಧರೆಗುರುಳುವಂತೆ ಮಾಡಿತು.  ಅದರೊಂದಿಗೆ ವಿದ್ಯುತ್‌ ಕಂಬಗಳು ಕೂಡ ಮುರಿದು ಬಿದ್ದಿವೆ. ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದಿದ್ದವು. ವಿದ್ಯುತ್‌ ಪರಿವರ್ತಕಗಳು ವಿಫಲವಾಗಿದ್ದವು. ತಂತಿ ಮಾರ್ಗ ಹಾನಿಗೆ ಒಳಗಾಗಿದೆ. ಜಿಲ್ಲೆಯಲ್ಲಿ ಮೇ 1ರಿಂದ 13ರವರೆಗೆ ಅಪಾರ ಹಾನಿ ಸಂಭವಿಸಿರುವ ಬಗ್ಗೆ ಸೆಸ್ಕ್‌ ವರದಿ ಸಿದ್ಧಪಡಿಸಿದೆ.

ದುರಸ್ತಿಗೆ ಸಿಬ್ಬಂದಿ ಶ್ರಮ: ಹಾನಿಗೆ ಒಳಗಾಗಿದ್ದ ಮಾರ್ಗಗಳ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲು ಸೆಸ್ಕ್‌ ಸಿಬ್ಬಂದಿ ಶ್ರಮಿಸಬೇಕಾಯಿತು. ಅದರಲ್ಲೂ ಮೇ 3ರಂದು ಉಂಟಾಗಿದ್ದ ಹಾನಿಯನ್ನು ದುರಸ್ತಿಪಡಿಸಲು ಹಲವು ಗಂಟೆಗಳೇ ಬೇಕಾಗಿದ್ದವು. ಅಂದು ಇಡೀ ದಿನ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಪೂರೈಕೆ ಇರಲೇ ಇಲ್ಲ. ‘ವರ್ಷದ ಮೊದಲ ಜೋರು ಮಳೆ’ ತಂಪಿನ ಅನುಭವ ನೀಡುವ ಜೊತೆಗೆ ಅವಾಂತರವನ್ನೂ ಸೃಷ್ಟಿಸಿತು. ಇದು, ಆರ್ಥಿಕವಾಗಿಯೂ ನಷ್ಟವನ್ನು ತಂದೊಡ್ಡಿದೆ.

‘ಜಿಲ್ಲೆಯಲ್ಲಿ 21 ಉಪ ವಿಭಾಗಗಳಿವೆ. ಮಳೆ, ಗಾಳಿಯಿಂದ ಹಾನಿ ಉಂಟಾದಲ್ಲಿ ಆ ಭಾಗದವರು ನಮ್ಮ ನೌಕರರ ಜತೆ ಸ್ಥಳೀಯ ವಿದ್ಯುತ್‌ ಗುತ್ತಿಗೆದಾರರನ್ನು ಬಳಸಿಕೊಂಡು ದುರಸ್ತಿ ಕಾರ್ಯ ಮಾಡುತ್ತಾರೆ. ಜನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ವಿದ್ಯುತ್‌ ಪೂರೈಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಜೋರು ಗಾಳಿಯಿಂದ ಹಾನಿ ಸಂಭವಿಸುತ್ತದೆ. ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಸೆಸ್ಕ್‌ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಸುನೀಲ್‌ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈ ಅವಧಿಯಲ್ಲಿ ಮೈಸೂರು ನಗರದಲ್ಲೇ ಹೆಚ್ಚು ಹಾನಿ ಸಂಭವಿಸಿದೆ. ಇಲ್ಲಿ ಒಟ್ಟು 372 ವಿದ್ಯುತ್‌ ಕಂಬಗಳು, 75 ವಿದ್ಯುತ್‌ ಪರಿವರ್ತಕಗಳು, 14 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ. ಅಂದಾಜು ₹1.28 ಕೋಟಿ ಹಾನಿ ಉಂಟಾಗಿದೆ. ನಂತರದ ಸ್ಥಾನದಲ್ಲಿ ತಿ.ನರಸೀಪುರ ಇದೆ. ಅಲ್ಲಿ 116 ವಿದ್ಯುತ್‌ ಕಂಬಗಳು ಬಿದ್ದಿದ್ದವು.

ಇವುಗಳೊಂದಿಗೆ, ನಗರದಲ್ಲಿ 60ಕ್ಕೂ ಹೆಚ್ಚು ಮರಗಳು ಬುಡಮೇಲಾಗಿದ್ದವು. 150ಕ್ಕೂ ಹೆಚ್ಚು ಮರಗಳ ರೆಂಬೆ–ಕೊಂಬೆಗಳು ಮುರಿದು ಬಿದ್ದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT