ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿ 7,100 ಹೆಕ್ಟೇರ್‌ ಬೆಳೆ ಹಾನಿ: ಸಚಿವ ಎಚ್‌.ಸಿ. ಮಹದೇವಪ್ಪ

Published 24 ಮೇ 2024, 14:25 IST
Last Updated 24 ಮೇ 2024, 14:25 IST
ಅಕ್ಷರ ಗಾತ್ರ

ಮೈಸೂರು: ‘ಈಚೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ನಷ್ಟ ಉಂಟಾಗಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘6,900 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 4ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಅಲ್ಲಲ್ಲಿ 6 ಮನೆಗಳು ಕುಸಿದಿವೆ. 60 ಮನೆಗಳ ಗೋಡೆಗಳು ಕುಸಿದಿದೆ ಎಂದು ವರದಿ ಬಂದಿದೆ. ಬಿದ್ದು ಹೋಗಿರುವ ಮನೆಗಳಿಗೆ ₹ 50ಸಾವಿರ ಪರಿಹಾರ ನೀಡಲಾಗಿದೆ. ಗೋಡೆ ಕುಸಿತ ಪ್ರಕರಣದಲ್ಲಿ ದುರಸ್ತಿಗೆಂದು ತಲಾ ₹ 25ಸಾವಿರ ಕೊಡಲಾಗಿದೆ’ ಎಂದು ವಿವರ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಸರ್ಕಾರಕ್ಕೆ ಸಲಹೆ ನೀಡಲಿ. ಅದನ್ನು ಬಿಟ್ಟು ರಾಜಕೀಯಕ್ಕೆ ಮುಂದಾದರೆ ನಾವೇನೂ ಹೇಳಲಾಗದು’ ಎಂದರು.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಅದಲು ಬದಲಾಗಲಿದೆಯೇ ಎಂಬ ಪ್ರಶ್ನೆಗೆ, ‘ನಾನಾಗಲೀ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರಾಗಲಿ ಬದಲಾವಣೆ ಮಾಡಬೇಕೆಂದು ಕೇಳಿಲ್ಲ. ಇರುವುದರಲ್ಲಿ ಇಬ್ಬರಿಗೂ ತೃಪ್ತಿ ಇದೆ. ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಪೈಪೋಟಿ ಏನಿಲ್ಲ. ಏನೇ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಹೇಳಿದರು. ಅದಕ್ಕೆ ಪಕ್ಕದಲ್ಲಿದ್ದ ವೆಂಕಟೇಶ್ ಕೂಡ ದನಿಗೂಡಿಸಿದರು.

ಪಿರಿಯಾಪಟ್ಟಣದಲ್ಲಿ ನಾನು ಭೇಟಿ ನೀಡುವ ವಿಚಾರ ತಿಳಿದು ಶಾಸಕರೂ ಆಗಿರುವ ಸಚಿವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ‘ನಾನು ಆ ಕ್ಷೇತ್ರದ ಶಾಸಕ. ನನ್ನ ಕ್ಷೇತ್ರದಲ್ಲಿ ತೊಂದರೆ ಅಥವಾ ಸಮಸ್ಯೆ ಆದಾಗ ಬಗೆಹರಿಸುವುದು ನನ್ನ ಜವಾಬ್ದಾರಿ. ಕುಮಾರಸ್ವಾಮಿ ಬರೋದಕ್ಕೂ ನನಗೂ ಏನು ಸಂಬಂಧ? ಅವರು ಮಹಿಳೆಯೊಬ್ಬರಿಗೆ ವೈಯಕ್ತಿಕವಾಗಿ ಸಹಾಯ ಮಾಡಿರಬಹುದು. ಆದರೆ, ಸರ್ಕಾರದಿಂದ ಕೊಡಿಸಲು ಆಗುತ್ತದೆಯೇ?’ ಎಂದು ಕೇಳಿದರು.

Highlights - 60 ಮನೆಗಳ ಗೋಡೆ ಕುಸಿತ ಆರು ಮನೆಗಳು ಕುಸಿದಿವೆ ಪರಿಹಾರ ವಿತರಿಸಲಾಗಿದೆ: ಸಚಿವ

Cut-off box - ಯತೀಂದ್ರ ಹೈಕಮಾಂಡ್‌ ಹೇಳಿದಂತೆ ಕೇಳ್ತಾರೆ: ಮಹದೇವಪ್ಪ ಮೈಸೂರು: ‘ಡಾ.ಯತೀಂದ್ರ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರುಣ ಕ್ಷೇತ್ರವನ್ನು ತಂದೆ ಸಿದ್ದರಾಮಯ್ಯ ಅವರಿಗಾಗಿ ತ್ಯಾಗ ಮಾಡಿದ್ದರು. ಹೈಕಮಾಂಡ್ ಹೇಳಿದ್ದಕ್ಕೆ ತಲೆ ಬಾಗಿದ್ದರು. ಈಗ ವಿಧಾನಪರಿಷತ್‌ ಚುನಾವಣೆಯಲ್ಲೂ ಹಾಗೆಯೇ ಮಾಡಲಿದ್ದಾರೆ’ ಎಂದು ಮಹದೇವಪ್ಪ ಪ್ರತಿಕ್ರಿಯಿಸಿದರು. ‘ನೀವು ಸ್ಪರ್ಧಿಸಬೇಡಿ ನಿಮ್ಮ ತಂದೆ ಸ್ಪರ್ಧಿಸಲಿ ಎಂದು ಹೈಕಮಾಂಡ್‌ ಆಗ ಹೇಳಿತ್ತು. ಹೀಗಾಗಿ ಈಗ ಅವರ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದರು.  ‘ಸರ್ಕಾರ ಇರುವ ಕಾರಣ ವಿಧಾನಪರಿಷತ್‌ಗೆ ಆಯ್ಕೆಯಾಗಲು ಪಕ್ಷದವರಲ್ಲಿ ಲಾಬಿ ಹೆಚ್ಚಾಗಿದೆ. ಯಾವಾಗಲೂ ಲಾಬಿ ಇದ್ದೇ ಇರುತ್ತದೆ. ನಾವು ಈ ಚುನಾವಣೆ ಗೆದ್ದೇ ಗೆಲ್ಲುತ್ತೇವೆ. ಜೆಡಿಎಸ್– ಬಿಜೆಪಿ ಮೈತ್ರಿಯಿಂದ ಯಾವುದೇ ಧಕ್ಕೆ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT