ಮೈಸೂರು: ಮಾವಿನ ಹಣ್ಣು ಕೊಡಿಸುವುದಾಗಿ ನಂಬಿಸಿ ಐದು ವರ್ಷದ ಬಾಲಕಿಯನ್ನು ಮನೆಗೆ ಕರೆದು, ಅತ್ಯಾಚಾರ ಎಸಗಿದ್ದ ಅಪರಾಧಿ, ತಾಲ್ಲೂಕಿನ ಮಲಿಯೂರು ಗ್ರಾಮದ ಅಪರಾಧಿ ಸುರೇಶ್‌ಗೆ ಪೋಕ್ಸೋ ವಿಶೇಷ ನ್ಯಾಯಾಲಯವು 30 ವರ್ಷದ ಜೈಲು ಶಿಕ್ಷೆ, ₹ 1ಲಕ್ಷ ದಂಡ ವಿಧಿಸಿದೆ.
2023ರ ಜು.15ರಂದು ಬಾಲಕಿಯ ಪೋಷಕರಿಲ್ಲದ ವೇಳೆ ಘಟನೆ ನಡೆದಿತ್ತು. ನಂತರ ಆಕೆ ನೀಡಿದ ಮಾಹಿತಿ ಮೇರೆಗೆ ತಾಯಿಯು ದೂರು ನೀಡಿದ್ದರು. ಬನ್ನೂರು ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಆನಂದ್ ಪಿ.ಹೊಗಾಡೆ ಶಿಕ್ಷೆ ಪ್ರಕಟಿಸಿದರು. ದಂಡದ ಪೂರ್ತಿ ಹಣ ಹಾಗೂ ಸರ್ಕಾರದಿಂದ ₹ 6 ಲಕ್ಷವನ್ನು ಪರಿಹಾರ ರೂಪದಲ್ಲಿ ಪಡೆಯಲು ಬಾಲಕಿ ಅರ್ಹಳು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.