ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ-ಸರ್ಕಾರದ ಪ್ರೋತ್ಸಾಹ ಹೆಚ್ಚಲಿ: ಪ್ರೊ.ಕೆ.ಎಸ್‌.ರಂಗಪ್ಪ

ಕೃತಿಚೌರ್ಯ ತಡೆಗಟ್ಟುವಿಕೆ ಕಾರ್ಯಾಗಾರ: ವಿಶ್ರಾಂತ ಕುಲ‍ಪತಿ ಪ್ರೊ.ಕೆ.ಎಸ್‌.ರಂಗಪ್ಪ ಪ್ರತಿಪಾದನೆ
Last Updated 7 ಡಿಸೆಂಬರ್ 2022, 11:26 IST
ಅಕ್ಷರ ಗಾತ್ರ

ಮೈಸೂರು:‘ವಿಶ್ವವಿದ್ಯಾಲಯಗಳ ಸಂಶೋಧನೆಗಳಿಗೆ ಸರ್ಕಾರದ ಪ್ರೋತ್ಸಾಹ ಕಡಿಮೆಯಾಗಿದೆ. ಮೊದಲಿನಂತೆ ಫೆಲೋಶಿಪ್‌ಗಳು ಸಿಗುತ್ತಿಲ್ಲ. ಹೀಗಾಗಿಯೇ ಸಂಶೋಧಕರು ಉತ್ಸುಕತೆ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರೋತ್ಸಾಹ ಹೆಚ್ಚಿಸಬೇಕು’ ಎಂದುವಿಶ್ರಾಂತ ಕುಲ‍ಪತಿ ಪ್ರೊ.ಕೆ.ಎಸ್‌.ರಂಗಪ್ಪ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯಲ್ಲಿ ಸಿಎಸ್‌ಐಆರ್‌– ಯುಜಿಸಿ ನೆಟ್‌ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಘಟಕ (ಐಕ್ಯುಎಸಿ) ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಕೃತಿಚೌರ್ಯ ತಡೆಗಟ್ಟುವಿಕೆ: ಗುಣಾತ್ಮಕ ಮಹಾಪ್ರಬಂಧದ ರಚನೆಯತ್ತ ಮೊದಲ ಹೆಜ್ಜೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮೈಸೂರು ವಿಶ್ವವಿದ್ಯಾಲಯವು ಹೆಸರು ಗಳಿಸಲು ಇಲ್ಲಿನ ಸಂಶೋಧನೆಗಳು ಹಾಗೂ ಸಂಶೋಧಕರು ಕಾರಣ. ಆದರೆ, ಈ ಕ್ಷೇತ್ರಕ್ಕೆ ಬರುವವವರು ಕಡಿಮೆಯಾಗಿದ್ದಾರೆ. ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಮಂಡನೆಯಾಗುತ್ತಿಲ್ಲ. ಐಐಎಂ, ಐಐಎಸ್‌ಸಿಗಳಿಗೆ ನೀಡುವ ಪ್ರಾಶಸ್ತ್ಯವನ್ನೇ ರಾಜ್ಯದ ವಿಶ್ವವಿದ್ಯಾಲಯಗಳಿಗೂ ಸರ್ಕಾರ ನೀಡಬೇಕು’ ಎಂದರು.

‘ಸಂಶೋಧನೆ ಹಾಗೂ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡುವ ದೇಶ ಸೂಪರ್‌ ಪವರ್‌ ಆಗುತ್ತದೆ. ಜಪಾನ್‌, ಚೀನಾ ದೇಶಗಳು ಕಡಿಮೆ ಸಮಯದಲ್ಲಿ ಬೆಳೆಯಲು ‘ಆರ್‌ ಅಂಡ್‌ ಡಿ’ಗೆ ನೀಡಿದ ಆದ್ಯತೆಯೇ ಕಾರಣ’ ಎಂದು ಉದಾಹರಿಸಿದರು.

ಬೋಧನೆ ಬಿಡಬೇಡಿ: ‘ನೊಬೆಲ್‌ ಪ್ರಶಸ್ತಿ ಪುರಸ್ಕೃತರಲ್ಲಿ ಶೇ 90ರಷ್ಟು ಮಂದಿ ಬೋಧಕರಾಗಿದ್ದರು. ಸಂಶೋಧನೆ ಹಾಗೂ ಬೋಧನೆಯಿಂದಲೇ ಹೆಸರು ಮಾಡಿದ್ದರು. ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದವರು ಹೆಚ್ಚು ಸೃಜನಶೀಲರಾಗಿರುತ್ತಾರೆ. ಅವರಿಗೆ ವಿಶ್ವವಿದ್ಯಾಲಯ ಹಾಗೂ ಯುಜಿಸಿ ಪ್ರೋತ್ಸಾಹ ನೀಡಬೇಕು. ಸಂಶೋಧನೆ ಮಾಡುವವರು ಬೋಧನೆಯನ್ನು ಬಿಡಬಾರದು’ ಎಂದು ರಂಗಪ್ಪ ಸಲಹೆ ನೀಡಿದರು.

‘ಜೆಎಸ್‌ಎಸ್‌ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಸಂಶೋಧನೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಿವೆ. ನ್ಯಾಕ್‌ ಶ್ರೇಯಾಂಕ ನಿರ್ಧಾರವಾಗುವುದು ವಿಶ್ವವಿದ್ಯಾಲಯದ ಸಂಶೋಧನೆಗಳಿಂದ ಎಂಬುದನ್ನು ಅಧಿಕಾರಿಗಳು ಹಾಗೂ ಆಳುವವರು ಮನಗಾಣಬೇಕು. ಪಾಶ್ಚಾತ್ಯ ರಾಷ್ಟ್ರಗಳಿಗೆ ಸ್ಪರ್ಧೆ ನೀಡುವಂತೆ ಸಂಪನ್ಮೂಲ ವ್ಯಕ್ತಿಗಳನ್ನು ವಿಶ್ವವಿದ್ಯಾಲಯಗಳು ಸೃಷ್ಟಿಸಬೇಕು’ ಎಂದರು.

ಪ್ರಭಾರ ಕುಲಪತಿ ಪ್ರೊ.ಎಚ್‌.ರಾಜಶೇಖರ್‌, ವಿಜ್ಞಾನಿ ಪ್ರೊ.ಕೆ.ಆರ್‌.ಶಿವಣ್ಣ, ಪ್ರೊ.ಮುಜಾಫರ್‌ ಅಸಾದಿ, ಪ್ರೊ.ಎಚ್‌.ಟಿ.ಬಸವರಾಜಪ್ಪ, ಪ್ರೊ.ಟಿ.ಆರ್‌.ಮಾರುತಿ, ಪ್ರೊ.ಎಸ್‌.ಮದಿಅಳಗನ್‌, ಪ್ರೊ.ಬಿ.ಶಂಕರ್‌, ಐಕ್ಯುಎಸಿ ನಿರ್ದೇಶಕ ಪ್ರೊ.ಕೆ.ಎನ್‌.ಅಮೃತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT