ಮೈಸೂರು: ‘ಪರಿಶಿಷ್ಟರ ಮೀಸಲಾತಿಗೆ ಕೆನೆಪದರ ನೀತಿ ಅಗತ್ಯವಿಲ್ಲ. ಇದರ ಅಳವಡಿಕೆ ವಿರುದ್ಧ ಹೋರಾಟ ಹಾಗೂ ಜಾಗೃತಿ ಅಭಿಯಾನ ನಡೆಸಲಿದ್ದೇವೆ’ ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಒಕ್ಕೊರಲಿನ ನಿರ್ಣಯ ಕೈಗೊಂಡರು.
ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಸೇರಿದ ಮುಖಂಡರು, ‘ಇತ್ತೀಚೆಗೆ ಸುಪ್ರೀಂಕೋರ್ಟ್ ಒಳ ಮೀಸಲಾತಿ ಸಂಬಂಧ ನೀಡಿರುವ ತೀರ್ಪಿನಲ್ಲಿ ಕೆನೆಪದರ ಅಳವಡಿಸಿ, ಮೀಸಲಾತಿ ಸೌಲಭ್ಯ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವುದು ಸರಿಯಲ್ಲ. ಸಾಮಾಜಿಕವಾಗಿ ಇನ್ನೂ ಶೋಷಣೆಗೊಳಗಾಗುತ್ತಿರುವ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಕೆನೆಪದರ ನೀತಿ ಅನ್ವಯಿಸಬಾರದು’ ಎಂದು ಆಗ್ರಹಿಸಿದರು.
‘ಸಂವಿಧಾನದಲ್ಲಿಯೇ ಇಲ್ಲದಂತಹ ಕೆನೆಪದರ ಎಂಬ ಪದ ಸೃಷ್ಟಿಸಲಾಗಿದೆ. ಇದು ಆರ್‌ಎಸ್‌ಎಸ್ ಅಜೆಂಡಾ. ಪರಿಶಿಷ್ಟರನ್ನು ಮೀಸಲಾತಿಯಿಂದ ವಂಚಿಸಲು ಮಾಡಿರುವ ಹುನ್ನಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಒಳ ಮೀಸಲಾತಿಗೆ ಜಾರಿಗೆ ಯಾವುದೇ ತಕರಾರಿಲ್ಲ. ಆದರೆ, ಕೆನೆಪದರ ನೀತಿ ಒಳ ಮೀಸಲಾತಿಯಲ್ಲಿ ಅನ್ವಯವಾಗಬಾರದು. ದಲಿತ ಸಮುದಾಯಗಳು ಆರ್ಥಿಕವಾಗಿ ಸಬಲರಾಗಿದ್ದರೂ ಸಾಮಾಜಿಕವಾಗಿ ಅತ್ಯಂತ ಕೆಳಮಟ್ಟದಲ್ಲಿವೆ ಎಂಬುದನ್ನು ಪರಿಗಣಿಸಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಸಾಮಾಜಿಕ ಅಸಮಾನತೆ ಇರುವವರೆಗೂ ಮೀಸಲಾತಿ ಇರಲೇಬೇಕು. ಅಲ್ಲದೆ ಮೀಸಲಾತಿಯನ್ನು ಎಲ್ಲಾ ಜಾತಿ-ಸಮುದಾಯಗಳು ಪಡೆಯುತ್ತಿವೆ. ಆದರೆ ಪರಿಶಿಷ್ಟ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿಯ ಮೇಲೆಯೇ ಎಲ್ಲರ ದೃಷ್ಟಿ’ ಎಂದು ಬೇಸರ ವ್ಯಕ್ತಪಡಿಸಿದರು.
ಎನ್.ಭಾಸ್ಕರ್ ಮಾತನಾಡಿ, ‘ಪರಿಶಿಷ್ಟ ಜಾತಿ ಸಮುದಾಯಗಳ ಒಳ ಮೀಸಲಾತಿ ಜಾರಿಯಲ್ಲಿ ಕೆನೆಪದರ ನೀತಿ ಪರಿಗಣಿಸದಂತೆ ಮುಖ್ಯಮಂತ್ರಿಗಳಿಗೆ ದಲಿತ ಸಂಘಟನೆಗಳು ಒಟ್ಟಾಗಿ ಸೇರಿ ಮನವಿ ಮಾಡಬೇಕು. ಹಾಗೆಯೇ ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೆನೆಪದರ ನೀತಿ ಏನೆಂಬುದನ್ನು ಸಮುದಾಯದ ಜನರಿಗೆ ತಿಳಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಒಳ ಮೀಸಲಾತಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಲೇಖಕ ಸಿದ್ದಸ್ವಾಮಿ, ಮೈಸೂರು ವಿಶ್ಚವಿದ್ಯಾಲಯ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್, ಸಹಾಯಕ ಪ್ರಾಧ್ಯಾಪಕ ಜ್ಞಾನಪ್ರಕಾಶ್, ಲೇಖಕ ಟಿ.ಅರಕ್‌ಕುಮಾರ್, ಡಿಎಸ್‌ಎಸ್ ಮುಖಂಡರಾದ ಶಂಭು, ಕನಕರಾಜು, ಮೈಸೂರು ನಗರ ಎಸ್‌ಸಿ ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ, ರಾಜ್ಯ ನಾಯಕರ ಸಂಘದ ಅಧ್ಯಕ್ಷ ದ್ಯಾವಪ್ಪನಾಯಕ, ಮಾದಿಗ ಸಮಾಜದ ಮುಖಂಡ ಶಿವಪ್ರಸಾದ್, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೆ.ಮುರಳಿ, ರೈಲ್ವೆ ಎಸ್‌ಸಿ ಸಹಕಾರ ಬ್ಯಾಂಕ್ ನಿರ್ದೇಶಕ ಆನಂದ್, ಪಡುವಾರಹಳ್ಳಿ ಅಂಬೇಡ್ಕರ್ ಹವ್ಯಾಸಿ ಸಂಘದ ಸತೀಶ್ ಕುಮಾರ್, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಕೆ.ಎಂ.ರೇವಣ್ಣ, ಮುಖಂಡರಾದ ಪಾಂಡು, ನವೀನ್ ಕುಮಾರ್, ಸಿ.ವಿಜಯ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.