ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವೆ: ಎಂ.ಲಕ್ಷ್ಮಣ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಪ್ರಚಾರ
Published 5 ಏಪ್ರಿಲ್ 2024, 6:24 IST
Last Updated 5 ಏಪ್ರಿಲ್ 2024, 6:24 IST
ಅಕ್ಷರ ಗಾತ್ರ

ಮೈಸೂರು: ‘ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಲು ಸಿದ್ಧವಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು ಹಾಗೂ ಜನರ ಸೇವೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಕೋರಿದರು.

ನಗರದ ನ್ಯಾಯಾಲಯ ಆವರಣ ಹಾಗೂ ಸಭಾಂಗಣದಲ್ಲಿ ಗುರುವಾರ ವಕೀಲರಿಂದ ಮತಯಾಚಿಸಿದ ವೇಳೆ ಅವರು ಮಾತನಾಡಿದರು.

‘ನಾನು ಗೆದ್ದರೆ ಸಂಸತ್ತಿನಲ್ಲಿ ಸುಮ್ಮನೆ ಕುಳಿತು ಬರುವುದಿಲ್ಲ. ರಾಜ್ಯದ ಜನರ ಪರವಾಗಿ ಮತ್ತು ಅಭಿವೃದ್ಧಿಗಾಗಿ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಬರೋಬ್ಬರಿ ₹3,800 ಕೋಟಿ ಅನುದಾನ ನೀಡಿದ್ದರು. ಜಯದೇವ ಆಸ್ಪತ್ರೆ, ಕಾಂಕ್ರೀಟ್ ರಸ್ತೆ, ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯ ನಿರ್ಮಾಣ ಹೀಗೆ... ಸಾಕಷ್ಟು ಅಭಿವೃದ್ಧಿಗೆ ಅವರು ಕಾರಣವಾಗಿದ್ದಾರೆ. ಮೈಸೂರು ಮತ್ತು ಕೊಡಗು ಜಿಲ್ಲೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮವಾದ ಸ್ಥಳವಾಗಿದೆ. ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುವುದಕ್ಕೂ ಅವಕಾಶವಿದೆ’ ಎಂದು ಹೇಳಿದರು.

ಕಟ್ಟ ಕಡೆಯ ವ್ಯಕ್ತಿಗಾಗಿ: ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಶೇಠ್ ಮಾತನಾಡಿ, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ನಡೆಸುತ್ತಿದೆ. ಬಡತನ ನಿರ್ಮೂಲನೆಗೆ ಶ್ರಮಿಸುತ್ತಿದೆ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಲು ಕಾರ್ಯಕ್ರಮ ರೂಪಿಸಿದೆ. ಎಲ್ಲರಿಗೂ ಶಿಕ್ಷಣವನ್ನು ದೊರಕಿಸಲು ಸಂವಿಧಾನದ ಆಶಯದಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದಕ್ಕೆ ಜನರು ಶಕ್ತಿ ತುಂಬಬೇಕು’ ಎಂದು ಕೋರಿದರು.

‘ನಮ್ಮ ಅಭ್ಯರ್ಥಿ ಲಕ್ಷ್ಮಣ ಅವರು ಮೈಸೂರಿನ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡಿದರೆ, ಜನಸಾಮಾನ್ಯರ ಪರ ಕೆಲಸ ಮಾಡುತ್ತಾರೆ’ ಎಂದು ತಿಳಿಸಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷರಾದ ಚಂದ್ರಶೇಖರ್, ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ವಕೀಲ ಚಂದ್ರಮೌಳಿ, ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಪಾಲ್ಗೊಂಡಿದ್ದರು.

ನಂತರ ಲಕ್ಷ್ಮಣ ಅವರು, ಬಿಇಎಂಎಲ್‌ ಬಳಿ ಅಲ್ಲಿನ ಕಾರ್ಮಿಕರಿಂದ ಮತ ಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT