ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು | 3 ವರ್ಷಗಳಿಂದ ನಡೆಯದ ರಸ್ತೆಗಳ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

Published 21 ಜೂನ್ 2024, 8:03 IST
Last Updated 21 ಜೂನ್ 2024, 8:03 IST
ಅಕ್ಷರ ಗಾತ್ರ

ಹುಣಸೂರು: ಕಳೆದ ಮೂರು ವರ್ಷದಿಂದ ನಗರ ವ್ಯಾಪ್ತಿಯ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯದಿರುವ ಕಾರಣ ದೊಡ್ಡ ಗುಂಡಿಗಳು ಬಿದ್ದಿದೆ. ವಾಹನಗಳ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಜನ ಸಾಮಾನ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರಸ್ತೆಗಳಲ್ಲಿ ವಾಹನಗಳ ಸವಾರರಿಗೆ ಚಾಲನೆ ದೊಡ್ಡ ಸವಾಲಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಭೀತಿಯಿಂದ ಓಡಾಡಬೇಕಾಗಿದೆ. ಆದರೂ ನಗರಸಭೆ ವ್ಯಾಪ್ತಿಯ ರಸ್ತೆ ನಿರ್ವಹಣೆಗೆ ನಗರಸಭೆಯಲ್ಲಿ ಯಾವುದೇ ಅನುದಾನ ಈವರೆಗೂ ಮೀಸಲಿಡಲು ಜನಪ್ರತಿನಿಧಿಗಳು ಮುಂದಾಗಿಲ್ಲ.

ನಗರದ ಪ್ರಮುಖ ರಸ್ತೆಗಳಾದ ಕಾರ್ಖಾನೆ ರಸ್ತೆ, ಝಾನ್ಸಿ ರಾಣಿ ಲಕ್ಷ್ಮಿಭಾಯಿ ರಸ್ತೆ, ಸಿಲ್ವರ್ ಜುಬಿಲಿ ರಸ್ತೆ, ಉಪವಿಭಾಗಾಧಿಕಾರಿ ಕಚೇರಿ, ಶಬ್ಬೀರ್ ನಗರ ರಸ್ತೆ ಸಂಪರ್ಕಿಸುವ ರಸ್ತೆಗೆ ಡಾಂಬರೀಕರಣವಾಗದೆ ದಶಕಗಳು ಕಳೆದಿವೆ. ಇತ್ತೀಚೆಗೆ ಸಂವಿಧಾನ ವೃತ್ತದಿಂದ ಎಚ್.ಡಿಕೋಟೆ ವೃತ್ತ ಚಿಕ್ಕಹುಣಸೂರು ಬಡಾವಣೆವರೆಗೆ ನಿರ್ಮಾಣವಾದ ಜೋಡಿ ರಸ್ತೆ ಅವೈಜ್ಞಾನಿಕವಾಗಿದ್ದು, ಸ್ಥಳೀಯ ನಿವಾಸಿಗರು ಮತ್ತು ವರ್ತಕರು ತೊಂದರೆ ಅನುಭವಿಸುತ್ತಿದ್ದಾರೆ.

‘ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 2011ರ ಜನಗಣತಿ ಅನ್ವಯ 50,865 ಜನರು ವಾಸಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಲಭ್ಯ ಕಲ್ಪಿಸುವ ದಿಕ್ಕಿನಲ್ಲಿ ನಗರಸಭೆ ರೂಪಿಸುವ ಬಜೆಟ್ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇಲ್ಲ. ನಗರಸಭೆ ಅಧ್ಯಕ್ಷರ ಕುರ್ಚಿ ಬದಲಾವಣೆ ಆಗುತ್ತಿರುವುದು ಸಮಸ್ಯೆಗಳ ಕೂಪವಾಗಲು ಮೂಲವಾಗಿದೆ’ ಎನ್ನುವರು ನಗರ ನಿವಾಸಿ ವಿಶ್ವನಾಥ್.

‘ಕಾರ್ಖಾನೆ ರಸ್ತೆಯಲ್ಲಿ ಈ ಹಿಂದೆ ವಾಹನ ನಿಲುಗಡೆಗೆ ಪೊಲೀಸರು ಕೈಗೊಂಡಿದ್ದ ಪಾರ್ಕಿಂಗ್ ವ್ಯವಸ್ಥೆ ಗಾಳಿಗೆ ತೂರಲಾಗಿದೆ. ತಳ್ಳುವ ಗಾಡಿ ವ್ಯಾಪಾರಿಗಳ ಎಗ್ಗಿಲ್ಲದಂತೆ ರಸ್ತೆ ಮಧ್ಯದಲ್ಲೇ ವ್ಯಾಪಾರ ನಡೆಸುವ ಪರಿಸ್ಥಿತಿ ಇದೆ. ಆದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದು, ವಾಹನ ಸಂಚಾರ ಅಯೋಮಯವಾಗಿದೆ’ ಎಂದು ನಗರ ನಿವಾಸಿ ಗಿರೀಶ್ ಹೇಳಿದರು.

ಹುಣಸೂರು ನಗರ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ರಸ್ತೆಗಳ ಗುಂಡಿಮಯವಾಗಿರುವುದು
ಹುಣಸೂರು ನಗರ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ರಸ್ತೆಗಳ ಗುಂಡಿಮಯವಾಗಿರುವುದು
ಕಾಮಗಾರಿ ತಡೆಗೆ ಸೂಚನೆ
‘ನಗರೋತ್ಥಾನ ಯೋಜನೆಯಲ್ಲಿ ಪ್ರತಿ ವಾರ್ಡ್ ರಸ್ತೆ ದುರಸ್ತಿ ಕಾಮಗಾರಿಗೆ ₹ 30 ಲಕ್ಷದಂತೆ ಒಟ್ಟು ₹ 10 ಕೋಟಿ ಅನುದಾನ ಮೀಸಲಿಡಲಾಗಿದೆ. ದುರಸ್ತಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದು ಈ ಹಿಂದಿನ ಸಾಲಿನ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಸರ್ಕಾರ ಟೆಂಡರ್ ಪೂರ್ಣವಾಗಿರುವ ಕಾಮಗಾರಿ ತಡೆಗೆ ಸೂಚಿಸಿದೆ’ ಎಂದು ನಗರಸಭೆ ಎಇಇ ಶರ್ಮಿಳಾ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ಐದು ವರ್ಷದಲ್ಲಿ ಐವರು ಅಧ್ಯಕ್ಷರು
‘ನಗರಸಭೆ ಕಳೆದ ಐದು ವರ್ಷದಲ್ಲಿ ಐವರು ಅಧ್ಯಕ್ಷರನ್ನು ಕಂಡಿದ್ದರೂ ನಗರ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಯೋಜನೆ ರೂಪಗೊಂಡಿಲ್ಲ. ಸರ್ಕಾರದ ಅನುದಾನ ವಾಮ ಮಾರ್ಗದಲ್ಲಿ ಕಬಳಿಸುವ ಹುನ್ನಾರಕ್ಕೆ ಆದ್ಯತೆ ನೀಡಲಾಗಿದ್ದು ಅವ್ಯವಸ್ಥೆಯ ಕೂಪವಾಗಿದೆ’ ಎಂದು ನಗರಸಭೆ ಸದಸ್ಯ ರಮೇಶ್ ದೊಡ್ಡಹೆಜ್ಜೂರು ಆರೋಪಿಸಿದರು.
ಅನುದಾನ ಬಳಕೆಯಾಗಲಿ
‘ನಗರಸಭೆ ಸಂಗ್ರಹಿಸುವ ವಾರ್ಷಿಕ ತೆರಿಗೆ ಹಣದಲ್ಲಿ ನಿಯಮಾನುಸಾರ ರಸ್ತೆ ದುರಸ್ತಿಗೆ ಇಂತಿಷ್ಟು ಹಣ ಮೀಸಲಿಡುವ ಅವಕಾಶವಿದೆ. ನಗರಸಭೆ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಅನುದಾನ ಬಳಸಿ ರಸ್ತೆ ದುರಸ್ತಿಗೊಳಿಸಿ ನಾಗರಿಕರ ಹಿತ ಕಾಯಬೇಕು’ ಎಂದು ನಗರ ನಿವಾಸಿ ಶ್ರೀಕಾಂತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT