ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಪ್ಪಗೆ ‘ರೋಟರಿ ಸೈನಿಕ್‌ ದೇಶ್‌ ರತ್ನ’ ಪ್ರಶಸ್ತಿ

Last Updated 23 ಫೆಬ್ರುವರಿ 2023, 4:42 IST
ಅಕ್ಷರ ಗಾತ್ರ

ಮೈಸೂರು: ರೋಟರಿ ಮೈಸೂರು ಮಿಡ್‌ಟೌನ್‌ ಮತ್ತು ಶ್ರೀಸೈನಿಕ್‌ ಪ್ರತಿಷ್ಠಾನದಿಂದ ರಾಷ್ಟ್ರೀಯ ಭದ್ರತಾ ಪಡೆಯ ಉಗ್ರಗಾಮಿ ಪ್ರತಿರೋಧ ತಂಡದ ಫೋರ್ಸ್‌ ಕಮಾಂಡರ್‌ ಬ್ರಿಗೇಡಿಯರ್‌ ಬಿ.ಎಂ.ಕಾರ್ಯಪ್ಪ ಅವರಿಗೆ ‘ರೋಟರಿ ಸೈನಿಕ್‌ ದೇಶ್‌ ರತ್ನ’ ಪ್ರಶಸ್ತಿ ನೀಡಿ ಪ್ರದಾನ ಮಾಡಲಾಯಿತು.

ಇಲ್ಲಿನ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಕರ್ನಲ್‌ ರವಿ ಶಿರಹಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಅವರು, ‘ಕಾರ್ಗಿಲ್‌ ಯುದ್ಧದ ವಿಜಯದಲ್ಲಿ ಕಾರ್ಯಪ್ಪ ಅವರ ಸಾಧನೆ ಸ್ಮರಣಾರ್ಹ. ವಿಶೇಷ ಶ್ರಮ ಮತ್ತು ಸಾಧನೆ ಬೇಡುವ ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅವರ ಕಾರ್ಯಕ್ಷಮತೆ ಯುವ ಸೈನಿಕರಿಗೆ ಮಾದರಿ’ ಎಂದರು.

‘ಸೈನ್ಯದಲ್ಲಿ ಸೇವೆ ಸಲ್ಲಿಸುವವರು ಎಂತಹ ಪರಿಸ್ಥಿತಿಯಲ್ಲಿದ್ದರೂ ತ್ಯಾಗಕ್ಕೆ ಸಿದ್ಧರಾಗಬೇಕು. ಕರುಣೆಯೇ ಇಲ್ಲ ಎಂಬಂತೆ ಯುದ್ಧ ಮಾಡಬೇಕು. ಇಂತಹ ವೈರುಧ್ಯಗಳ ನಡುವೆ ಜೀವಿಸುವುದರಿಂದಲೇ ಇದನ್ನು ಯಾರು ವೃತ್ತಿ ಎನ್ನುವುದಿಲ್ಲ. ದೇಶ ಸೇವೆ ಎನ್ನುತ್ತಾರೆ. ಆದ್ದರಿಂದಲೇ ನಿವೃತ್ತಿಯ ನಂತರವೂ ಹುದ್ದೆಯ ಗೌರವ ಹಾಗೆಯೇ ಉಳಿದುಕೊಳ್ಳುತ್ತದೆ’ ಎಂದರು.

ಬ್ರಿಗೇಡಿಯರ್‌ ಕಾರ್ಯಪ್ಪ ಮಾತನಾಡಿ ಕಾರ್ಗಿಲ್‌ ಯುದ್ಧದ ಸನ್ನಿವೇಶಗಳನ್ನು ನೆನಪಿಸಿಕೊಂಡರು. ‘ಖಲುಬಾರ್‌ ಬೆಟ್ಟದ ಕಣಿವೆ ವಶಪಡಿಸಿಕೊಳ್ಳುವ ಭಾರತೀಯ ಸೇನೆಯ ಎರಡು ಪ್ರಯತ್ನಗಳು ವಿಫಲವಾಗಿತ್ತು. ಮೂರನೇ ಪ್ರಯತ್ನ ನನ್ನ ನೇತೃತ್ವದ ತಂಡಕ್ಕೆ ನೀಡಲಾಗಿತ್ತು. ಪುಸ್ತಕದಲ್ಲಿರುವ ಮಾದರಿಗೆ ಭಿನ್ನವಾದ ಹೋರಾಟ ತಂತ್ರ ರೂಪಿಸಿ ಗೆಲುವನ್ನು ಪಡೆಯಲಾಗಿತ್ತು’ ಎಂದು ಹೇಳಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್‌.ನವೀನ್‌ಚಂದ್ರ, ಎಸ್‌.ಕುಮಾರಸ್ವಾಮಿ, ಕೆ.ವಿ.ಭಾಸ್ಕರ್‌, ಜಿ.ಮಧುರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT