ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಉಳಿವಿಗೆ ಕಾಂಗ್ರೆಸ್‌ ಬೆಂಬಲಿಸಿ: ಸತೀಶ ಜಾರಕಿಹೊಳಿ ಮನವಿ

ಪರಿಶಿಷ್ಟ ಪಂಗಡದ ಮುಖಂಡರ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮನವಿ
Published 13 ಏಪ್ರಿಲ್ 2024, 14:20 IST
Last Updated 13 ಏಪ್ರಿಲ್ 2024, 14:20 IST
ಅಕ್ಷರ ಗಾತ್ರ

ಮೈಸೂರು: ‘ಪರಿಶಿಷ್ಟ ಪಂಗಡದವರು ಸಂವಿಧಾನಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೋರಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪರಿಶಿಷ್ಟ ಪಂಗಡದ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಧರ್ಮದ ರಕ್ಷಣೆಯ ಹೆಸರಿನಲ್ಲಿ ಅಧಿಕಾರ ಮಾಡುವವರಿಗಿಂತ ಬದುಕಿನ ರಕ್ಷಣೆ ಮಾಡುವವರು ಮುಖ್ಯವಾಗುತ್ತಾರೆ. ಇದನ್ನು ಗಮನಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗಗಳ ಜನರ ಬದುಕು ಹಸನಾಗಿದೆ. ಈ ಕಾರಣದಿಂದ ಸಮಾಜದ ನಾವೆಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕು’ ಎಂದರು.

‘ಧರ್ಮ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಬಿಜೆಪಿ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ನಾವು ಬದುಕಿದರೆ ದೇಶ ಉಳಿಯುತ್ತದೆ ಎಂಬುದನ್ನು ಮತದಾರರು ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

‘ಪರಿಶಿಷ್ಟ ಪಂಗಡದವರಿಗೆ ನಮ್ಮ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲಾಗಿದೆ. ಕೆಎಐಡಿಬಿಯಿಂದ ಶೇ 50ರಷ್ಟು ರಿಯಾಯಿತಿ ದರದಲ್ಲಿ ಭೂಮಿ ನೀಡಲಾಗುತ್ತಿದೆ. ಕೆಎಸ್‌ಎಫ್‌ಸಿಯಲ್ಲಿ ₹10 ಕೋಟಿವರೆಗೂ ಸಾಲ ನೀಡುತ್ತಿರುವುದರಿಂದ ಈ ಸಮಾಜದವರು ಕೈಗಾರಿಕೋದ್ಯಮಿಗಳು ಆಗುತ್ತಿದ್ದಾರೆ’ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ನಾಯಕ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಮುಗಿದ ಬಳಿಕ ಮತ್ತೊಂದು ಸಭೆ ಕರೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಯವರೇ ಆಗಿರುವ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ಸರ್ಕಾರದಲ್ಲಿ ಸಮಾಜದವರಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿದೆ’ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು, ‘ನಾಯಕ ಸಮಾಜದ ಜನಸಂಖ್ಯೆ ಜಾಸ್ತಿ ಇದ್ದರೂ ಸಮಸ್ಯೆಗಳು ಬಹಳಷ್ಟಿವೆ. ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು. ಈ ಭಾಗದ ಸಮಾಜದವರು ಸತೀಶ ಜಾರಕಿಹೊಳಿ ನಾಯಕತ್ವವನ್ನು ನಂಬಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆಂಬ ನಿರೀಕ್ಷೆಯಿಂದ ಬೆಂಬಲಿಸುತ್ತಿದ್ದೇವೆ. ಮುಂದೆ ಮುಖ್ಯಮಂತ್ರಿ ಅಗುವ ಅವಕಾಶ ಬರುವುದರಿಂದ ಇಡೀ ಸಮಾಜ ಬೆಂಬಲಿಸುತ್ತದೆ’ ಎಂದು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ಪಂಗಡದ ಮುಖಂಡರು
ಸಭೆಯಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ಪಂಗಡದ ಮುಖಂಡರು

ಮುಖಂಡ ಕೆಲ್ಲಂಬಳ್ಳಿ ಶ್ರೀನಿವಾಸ ನಾಯಕ ಹಾಗೂ ರಮ್ಮನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ‘ಈ ಭಾಗದ ಸಮಾಜದ ಮುಖಂಡರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಸಂವಿಧಾನವನ್ನು ಒಪ್ಪಿಕೊಂಡು ನಡೆಯುತ್ತಿದ್ದೇವೆ. ಅದು ನಮಗೆ ರಕ್ಷಣೆ ನೀಡುತ್ತಿದೆ. ಅದನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ
-ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT