ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕಳೆಗಟ್ಟಲಿದೆ ‘ವಿಜ್ಞಾನ ನಾಟಕೋತ್ಸವ’

ನಾಳೆಯಿಂದ 23ರವರೆಗೆ ರಂಗ ಹಬ್ಬ l ರಮಾಗೋವಿಂದ ರಂಗ ಮಂದಿರ ಸಜ್ಜು
Published 19 ಜೂನ್ 2024, 5:35 IST
Last Updated 19 ಜೂನ್ 2024, 5:35 IST
ಅಕ್ಷರ ಗಾತ್ರ

ಮೈಸೂರು: ವೈಜ್ಞಾನಿಕ ಆಲೋಚನೆಗಳನ್ನು ಕಲೆ ಮೂಲಕ ಹೇಳುವ, ವಿಜ್ಞಾನದ ಪಾಠಗಳನ್ನು ರಂಗದ ಪಾತ್ರಗಳ ಮೂಲಕ ಸರಳವಾಗಿ ದಾಟಿಸಿ, ಸಹೃದಯರ ಮನಗೆದ್ದಿರುವ ‘ಮೈಸೂರು ವಿಜ್ಞಾನ ನಾಟಕೋತ್ಸವ’ ಇದೇ 20ರಿಂದ ನಗರದಲ್ಲಿ ಗರಿಗೆದರಲಿದೆ.

ರಾಮಕೃಷ್ಣನಗರದ ‘ರಮಾ ಗೋವಿಂದ ರಂಗಮಂದಿರ’ದಲ್ಲಿ ‘ಪರಿವರ್ತನ ರಂಗಸಮಾಜ’, ‘ಕಲಾಸುರುಚಿ ಮೈಸೂರು’, ‘ಕುತೂಹಲಿ’ ಹಾಗೂ ‘ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್’ ಸಹಯೋಗದಲ್ಲಿ ‘ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್’ ಆಯೋಜಿಸಿರುವ ನಾಟಕೋತ್ಸವ ಜೂನ್ 23ರವೆರೆಗೆ ನಡೆಯಲಿದ್ದು, ಬೆಂಗಳೂರಿನ ‘ದಿ ಅಕಾಡೆಮಿ ಟ್ರಸ್ಟ್’ನ ಕಾರ್ಯದರ್ಶಿ ಶುಭಾಂಕರ್ ಬಿಸ್ವಾಸ್ ಉದ್ಘಾಟಿಸಲಿದ್ಧಾರೆ.

ನಿತ್ಯ ಸಂಜೆ 6.30ಕ್ಕೆ ನಾಟಕಗಳು ನಡೆಯಲಿದ್ದು, ಸರಗೂರಿನ ವಿವೇಕ ರಂಗ ಕಲಾವಿದರು ಜೂನ್ 20ರಂದು ಅಭಿನಯಿಸುವ ‘ವಿಜ್ಞಾನ ವಿಕಾಸ–ವಾದ’, 21ರಂದು ಧಾರವಾಡದ ಅಭಿನಯ ಭಾರತಿ ಕಲಾವಿದರು ‘ಎಸಿ ವರ್ಸಸ್‌ ಡಿಸಿ’, 22ರಂದು ಅರಿವು ರಂಗ ತಂಡದವರಿಂದ ‘ಹಸಿರೇ ಹೊನ್ನು’ ಹಾಗೂ 23ರಂದು ‘ಪರಿವರ್ತನ ರಂಗ ಸಮಾಜ’ ತಂಡದವರು ‘ಗೆಲಿಲಿಯೋಸ್‌ ಡಾಟರ್’ ಇಂಗ್ಲಿಷ್ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ನಾಟಕೋತ್ಸವದ ಭಾಗವಾಗಿ ನಿತ್ಯ 5.45ರಿಂದ 6.30ರ ವರೆಗೆ ರಂಗಮಂದಿರದ ಆವರಣದಲ್ಲಿ ‘ವಿಜ್ಞಾನ ನಾಟಕ ಪಠ್ಯದ ಸ್ವಗತಗಳು’ ಹಾಗೂ ‘ವಿಜ್ಞಾನ ಗೀತೆಗಳು’ ಪ್ರಸ್ತುತಿ ಈ ಬಾರಿಯ ವಿಶೇಷ.

‘ಸಂಗೀತ ಹಾಗೂ ನೃತ್ಯ ಬೆರೆಯುವಂತೆ ಕಲೆ ಹಾಗೂ ವಿಜ್ಞಾನ ಸಂಯೋಜಿಸುವ ಪ್ರಯೋಗವನ್ನು 2016ರಿಂದಲೂ ಉತ್ಸವದ ಮೂಲಕ ನಡೆಸಿದ್ದೇವೆ. ಕಲೆಯು ವೈಚಾರಿಕ ಮನೋಭವವನ್ನು ಕೊಡುತ್ತದೆ’ ಎಂದು ಅರಿವು ಟ್ರಸ್ಟ್‌ನ ಡಾ.ಎಂ.ಸಿ.ಮನೋಹರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೃಜನಶೀಲತೆಯನ್ನು ವಿಜ್ಞಾನವು ಬೆಳೆಸುತ್ತದೆ. ಹೀಗಾಗಿಯೇ ವಿಜ್ಞಾನಿಗಳು ಕಲಾರಾಧಕ ರಾಗಿದ್ದರು. ವಿಜ್ಞಾನಿಗಳಾದ ಐನ್‌ಸ್ಟೀನ್‌ ವಯಲಿನ್‌ ವಾದಕರಾಗಿದ್ದರು. ಅಬ್ದುಲ್‌ ಕಲಾಂ ವೀಣೆ ನುಡಿಸುತ್ತಿದ್ದರೆ, ರಾಜಾರಾಮಣ್ಣ ಪಿಯಾನೊ, ಸರ್‌ ಸಿ.ವಿ.ರಾಮನ್‌ ಮೃದಂಗ ನುಡಿಸುತ್ತಿದ್ದರು. ಉತ್ಸವದ ಮೂಲಕ ಗಣಿತ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಮೂಡಿಸುವುದೇ ಉದ್ದೇಶವಾಗಿದೆ’ ಎಂದರು.

‘ಅರಿವು ರಂಗ ತಂಡದಿಂದ ಇದೇ ಮೊದಲ ಬಾರಿ ರಾಜ್ಯದ ವಿಜ್ಞಾನಿ ಹಾಗೂ ಲೇಖಕ ಬಿ.ಜಿ.ಎಲ್‌ ಸ್ವಾಮಿ ಜೀವನ ಆಧರಿಸಿದ ನಾಟಕ ‘ಹಸಿರೇ ಹೊನ್ನು’ ಅಭಿನಯಿಸಲಾಗುತ್ತಿದೆ. ಇದುವರೆಗೂ ಇಂಥ ಪ್ರಯತ್ನ ಆಗಿರಲಿಲ್ಲ. ಅದಕ್ಕೆ ರಂಗಪಠ್ಯ ನನ್ನದೇ ಆಗಿದ್ದು, ಬರ್ಟಿ ಒಲಿವೆರಾ ನಿರ್ದೇಶನ ಮಾಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT