ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇವಾ ಮನೋಭಾವ, ಮೌಲ್ಯಕ್ಕೆ ಸ್ಕೌಟ್ಸ್‌ ಅಗತ್ಯ: ಪಾಂಡುರಂಗ

ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪಾಂಡುರಂಗ ಅಭಿಮತ
Published 6 ಜುಲೈ 2024, 13:34 IST
Last Updated 6 ಜುಲೈ 2024, 13:34 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳಲ್ಲಿ ಸೇವಾ ಮನೋಭಾವ ಹಾಗೂ ಉದಾತ್ತ ಮೌಲ್ಯಗಳನ್ನು ಬೆಳೆಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಹಕಾರಿಯಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಪಾಂಡುರಂಗ ತಿಳಿಸಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜಯಚಾಮರಾಜೇಂದ್ರ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಅಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ಶನಿವಾರ ಆಯೋಜಿಸಿದ್ದ‌ ‘ಸಮಾಲೋಚನಾ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಲಾ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸುವುದು ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ಇದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ. ಆದ್ದರಿಂದಲೇ ಇಲಾಖೆಯು ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯ ಚಟುವಟಿಕೆಗಳಿಗೆ ಹಿಂದಿನಿಂದಲೂ ಸಹಕಾರ ನೀಡುತ್ತಿದೆ’ ಎಂದರು.

‘ಶಾಲಾ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಬೇರೆ ಬೇರೆಯಲ್ಲ. ಎರಡೂ ಶಿಕ್ಷಣದ ಒಂದು ಭಾಗ. ಹೀಗಾಗಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕದಲ್ಲಿ ನಮ್ಮ ದೈಹಿಕ ಶಿಕ್ಷಣ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ’ ಎಂದು ಹೇಳಿದರು.

ಮೈಸೂರು ಡಿಡಿಪಿಐ ಎಸ್.ಟಿ. ಜವರೇಗೌಡ ಮಾತನಾಡಿ, ‘ಸ್ಕೌಟ್ಸ್‌ ಮತ್ತು ಗೈಡ್ಸ್‌ ಒಡನಾಟವು ಶಿಕ್ಷಣ ಇಲಾಖೆಯು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿವರೆಗೂ ಇರುತ್ತದೆ. ಶಾಲೆಗಳಲ್ಲಿ ಸ್ಕೌಟ್ಸ್‌ ಸಮವಸ್ತ್ರ ಒದಗಿಸಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯ ಮಾತನಾಡಿ, ‘ಸಂಘಟನೆಯ ವಿಚಾರಗಳು ಸಾರ್ವಕಾಲಿಕ ಸತ್ಯವಾಗಿವೆ. ಇದು ಜನಾಂದೋಲನ ಆಗಬೇಕು ಎಂಬ ಆಶಯದಲ್ಲಿ ರಾಜ್ಯದಲ್ಲಿ ಅಂದಿನ ಮೈಸೂರು ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್ ಅವರು ನೆಟ್ಟಿರುವ ಸಸಿಯು ಇಂದು ಮರವಾಗಿ ಬೆಳೆದಿದೆ. ರಾಜ್ಯದಲ್ಲಿ 6.74 ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

2024–25ನೇ ಸಾಲಿನ ಕಾರ್ಯಕ್ರಮಗಳ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಂಟಿ ರಾಜ್ಯ ಕಾರ್ಯದರ್ಶಿ ಬಿ.ಕೆ. ಬಸವರಾಜು ಮಾತನಾಡಿದರು. ಜಿಲ್ಲಾ ಮುಖ್ಯ ಆಯುಕ್ತ ಪಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರ ಡಿಡಿಪಿಐಗಳಾದ ರಾಮಚಂದ್ರರಾಜೇ ಅರಸ್, ಕಾಶಿನಾಥ್‌ (ಅಭಿವೃದ್ಧಿ), ಮಂಡ್ಯ ಡಿಡಿಪಿಐ (ಅಭಿವೃದ್ಧಿ) ಪುರುಷೋತ್ತಮ್‌, ಮೈಸೂರು ಡಿಡಿಪಿಐ (ಅಭಿವೃದ್ಧಿ) ನಾಗರಾಜಯ್ಯ, ದೈಹಿಕ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಜಿಲ್ಲಾ ಖಜಾಂಚಿ ಕೆ.ಬಿ. ಗುರುಮೂರ್ತಿ, ಕಾರ್ಯದರ್ಶಿ ಅಬ್ದುಲ್ ಜಮೀಲ್‌, ರಾಜ್ಯ ಪ್ರತಿನಿಧಿಗಳಾದ ಲೋಕೇಶ್, ಮಂಜುಳಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT