ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಚಿನ್ನದ ಕರಡಿಗೆ ಅಡವಿಟ್ಟು ಅನ್ನವಿಕ್ಕಿದರು...’: 109ನೇ ರಾಜೇಂದ್ರ ಶ್ರೀ ಜಯಂತಿ

109ನೇ ರಾಜೇಂದ್ರ ಶ್ರೀ ಜಯಂತಿ ಮಹೋತ್ಸವ ಇಂದು: ಅನ್ನ, ಅಕ್ಷರ ದಾಸೋಹ ನಡೆಸಿದ ಸ್ವಾಮೀಜಿ
Published : 25 ಆಗಸ್ಟ್ 2024, 6:11 IST
Last Updated : 25 ಆಗಸ್ಟ್ 2024, 7:04 IST
ಫಾಲೋ ಮಾಡಿ
Comments

ಮೈಸೂರು: ‘ಒಮ್ಮೆ ವಿದ್ಯಾರ್ಥಿ ನಿಲಯವೊಂದರಲ್ಲಿ ಅಕ್ಕಿ ಇರಲಿಲ್ಲ. ಮಕ್ಕಳು ಗಂಜಿ ಕುಡಿದು ಮಲಗಿದ್ದರೆಂದು ಗೊತ್ತಾಗಿ ಮರುಗಿದ ರಾಜೇಂದ್ರ ಶ್ರೀ, ಪಟ್ಟಾಧಿಕಾರ ಸಂದರ್ಭದಲ್ಲಿ ಕೊರಳಲ್ಲಿ ಧರಿಸಿದ್ದ ಚಿನ್ನದ ಕರಡಿಗೆ ಹಾಗೂ ರುದ್ರಾಕ್ಷಿ ಸರವನ್ನು ಅಡವಿಟ್ಟು ದಿನಸಿ ತಂದು ಅನ್ನವಿಕ್ಕಿದರು’

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರನ್ನು ಲೇಖಕ ಮೊರಬದ ಮಲ್ಲಿಕಾರ್ಜುನ ಸ್ಮರಿಸಿದ್ದು ಹೀಗೆ.. 

ಬಡವರ ಮಕ್ಕಳಿಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ಅನ್ನ, ಅಕ್ಷರ ದಾಸೋಹ ಆರಂಭಿಸಿದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಕಾಣ್ಕೆಯು ಜಗದಗಲ ಚಾಚಿದೆ. ಅದಕ್ಕೆ ಅಡಿಪಾಯ ಹಾಕಿದವರು ರಾಜೇಂದ್ರ ಶ್ರೀ. ಅವರ 109ನೇ ಜಯಂತಿ ಆ.25ರ ಭಾನುವಾರ ನಡೆಯಲಿದೆ.

1916ರ ಆ.29ರಂದು  ಮಲ್ಲಿಕಾರ್ಜುನ ದೇವರು– ಶಂಕರಮ್ಮ ದಂಪತಿ ಪುತ್ರರಾಗಿ ಜನಿಸಿದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಫೆ.2, 1928ರಲ್ಲಿ ಮಠದ ಪೀಠಾಧಿಪತಿಗಳಾದರು. ಗುರು ಮಂತ್ರಮಹರ್ಷಿ ಶಿವರಾತ್ರೀಶ್ವರ ಸ್ವಾಮೀಜಿ ಅವರು ರಾಜೇಂದ್ರ ಶ್ರೀ ಅವರ ವಿದ್ಯಾಭ್ಯಾಸಕ್ಕಾಗಿ ಮೈಸೂರಿನಲ್ಲಿ ಇರಿಸಿದ್ದರು.

ಪ್ರಸಾದ ನಿಲಯ ಆರಂಭಿಸಿದರು: ರಾಜೇಂದ್ರ ಶ್ರೀಗಳು ಮೈಸೂರಿನಲ್ಲಿ ಓದುವ ಸಂದರ್ಭದಲ್ಲಿಯೇ ಸುತ್ತಮುತ್ತಲ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು ಹೇಗೆ ಓದುತ್ತಿದ್ದಾರೆ? ಅವರ ಕಷ್ಟಗಳೇನು? ಎಂಬುದನ್ನು ವಿಚಾರಿಸುತ್ತಿದ್ದರು. ಕೆಲವು ವಿದ್ಯಾರ್ಥಿಗಳು, ‘ಬುದ್ದಿ, ಓದಲೇನೋ ಮೈಸೂರಿಗೆ ಬಂದಿದ್ದೇವೆ. ಆದರೆ, ಊಟದ್ದೇ ದೊಡ್ಡ ಸಮಸ್ಯೆಯಾಗಿದೆ’ ಎನ್ನುತ್ತಿದ್ದರು. ಅದನ್ನು ಕೇಳಿದ ಮರುಗಿದ ಅವರು, ಗುರುಗಳು ತಮಗೆ ಮಾಡಿದ್ದ ಪ್ರಸಾದ ವ್ಯವಸ್ಥೆಯಲ್ಲಿಯೇ ವಿದ್ಯಾರ್ಥಿಗಳಿಗೆ ಊಟವನ್ನು ನೀಡಿದ್ದರು. ನಂತರ ಮಂತ್ರ ಮಹರ್ಷಿಗಳ ಅನುಮತಿ ಪಡೆದು ತಾವಿದ್ದ ‘ನಿರಂಜನಾಲಯ’ದಲ್ಲಿಯೇ ಪ್ರಸಾದ ನಿಲಯವನ್ನು ಆರಂಭಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮಾಂತರ ಭಾಗಗಳಿಂದ ಮೈಸೂರಿಗೆ ಬಂದ ವಿದ್ಯಾರ್ಥಿಗಳಿಗೆ 1941ರಲ್ಲಿ ಉಚಿತ ವಿದ್ಯಾರ್ಥಿ ನಿಲಯವನ್ನು ‍ಪ್ರಾರಂಭಿಸಿದರು. ನಂತರ ತಿ.ನರಸೀಪುರ, ಚಾಮರಾಜನಗರ, ನಂಜನಗೂಡಿನಲ್ಲಿ ಬಾಡಿಗೆ ಮನೆ ತೆಗೆದುಕೊಂಡು ಪ್ರಸಾದ ನಿಲಯಗಳನ್ನು ಆರಂಭಿಸಿದರು. 1946ರಲ್ಲಿ ನಗರದ ವಾಣಿವಿಲಾಸ ರಸ್ತೆಯಲ್ಲಿ ಶಿವರಾತ್ರೀಶ್ವರ ವಿದ್ಯಾರ್ಥಿ ನಿಲಯ ತೆರೆದರು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಿಂದ ವಿದ್ಯಾರ್ಥಿಗಳು ಬಂದಿದ್ದರಿಂದ 1949ರಲ್ಲಿ ಬನ್ನಿಮಂಟಪದಲ್ಲಿ ವಿಸ್ತಾರವಾದ ಜಾಗವನ್ನು ಕೊಂಡು ‘ಗೌರಿಶಂಕರ ಆಶ್ರಮ’ ತೆರೆದರು.

ಸಂಸ್ಥೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನಡೆಸಲು ಒಂದೊತ್ತಿನ ಪ್ರಸಾದವಷ್ಟೇ ಸ್ವೀಕರಿಸುತ್ತಿದ್ದರು. ಉಳಿದ ವೇಳೆ ಪೂಜೆಯ ನಂತರ ನೀರನ್ನೇ ಪ್ರಸಾದವಾಗಿ ಸ್ವೀಕರಿಸುತ್ತಿದ್ದರು. ವಿದ್ಯಾರ್ಥಿನಿಲಯಗಳನ್ನು ನಿರ್ವಹಿಸಲು ಅಂಗಡಿಗಳಲ್ಲಿ ಧವಸ–ಧಾನ್ಯಗಳನ್ನು ಸಾಲವಾಗಿ ತರುತ್ತಿದ್ದರು. ಭಕ್ತರ ನೆರವಿನಿಂದ ರಾಜೇಂದ್ರ ಶ್ರೀ ತೀರಿಸುತ್ತಿದ್ದರು. ತಾವೇ ಅಡುಗೆ ಮಾಡಿಸಿ, ಮಕ್ಕಳೆಲ್ಲ ಊಟವನ್ನು ಮಾಡುವುದನ್ನು ನೋಡಿ ಖುಷಿ ಪಡುತ್ತಿದ್ದ ಅವರ ಮಾತೃವಾತ್ಸಲ್ಯ ನೆನೆಯದವರಿಲ್ಲ.

ನೂರಾರು ಸಂಸ್ಥೆಗಳ ಸ್ಥಾಪನೆ: ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ನುರಿತವರಾಗಿ ಎಲ್ಲ ಸಮುದಾಯದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಲ್ಲಿ ಶ್ರಮಿಸಿದ ಅವರ ದೂರದೃಷ್ಟಿಯಿಂದ 1954ರಲ್ಲಿ ಸ್ಥಾಪನೆಗೊಂಡ ಜೆಎಸ್‌ಎಸ್‌ ಮಹಾವಿದ್ಯಾಪೀಠದ ನೆರಳಿನಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ವಿದ್ಯಾದಾನ ಮಾಡುತ್ತಿವೆ.

ದುಡಿಯುವವರಿಗೆ ತಾಂತ್ರಿಕ ಶಿಕ್ಷಣ ಸಿಗಲೆಂದು ಐಟಿಐ, ಪಾಲಿಟೆಕ್ನಿಕ್‌ಗಳನ್ನು ತೆರೆದರು. ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಆರಂಭಿಸಿದರು. ಜನರಿಗೆ ಧರ್ಮ– ಸಂಸ್ಕೃತಿಗೆ ತಿಳಿಸಲು ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಶರಣ ಸಾಹಿತ್ಯ ಪರಿಷತ್ತು, ಸಂಸ್ಕೃತ ಪಾಠಶಾಲೆಗಳು ತೆರೆದರು. ವ್ಯಕ್ತಿ ಆರೋಗ್ಯಕರವಾಗಿ ಬೆಳೆಯಲು ಎಲ್ಲ ಅನುಕೂಲವನ್ನು ಮಾಡಿಕೊಟ್ಟರು. ಎಲ್ಲ ಸಮುದಾಯದ ಮಕ್ಕಳು ಮಠ ಹಾಗೂ ವಿದ್ಯಾಪೀಠದ ಆಶ್ರಯದಲ್ಲಿ ಶಿಕ್ಷಣ ಪಡೆದರು.

ಮಹಾರಾಜರ ಪ್ರೋತ್ಸಾಹ: ‘ಅರಸೊತ್ತಿಗೆ ಮುಗಿದು ಪ್ರಜಾಸತ್ತೆ ಬಂದಾಗ ಅರಮನೆಯ ಕಾರ್ಯವನ್ನು ಗುರುಮನೆ ಮುಂದುವರಿಸಬೇಕು ಎಂಬ ಉದ್ದೇಶದಿಂದ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜೇಂದ್ರ ಸ್ವಾಮೀಜಿ ಅವರ ಕಾರ್ಯಗಳಿಗೆ ನೆರವಾದರು. ಅವರಿಗೆ ಸ್ವಾಮೀಜಿ ಅವರ ಬಗ್ಗೆ ಅಪಾರ ಗೌರವವಿತ್ತು. ಸಮಾಜ ಸೇವೆಯನ್ನು ಗುರುತಿಸಿ 1970ರಲ್ಲಿ ರಾಜಗುರುತಿಲಕ ಎಂದು ಅಭಿನಂದಿಸಿದ್ದರು’ ಎಂದು ಮಲ್ಲಿಕಾರ್ಜುನ ಹೇಳಿದರು.

ಅಡಿಪಾಯ ಹಾಕಿದರು..

ಎಲ್ಲ ಸಮುದಾಯದ ಮಕ್ಕಳ ಏಳಿಗೆಗಾಗಿ ನಿರಂತರ ಕಾಯಕ ಮಾಡಿದ ಅವರು ಡಿ.12 1986ರಲ್ಲಿ ಲಿಂಗೈಕ್ಯರಾದರು. ಅವರು ಹಾಕಿಕೊಟ್ಟ ಅಡಿಪಾಯದಲ್ಲಿ 400ಕ್ಕೂ ಹೆಚ್ಚು ಸಂಸ್ಥೆಗಳು ಅರಳಿವೆ. 54 ವಿದ್ಯಾರ್ಥಿನಿಲಯಗಳು 7 ಶಿಶುವಿಹಾರಗಳು 17 ನರ್ಸರಿ ಶಾಲೆಗಳು 11 ಸಂಸ್ಕೃತ ಪಾಠಶಾಲೆಗಳು 2 ಸಮನ್ವಯ ಶಿಕ್ಷಣ ಸಾಲೆಗಳು 20ಪ್ರಾಥಮಿಕ ಶಾಲೆಗಳು 60 ಪ್ರೌಢಶಾಲೆಗಳು 4 ಬಿ.ಇಡಿ ಕಾಲೇಜು 3 ಡಿ.ಇಡಿ ಕಾಲೇಜು 2 ಗುರುಕುಲಗಳು 17 ಪಬ್ಲಿಕ್‌– ಅಂತರರಾಷ್ಟ್ರೀಯ ಶಾಲೆಗಳು 18 ಪಿಯು ಕಾಲೇಜುಗಳು 6 ಪದವಿ ಕಾಲೇಜು 1 ಕಾನೂನು ಕಾಲೇಜು ತಲಾ 4 ಎಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಕಾಲೇಜುಗಳು 3 ಕೈಗಾರಿಕಾ ತರಬೇತಿ ಕೇಂದ್ರಗಳು ತಲಾ 5 ವೈದ್ಯಕೀಯ ಹಾಗೂ ನರ್ಸಿಂಗ್‌ ಕಾಲೇಜುಗಳು 6 ಆಸ್ಪತ್ರೆಗಳು ಜೆಎಸ್‌ಎಸ್‌ ವೈದ್ಯಕೀಯ ತಾಂತ್ರಿಕ ವಿಶ್ವವಿದ್ಯಾಲಯಗಳು ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 2 ಕೃಷಿ ಸೇವಾ ಕೇಂದ್ರ ಹಿರಿಯ ನಾಗರಿಕರ ಸೇವಾ ಕೇಂದ್ರ ಟ್ರಸ್ಟ್‌ಗಳು ಸೇರಿದಂತೆ ನೂರಾರು ಸಂಸ್ಥೆಗಳು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವಧಿಯಲ್ಲಿ ಜಗದಗಲ ಚಾಚಿವೆ.

ಸುತ್ತೂರು ಮಠದಲ್ಲಿ ಆಚರಣೆ

109ನೇ ಜಯಂತಿ ಮಹೋತ್ಸವವನ್ನು ಆ.25ರಂದು ಬೆಳಿಗ್ಗೆ 10.30ಕ್ಕೆ ಗೋವಾದ ರಾಜ್ಯಪಾಲ ಪಿ.ಎಸ್. ಶ್ರೀಧರನ್‌ ಪಿಳ್ಳೈ ಉದ್ಘಾಟಿಸುವರು. ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಅಧ್ಯಾತ್ಮ ನೇತಾರ ಮಧುಸೂದನ ಸಾಯಿ ಸಮ್ಮುಖ ವಹಿಸುವರು. ಮೇಘಾಲಯದ ರಾಜ್ಯಪಾಲ ಸಿ.ಎಚ್‌. ವಿಜಯಶಂಕರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ ಜೆಎಸ್‌ಎಸ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ  ನಿವೃತ್ತರಾಗಿರುವ 102 ಮಂದಿ ಹಾಗೂ ಸೇವೆಯಿಂದ ಬಿಡುಗಡೆ ಪಡೆದಿರುವ 63 ಜನರನ್ನು ಅಭಿನಂದಿಸಲಾಗುವುದು. ಸೇವೆಯಲ್ಲಿರವಾಗಲೆ ನಿಧನರಾದ 12 ನೌಕರರ ಕುಟುಂಬದವರಿಗೆ ಸಾಂತ್ವನ ಹೇಳಲಾಗುವುದು. ಜೆಎಸ್‌ಎಸ್ ಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪಿಯುಸಿ ಹಾಗೂ 12ನೇ ತರಗತಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಮೊದಲ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೆಎಸ್‌ಎಸ್ ಶಾಲಾ ಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳು ಹಾಗೂ ‘ಪ್ರಸಾದ’ ಮಾಸಿಕ ಸಂಚಿಕೆಯ ವಾರ್ಷಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT