ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಶ್ಯಾಮ, ಕೃತಜ್ಞತೆ ಇಲ್ಲದವ: ವಿಶ್ವನಾಥ್ ವಿರುದ್ಧ ಶ್ರೀನಿವಾಸಪ್ರಸಾದ್ ಟೀಕೆ

Last Updated 16 ಡಿಸೆಂಬರ್ 2022, 11:48 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್ ನಕಲಿ ಶ್ಯಾಮ. ರಾಜಕೀಯದ ಹಿನ್ನೆಲೆಯೇ ಗೊತ್ತಿಲ್ಲದವನು’ ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಟೀಕಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆತ ಗೆದ್ದು ವಿಧಾನ ಪರಿಷತ್‌ ಸದಸ್ಯನಾದವನಲ್ಲ. ನಾಮಕರಣಗೊಂಡವ. ನಾನು ರಾಜಕಾರಣಕ್ಕೆ ಬಂದು 50 ವರ್ಷ ಸಮೀಪಿಸುತ್ತಿದೆ. ಅವರಂತೆ ಯಾವುದೋ ಸ್ಥಾನಕ್ಕೋ, ಅಧಿಕಾರಕ್ಕೋ ಪಕ್ಷಾಂತರ ಮಾಡಿದವನಲ್ಲ’ ಎಂದು ತಿರುಗೇಟು ನೀಡಿದರು.

‘ನಾನು ಆತನಂತೆ, ಚುನಾವಣೆಯಲ್ಲಿ ಗೆದ್ದವರ ಬಗ್ಗೆ ಎಂದೂ ಟೀಕಿಸಿಲ್ಲ. ಯಾವುದೇ ಪಕ್ಷಕ್ಕೆ ಹೋದರೂ ಆಸ್ತಿಯಾಗಿದ್ದೇನೆಯೇ ಹೊರತು ಹೊರೆಯಾಗಿಲ್ಲ. ಇದ್ದ ಪಕ್ಷದ ಬಗ್ಗೆಯೇ ಬಾಯಿಗೆ ಬಂದಂತೆ ಮಾತನಾಡಿಲ್ಲ. ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿದ್ದೇನೆ’ ಎಂದರು.

‘ರಾಜಕೀಯವಾಗಿ ಬೆಳೆಸಿದ ದೇವರಾಜ ಅರಸು ಅವರಿಗೆ ವಿಶ್ವನಾಥ್‌, ಮಲ್ಲಿಕಾರ್ಜುನ ಖರ್ಗೆ ಚೂರಿ ಹಾಕಿದರು’ ಎಂದು ಅರೋಪಿಸಿದರು. ‘ವಿಶ್ವನಾಥ, ಸೋತ ನಂತರ ಗೆದ್ದ ಯಾರ ಬಗ್ಗೆಯಾದರೂ ಮಾತನಾಡದೆ ಬಿಟ್ಟಿದ್ದಾರೆಯೇ?’ ಎಂದು ಕೇಳಿದರು.

‘ನಿಮಗೆ ಟಿಕೆಟ್ ಕೊಡಿಸಿದವರಾರು, ಮಂತ್ರಿ ಮಾಡಿದವರಾರು? ಸಚಿವ ಸ್ಥಾನ ಕೊಡಿಸಲು ಕಾರಣವಾದವರಾರು? ನಾನು ಮಂತ್ರಿಯಾಗಲು ಆಸೆ ಪಡಲಿಲ್ಲ. ಆದರೆ, ಆತನಿಗೆ ಕೊಡಿಸಿದೆ. ದೆಹಲಿಯಲ್ಲಿ ನಾಲ್ಕು ವರ್ಷ ಸಾಕಿದೆ. ನನ್ನ ಪಾಲಿಗೆ ಪ್ರಸಾದ್ ತಿರುಪತಿಯ ತಿಮ್ಮಪ್ಪ ಇದ್ದಂತೆ ಎಂದಿದ್ದ ನೀನು ಈಗ ಮರೆತೆಯಾ? ನಾಚಿಕೆ ಆಗುವುದಿಲ್ಲವೇ?’ ಎಂದು ಕೇಳಿದರು.

‘ಡಿ.ಕೆ.ಶಿವಕುಮಾರ್‌ ಸೇರಿದಂತೆ 42 ಮಂದಿಗೆ ನಾನು ಟಿಕೆಟ್ ಕೊಡಿಸಿದ್ದೆ. ಅವರೆಲ್ಲರೂ ನನ್ನನ್ನು ಗೌರವದಿಂದ ಕಾಣುತ್ತಾರೆ. ಆದರೆ, ಈ ವಿಶ್ವನಾಥ್ ಕೃತಜ್ಞತೆ ಇಲ್ಲದವ. ಸಿದ್ದರಾಮಯ್ಯಗೆ ಅಹಿಂದ ಕಟ್ಟಿಕೊಟ್ಟವನು ನಾನು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದು ತಿಳಿಸಿದರು.

‘ಅಶೋಕಪುರಂಗೆ ನಾನೇನು ಕೊಡುಗೆ ನೀಡಿದ್ದೇನೆ ಎನ್ನುವುದನ್ನು ಅಲ್ಲಿನ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ನಾನು ವಿಶ್ವನಾಥಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT