ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯು ಸುಳ್ಳು ಉತ್ಪಾದಕ ಕಾರ್ಖಾನೆ

ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ
Last Updated 2 ಅಕ್ಟೋಬರ್ 2022, 6:23 IST
ಅಕ್ಷರ ಗಾತ್ರ

ಕಳಲೆ (ಮೈಸೂರು ಜಿಲ್ಲೆ): ‘ಬಿಜೆಪಿಗೆ ಜನರನ್ನು ದಾರಿ ತಪ್ಪಿಸುವುದೇ ದೊಡ್ಡ ಕೆಲಸವಾಗಿದೆ. ಆ ಪಕ್ಷವು ಸುಳ್ಳು ಉತ್ಪಾದಕ ಕಾರ್ಖಾನೆಯಾಗಿದೆ’ ಎಂದು ವಿಧಾನಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಭಾರತ್ ಜೋಡೊ’ ಪಾದಯಾತ್ರೆಯ ನಡುವೆ ಇಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿಲ್ಲವೇ ಎಂದು ಬಿಜೆಪಿಯವರು ನಮ್ಮನ್ನು ಕೇಳುತ್ತಾರೆ. ಹಾಗಾದರೆ, 2006ರಿಂದ ಇಲ್ಲಿವರೆಗಿನ ಎಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು. ‘ಅದಕ್ಕೆ ಬಿಜೆಪಿಯವರಿಗೆ ಧಮ್ ಇಲ್ಲ’ ಎಂದರು.

‘ಬಿಜೆಪಿಯವರಿಗೆ ಅಂಬೇಡ್ಕರ್ ರಚಿಸಿರುವ ಸಂವಿಧಾನ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಂಬಿಕೆ ಇಲ್ಲ. ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ.

‘ಸಂವಿಧಾನಾತ್ಮಕವಾಗಿ ದೊರೆತಿರುವ ವಾಕ್‌ ಸ್ವಾತಂತ್ರ್ಯವನ್ನು ಇಂದು ಕಿತ್ತುಕೊಳ್ಳಲಾಗಿದೆ. ಸರ್ಕಾರದ ನೀತಿ– ನಿರ್ಧಾರಗಳನ್ನು ಪ್ರಶ್ನಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕುವುದು, ಅವರ ಮೇಲೆ ಇ.ಡಿ, ಸಿಬಿಐಗಳನ್ನು ಛೂ ಬಿಡುವುದು ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರಿಂದ ಆತಂಕ ವ್ಯಕ್ತವಾಗುತ್ತಿದೆ’ ಎಂದು ದೂರಿದರು.

'ರಾಹುಲ್‌ ಗಾಂಧಿ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿರುವುದು ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶಕ್ಕಲ್ಲ. ಜನರಲ್ಲಿ ಭಯ, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂಬ ಕಾರಣಕ್ಕೆ ನಡೆಸುತ್ತಿದ್ದಾರೆ. ಭಾರತ ಐಕ್ಯತಾ ಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆಗೆ ಸಂಘ ಸಂಸ್ಥೆಗಳು, ವಿಚಾರವಂತರು, ಚಿಂತಕರು, ಬರಹಗಾರರು, ಹೀಗೆ ಎಲ್ಲ ವರ್ಗದ ಜನರು ಭಾಗವಹಿಸುತ್ತಿದ್ದಾರೆ. ಈ ಜನರ ಅಭಿಪ್ರಾಯ ಸಂಗ್ರಹಿಸಲು ರಾಹುಲ್‌ ಗಾಂಧಿ ಅವರು ಸಂವಹನ ಸಭೆಗಳನ್ನು ನಡೆಸುತ್ತಿದ್ದಾರೆ' ಎಂದರು.

‘ಪಾದಯಾತ್ರೆಗೆ ಅದ್ಭುತ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇಷ್ಟು ಬೃಹತ್‌ ಪ್ರಮಾಣದ ಸ್ಪಂದನೆಯನ್ನು ನಾವೂ ನಿರೀಕ್ಷಿಸಿರಲಿಲ್ಲ. ಇದರಿಂದ ವಿಚಲಿತರಾಗಿ ಜನರಿಗೆ ತಪ್ಪು ಮಾಹಿತಿ ಕೊಡುವುದು, ಸುಳ್ಳು ಜಾಹೀರಾತು ನೀಡುವುದನ್ನು ಬಿಜೆಪಿಯವರು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಗೆ ಭಯ ಶುರುವಾಗಿದೆ. ದೇಶದ ಜನರ ಅಭಿಪ್ರಾಯ ಬದಲಾಗುತ್ತಿದೆ. ಜನ ಭಯದಿಂದ ಹೊರಬರುತ್ತಿದ್ದಾರೆ. ಹೀಗಾಗಿ ಬಿಜೆಪಿ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸಿದೆ’ ಎಂದು ದೂರಿದರು.

‘ಮಾಂಸಹಾರ ಕೆಟ್ಟದ್ದಕ್ಕೆ ದಾರಿಯಾಗುತ್ತದೆ’ ಎಂಬ ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಮಾತಿಗೆ ಪ್ರತಿಕ್ರಿಯಿಸಿ, ‘ದೇಶದಲ್ಲಿ ಶೇ 80ರಷ್ಟು ಜನ ಮಾಂಸಹಾರಿಗಳಿದ್ದಾರೆ. ಮಾಂಸಹಾರ ಇವತ್ತು ನಿನ್ನೆಯದಲ್ಲ. ಮೋಹನ್‌ ಭಾಗವತ್ ಹುಟ್ಟುವ ಮೊದಲಿನಿಂದಲೂ ಅಂದರೆ ಪುರಾತನ ಕಾಲದಿಂದಲೂ ಜನ ಮಾಂಸಹಾರ ಸೇವಿಸುತ್ತಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಕೇರಾ, ಶಾಸಕ ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT