ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಮತಿ ಇಲ್ಲದೆ ‘ವಂಶವೃಕ್ಷ’ ಅನುವಾದ: ₹ 5 ಲಕ್ಷ ನಷ್ಟ ಪರಿಹಾರಕ್ಕೆ ಕೋರ್ಟ್ ಆದೇಶ

Published : 29 ಡಿಸೆಂಬರ್ 2023, 7:15 IST
Last Updated : 29 ಡಿಸೆಂಬರ್ 2023, 7:15 IST
ಫಾಲೋ ಮಾಡಿ
Comments

ಮೈಸೂರು: ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ ಕೃತಿಯನ್ನು ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸಿ ಕಾಪಿರೈಟ್ ಉಲ್ಲಂಘಿಸಿದ್ದ ಹೈದರಾಬಾದ್‌ನ ‘ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನ’ದ ವತ್ಸಲಾ ಅವರು ₹ 5.05 ಲಕ್ಷ ನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಡಿಸೆಂಬರ್ 21ರಂದು ತೀರ್ಪು ‌ನೀಡಿದೆ.

ಭೈರಪ್ಪನವರು ‘ವಂಶವೃಕ್ಷ’ವನ್ನು ತೆಲುಗು ಭಾಷೆಗೆ ಅನುವಾದಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಎಂಬವರಿಗೆ ನೀಡಿದ್ದರು. ಅವರು ವಂಶವೃಕ್ಷ ಕಾದಂಬರಿಯನ್ನು ‘ವಂಶವೃಕ್ಷಂ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದರು. ಕೆಲವು ವರ್ಷಗಳ ಹಿಂದೆ ಸನಗರಂ ನಾಗಭೂಷಣಂ ನಿಧನರಾದರು. ಭೈರಪ್ಪ ಅವರು ತೆಲುಗಿಗೆ ಅನುವಾದಿಸಲು ನಾಗಭೂಷಣಂ ಹೊರತುಪಡಿಸಿ ಬೇರಾರಿಗೂ ಅನುಮತಿ ನೀಡಿರಲಿಲ್ಲ.

ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ಸಂಪಾದಕಿ ವತ್ಸಲಾ ಅವರು ‘ವಂಶವೃಕ್ಷಂ’ ಅನುವಾದಿತ ಕೃತಿಯನ್ನು ಹೊಸದಾಗಿ ಪ್ರಕಟಿಸಿದ್ದಾರೆಂಬ ಮಾಹಿತಿಯು ಭೈರಪ್ಪ ಅವರಿಗೆ 2021ರ ನವೆಂಬರ್‌ನಲ್ಲಿ ತಿಳಿಯಿತು. ಆ ಕೃತಿ ಅವಲೋಕಿಸಿದಾಗ ‘ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ’ ಎಂಬ ಘೋಷಣೆಯು ಇರುವುದು ಗಮನಕ್ಕೆ ಬಂದಿತ್ತು. ಆ ಕೃತಿಯನ್ನು ತೆಲುಗಿಗೆ ಅನುವಾದಿಸಿ ಮರುಮುದ್ರಿಸುವ ಹಕ್ಕನ್ನು ವತ್ಸಲಾ ಅವರಿಗೆ ಎಂದಿಗೂ ನೀಡಿರಲಿಲ್ಲ. ವತ್ಸಲಾ ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದ್ದರು. ಸಾವಿರ ಪ್ರತಿಯನ್ನು ಅನಧಿಕೃತವಾಗಿ ಮುದ್ರಿಸಿ, ಆ ಪುಸ್ತಕಕ್ಕೆ ₹ 360 ಬೆಲೆ ನಿಗದಿಪಡಿಸಿದ್ದರು.

ಈ ವಿಚಾರ ತಿಳಿದ ಭೈರಪ್ಪ ಅವರು 2021ರ ನ.15ರಂದು ತಮ್ಮ ವಕೀಲರ ಮೂಲಕ ವತ್ಸಲಾ ಅವರಿಗೆ ನೋಟಿಸ್‌ ನೀಡಿ, ಅನಧಿಕೃತವಾಗಿ ಪ್ರಕಟಿಸಿದ ‘ವಂಶವೃಕ್ಷಂ’ ಕಾದಂಬರಿಯ ಪ್ರತಿಗಳನ್ನು ಮಾರಾಟ ಮಾಡದಂತೆ ಹಾಗೂ ಮುದ್ರಿತ ಪ್ರತಿಗಳನ್ನು ತಮಗೆ ಒಪ್ಪಿಸುವಂತೆ ಸೂಚಿಸಿದ್ದರು. ಕಾನೂನುಬಾಹಿರ ಕೃತ್ಯ ಎಸಗಿದ್ದಕ್ಕಾಗಿ ₹ 5 ಲಕ್ಷ ನೀಡುವಂತೆಯೂ ನೋಟಿಸ್ ಕೊಟ್ಟಿದ್ದರು. ಇದಕ್ಕೆ ವತ್ಸಲಾ ಅವರು ಸ್ಪಂದಿಸಿರಲಿಲ್ಲ. ಆದ್ದರಿಂದ ₹ 5.05 ಲಕ್ಷ ನಷ್ಟ ಪರಿಹಾರ ಕೊಡಿಸುವಂತೆ ಕೋರಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ಕೋರ್ಟ್ ಕಮಿಷನರ್ ಪಿ.ಜೆ.ರಾಘವೇಂದ್ರ ಅವರು ಭೈರಪ್ಪ ಅವರ ಮನೆಗೆ ತೆರಳಿ ಸಾಕ್ಷ್ಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಅವರು, ವತ್ಸಲಾ ಅವರು ₹ 5,05 ಲಕ್ಷವನ್ನು ಭೈರಪ್ಪ ಅವರಿಗೆ ನೀಡಬೇಕೆಂದೂ, ಮುದ್ರಿತ ಎಲ್ಲ ಪ್ರತಿಗಳನ್ನೂ ಒಪ್ಪಿಸುವಂತೆಯೂ ನಿರ್ದೇಶಿಸಿದ್ದಾರೆ. ಜೊತೆಗೆ ಅನುವಾದಿತ ಕೃತಿಯನ್ನು ಮರುಮುದ್ರಿಸದಂತೆ ಹಾಗೂ ಮಾರಾಟ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿ ತೀರ್ಪು ನೀಡಿದ್ದಾರೆ.

ಭೈರಪ್ಪ ಅವರ ಪರವಾಗಿ ವಕೀಲ ಓ.ಶ್ಯಾಮ್ ಭಟ್ ವಕಾಲತ್ತು ವಹಿಸಿದ್ದರು.

1960ರ ದಶಕದಲ್ಲಿ ಪ್ರಕಟಿತ ‘ವಂಶವೃಕ್ಷ’ ಸೇರಿದಂತೆ 25 ಕಾದಂಬರಿಗಳನ್ನು ಭೈರಪ್ಪ ರಚಿಸಿದ್ದಾರೆ. ‘ವಂಶವೃಕ್ಷ’ ಕಾದಂಬರಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸಿತ್ತು. ಇದು ಸ್ನಾತಕೋತ್ತರ ಪದವಿಯ ಪಠ್ಯವೂ ಆಗಿದೆ. ಇದನ್ನು ಆಧರಿಸಿ ಕನ್ನಡ ಚಲನಚಿತ್ರವೂ ತೆರೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT