ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ |ವಿವೇಕಾನಂದ ‘ವಿಕ್ರಮ’; ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದ ಮರಿತಿಬ್ಬೇಗೌಡಗೆ ಸೋಲು
Published 7 ಜೂನ್ 2024, 4:39 IST
Last Updated 7 ಜೂನ್ 2024, 4:39 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಅಭ್ಯರ್ಥಿ ಕೆ.ವಿವೇಕಾನಂದ ಭರ್ಜರಿ ಜಯ ಗಳಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ 5ನೇ ಸಲ ಆಯ್ಕೆ ಬಯಸಿದ್ದ ಮರಿತಿಬ್ಬೇಗೌಡ ಹೀನಾಯವಾಗಿ ಸೋತಿದ್ದಾರೆ.

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಪ್ರಥಮ‍ ಪ್ರಾಶಸ್ತ್ಯದ ಮತ’ಗಳಿಂದಲೇ ಗೆಲುವು ಗಳಿಸಿದ ದಾಖಲೆಯನ್ನೂ ವಿವೇಕಾನಂದ ಬರೆದಿದ್ದಾರೆ. ವೃತ್ತಿಯಲ್ಲಿ ರಿಯಲ್‌ ಎಸ್ಟೇಟ್ ಉದ್ಯಮಿಯಾಗಿರುವ ಅವರನ್ನು ಮೊದಲ ಚುನಾವಣೆಯಲ್ಲೇ ಗೆಲ್ಲಿಸಿರುವ ಪ್ರಜ್ಞಾವಂತ ಮತದಾರರು ಮೇಲ್ಮನೆ ಪ್ರವೇಶಕ್ಕೆ ಅಸ್ತು ಎಂದಿದ್ದಾರೆ. ಇದರೊಂದಿಗೆ ಕ್ಷೇತ್ರವು ‘ಜೆಡಿಎಸ್‌ ಭದ್ರಕೋಟೆ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿದ್ದರು. ಅವರಲ್ಲಿ ಮರಿತಿಬ್ಬೇಗೌಡ ಹಾಗೂ ವಿವೇಕಾನಂದ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಮಾಜಿ ಶಾಸಕ ವಾಟಾಳ್ ನಾಗರಾಜ್‌ ಹಾಗೂ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರಿಗೆ ಮೂರಂಕಿ ಮತ ಗಳಿಸಲೂ ಆಗಿಲ್ಲ. ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಹ.ರ. ಮಹೇಶ್ 492 ಮತಗಳನ್ನು ಗಳಿಸಿ 3ನೇ ಸ್ಥಾನ ಪಡೆದು ಗಮನಸೆಳೆದರು.

ಮರಿತಿಬ್ಬೇಗೌಡ ಗೆಲುವಿನ ಓಟಕ್ಕೆ ಬ್ರೇಕ್‌: ಕ್ಷೇತ್ರದಲ್ಲಿ ಮರಿತಿಬ್ಬೇಗೌಡರ ಗೆಲುವಿನ ಓಟಕ್ಕೆ ಬ್ರೇಕ್‌ ಬಿದ್ದಿದೆ. ಜತೆಗೆ, ಮೈಸೂರು ಭಾಗದ ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರದ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗವನ್ನೂ ಉಂಟು ಮಾಡಿದೆ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಎದುರು ಕಾಂಗ್ರೆಸ್‌ ಸೋತಿತ್ತು. ಇದೀಗ ಮತ್ತೊಂದು ಸೋಲು ಕಾಂಗ್ರೆಸ್‌ಗೆ ದೊಡ್ಡ ಆಘಾತ ತಂದೊಡ್ಡಿದೆ. ಕ್ಷೇತ್ರವನ್ನು ಈ ಬಾರಿಯಾದರೂ ವಶಪಡಿಸಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಮರಿತಿಬ್ಬೇಗೌಡ ಅವರನ್ನು ಕರೆ ತಂದು ಅಭ್ಯರ್ಥಿಯನ್ನಾಗಿಸಿದ್ದರು. ಆದರೆ, ಅವರ ನಿರೀಕ್ಷೆ–ಲೆಕ್ಕಾಚಾರಗಳು ವಿಫಲವಾಗಿವೆ.

ಗೆಲುವಿನ ನಿರೀಕ್ಷೆಯೊಂದಿಗೆ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮರಿತಿಬ್ಬೇಗೌಡ ಅವರ ಕನಸಿಗೆ ಮತದಾರರ ನೀರೆರೆದಿಲ್ಲ. ಮೊದಲಿಗೆ ಕಾಂಗ್ರೆಸ್‌, ನಂತರ ಪಕ್ಷೇತರ ಹಾಗೂ ನಂತರದ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ‌ಅವರಿಗೆ ‘ಪಂಚ ಗೆಲುವು’ ಸಾಧ್ಯವಾಗಿಲ್ಲ. ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲುತ್ತಾರೆ ಎಂಬ ಮಾತು ಕೂಡ ಈ ಬಾರಿ ಹುಸಿಯಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆಯಲು ಈ ಬಾರಿ ಬಿಜೆಪಿಯೂ ಕೈಜೋಡಿಸಿತು. ಜೊತೆಗೆ, ಮತದಾರರೂ ಬದಲಾವಣೆ ಬಯಸಿದ್ದರಿಂದ, 24 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮರಿತಿಬ್ಬೇಗೌಡರ ಗೆಲುವಿನ ಯಾತ್ರೆ ಕೊನೆಗೊಂಡಿತು.

‘ವಾಚ್‌ ನೀಡಿದ್ದಾರೆ, ಮತದಾರರಿಗೆ ತಲಾ ₹ 9 ಸಾವಿರ ಹಂಚಿದ್ದಾರೆ ಎಂಬಿತ್ಯಾದಿ ಆರೋಪಗಳು ಪ್ರತಿಸ್ಪರ್ಧಿಗಳಿಂದ ಕೇಳಿಬಂದಿತಾದರೂ ಅದ್ಯಾವುದಕ್ಕೂ ಪ್ರತಿಕ್ರಿಯಿಸದೇ ಪ್ರಚಾರಕ್ಕಷ್ಟೆ ಒತ್ತು ನೀಡಿದ್ದು ವಿವೇಕಾನಂದ ಅವರಿಗೆ ನೆರವಾಯಿತು’ ಎಂದು ವಿಶ್ಲೇಷಿಸಲಾಗುತ್ತಿದೆ.

ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆಯ ಮೂರು ಸುತ್ತುಗಳಲ್ಲೂ ವಿವೇಕಾನಂದ ದೊಡ್ಡ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರಿಂದ ಅವರ ಗೆಲುವಿನ ಹಾದಿ ಸುಗಮವಾಯಿತು.

ವಿವೇಕಾನಂದ ಗೆಲುವಿಗೆ ಸಹಕಾರಿ ಆಗಿದ್ದೇನು?

* ನಾಲ್ಕು ಬಾರಿಯಿಂದಲೂ ಇದ್ದ ‘ಏಕವ್ಯಕ್ತಿ ಪ್ರಾಬಲ್ಯ’ ಬದಲಾಯಿಸಲು ಮತದಾರರು ಬಯಸಿದ್ದು

* ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ನಾಯಕರು ಕಾರ್ಯಕರ್ತರ ಸಮನ್ವಯ ಒಗ್ಗಟ್ಟು

* ಟಿಕೆಟ್‌ ಘೋಷಣೆಗೂ ಮುಂಚಿನಿಂದಲೇ ವಿವೇಕಾನಂದ ಅವರು ಶಿಕ್ಷಕರ ಸಂಪರ್ಕದಲ್ಲಿದ್ದುದು

* ಎರಡೂ ಪಕ್ಷಗಳ ನಾಯಕರು ಹಲವು ಬಾರಿ ಪ್ರಮುಖರ ಸಭೆ ನಡೆಸಿ ಹುರಿದುಂಬಿಸಿದ್ದು

* ಎರಡು ಬಾರಿ ಗೆದ್ದ ಪಕ್ಷ ತೊರೆದ ಮರಿತಿಬ್ಬೇಗೌಡರ ವಿರುದ್ಧ ಜೆಡಿಎಸ್ ಸಾಧಿಸಿದ ಸೇಡು

* ಸಿದ್ದರಾಮಯ್ಯಗೆ ಮುಖಭಂಗವಾಗಲೆಂದೇ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರು ಕೈಗೊಂಡ ಪ್ರಚಾರ

* ಒಕ್ಕಲಿಗ ಸಮುದಾಯದ ಮತಗಳು ಚದುರಿ ಹೋಗದಂತೆ ಮಾಡಿದ ಕಾರ್ಯತಂತ್ರ

ಮರಿತಿಬ್ಬೇಗೌಡ ಸೋಲಿಗೆ ಕಾರಣವೇನು?

* ಕಾಂಗ್ರೆಸ್‌ ಸರ್ಕಾರವಿರುವುದರಿಂದ ಶಿಕ್ಷಕರ ಬೆಂಬಲ ಸಿಕ್ಕೇಸಿಗುತ್ತದೆಂಬ ಅತಿಯಾದ ವಿಶ್ವಾಸ

* ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್  ಪ್ರಕರಣ ನೆರವಾಗುತ್ತದೆಂಬ ನಂಬಿಕೆ

* ಪಂಚ ಗ್ಯಾರಂಟಿಗಳು ಕೈಹಿಡಿಯುತ್ತವೆಂದು ಭಾವಿಸಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿದ್ದುದು

* ಅಭ್ಯರ್ಥಿಯೂ ಸೇರಿದಂತೆ ನಾಯಕರ ಅತಿಯಾದ ಆತ್ಮವಿಶ್ವಾಸ

* ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್‌ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲಿಲ್ಲ

* ಪ್ರತಿಸ್ಪರ್ಧಿಯ ಕಾರ್ಯಾಚರಣೆ ತಂತ್ರ ಅರಿಯುವಲ್ಲಿ ವಿಫಲವಾದುದು ಅಥವಾ ತಡವಾಗಿ ಅರಿತದ್ದು

* ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಕೆ.ವೆಂಕಟೇಶ್‌ ಅವರೂ ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ.

* ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜನಪ್ರತಿನಿಧಿಗಳೇ ಜಾಸ್ತಿ ಇದ್ದರೂ ಅವರ ಪ್ರಭಾವ ಮತವಾಗಿ ಪರಿವರ್ತನೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT