ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಸ್ನೇಹಿತನ ವಿರುದ್ಧ ವಿಶ್ವನಾಥ್‌ ವಾಗ್ದಾಳಿ

ಸ್ನೇಹಕ್ಕೆ ಬಲಿಯಾದವರ ಬಗ್ಗೆ ಹಗುರವಾಗಿ ಮಾತನಾಡುವ ಬಗ್ಗೆ ಯೋಚಿಸಬೇಕು: ವಿಶ್ವನಾಥ್‌
Last Updated 15 ಡಿಸೆಂಬರ್ 2022, 10:01 IST
ಅಕ್ಷರ ಗಾತ್ರ

ಮೈಸೂರು: ‘ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್ ಟೀಕಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನನ್ನನ್ನು ಅಲೆಮಾರಿ ಎಂದೆಲ್ಲಾ ಪ್ರಸಾದ್ ಈಚೆಗೆ ಟೀಕಿಸಿದ್ದಾರೆ. ಸ್ವಾರ್ಥಕ್ಕಾಗಿ ಸ್ನೇಹವನ್ನು ಮರೆತು ಮಾತನಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಐವತ್ತು ವರ್ಷಗಳ ಸ್ನೇಹ ನಮ್ಮದು.ನೀವು ಎಲ್ಲೆಲ್ಲಿದ್ರಿ ಪ್ರಸಾದ್‌? ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದವರು ನೀವು. ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಸೇರಿದಿರಿ. ಜನತಾ ಪಾರ್ಟಿ, ಕಾಂಗ್ರೆಸ್, ಸಮತಾ ಪಾರ್ಟಿ, ಜೆಡಿಯು, ಜೆಡಿಎಸ್‌ಗೆ ಹೋಗಿ ಬಂದಿದ್ದೀರಿ. ಮತ್ತೆ ಕಾಂಗ್ರೆಸ್ ಸೇರಿದಿರಿ. ಈಗ ಬಿಜೆಪಿಯಲ್ಲಿದ್ದೀರಿ. ನೀವು ನನ್ನನ್ನು ಅಲೆಮಾರಿ ಎನ್ನುತ್ತೀರಲ್ಲಾ?’ ಎಂದು ಕೇಳಿದರು.

‘ನೀವು ದಿಢೀರನೆ ನನ್ನ ಮೇಲೆ ಮುಗಿಬಿದ್ದಿರುವ ಹಿನ್ನೆಲೆ ಏನು? ಯಾರನ್ನು ಮೆಚ್ಚಿಸಲು, ಏನನ್ನು ಪಡೆದುಕೊಳ್ಳಲು ಹೊರಟಿದ್ದೀರಿ? ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳುಬರುತ್ತಿರುವಾಗ, ನನ್ನನ್ನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಯಾರನ್ನೋ ಮೆಚ್ಚಿಸಿ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್‌ಗೆ ಸಚಿವ ಸ್ಥಾನ ಕೊಡಿಸುವ ಸ್ವಾರ್ಥ ನಿಮ್ಮದು. ಇನ್ನೊಬ್ಬ ಅಳಿಯನನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ನಿಲ್ಲಿಸಬೇಕು, ಮಗಳನ್ನು ತಿ.ನರಸೀಪುರಕ್ಕೆ ತರಲೆಂದು ಮಾತನಾಡುತ್ತಿದ್ದೀರಿ’ ಎಂದು ಟೀಕಿಸಿದರು.

‘ಸ್ನೇಹಿತನ ಮಾತುಗಳಿಂದ ಬಹಳ ನೋವಾಗಿದೆ’ ಎಂದರು.

‘ನಾನು ಜೆಡಿಎಸ್‌ನಲ್ಲಿದ್ದೆ. ನನ್ನನ್ನು ಬಿಜೆಪಿಗೆ ಕರೆತಂದಿದ್ದನ್ನು ಮರೆತಿರಾ? ಸ್ನೇಹಕ್ಕೆ ಬಲಿಯಾದವರ ಬಗ್ಗೆ ಹಗುರವಾಗಿ ಮಾತನಾಡುವ ಬಗ್ಗೆ ಯೋಚಿಸಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ನವರನ್ನು ನಾನು ಮಾತಾಡಿಸಿದ್ದೇ ತಪ್ಪಾ? ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ. ಮುತ್ಸದ್ದಿ. ನಿರ್ವಹಿಸಿದ ಖಾತೆಗೆಲ್ಲಾ ಜೀವ ತುಂಬಿದವರು. ಅವರ ಬಗ್ಗೆ ಲಘುವಾಗಿ ಮಾತಾನಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪ ಸಹಜ. ಆದರೆ, ಬೇರೆ ಪಕ್ಷದವರನ್ನು ಭೇಟಿಯಾಗುವುದು ಘೋರ ಅಪರಾಧವೇ? ನನ್ನ ಬಾವುಟ ಬದಲಾಗಿರಬಹುದು; ಕಾರ್ಯಸೂಚಿ ಬದಲಾಗಿಲ್ಲ. ಕಾಂಗ್ರೆಸ್ ‌ನನ್ನ ತಾಯಿ ಎಂದೇ ಹಿಂದೆಯೂ ಹೇಳಿದ್ದೇನೆ; ಮುಂದೆಯೂ ಹೇಳುತ್ತೇನೆ. 40 ವರ್ಷ ಸಾಕಿದ ಪಕ್ಷವದು. ಜೆಡಿಎಸ್ ಜಾತ್ಯತೀತ ಮನೋಭಾವ ಬೆಳೆಸಿದೆ. ಬಿಜೆಪಿಗೆ ಬಂದ ಮೇಲೂ ನನ್ನ ತತ್ವ- ಸಿದ್ಧಾಂತವನ್ನು ಬಿಟ್ಟಿಲ್ಲ’ ಎಂದರು.

ಬಿಜೆಪಿಯಲ್ಲಿ ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಹೊರಗಿನಿಂದ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಒಳ ಹೋದಾಗಲೇ ಅಲ್ಲಿ ಏನೇನಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT