ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ; ಸುಗಮ ಆರಂಭ

Published 25 ಮಾರ್ಚ್ 2024, 16:26 IST
Last Updated 25 ಮಾರ್ಚ್ 2024, 16:26 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸೋಮವಾರದಿಂದ ಆರಂಭಗೊಂಡಿದ್ದು, ಪ್ರಥಮ ಭಾಷೆ ವಿಷಯ ಪರೀಕ್ಷೆಯು ಯಾವುದೇ ಗೊಂದಲಗಳಿಲ್ಲದಂತೆ ಸುಸೂತ್ರವಾಗಿ ನಡೆದಿದೆ.

ನಗರದ 42 ಕೇಂದ್ರಗಳೂ ಸೇರಿದಂತೆ ಜಿಲ್ಲೆಯ 132 ಕೇಂದ್ರಗಳಲ್ಲಿ 37,459 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 446 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಎಲ್ಲಿಯೂ ಪರೀಕ್ಷೆ ನಕಲು ಮತ್ತು ಡಿಬಾರ್‌ ಆಗಿರುವ ಪ್ರಕರಣಗಳು ದಾಖಲಾಗಿಲ್ಲ. 

ಹೂ ನೀಡಿ ಸ್ವಾಗತ: ಮೊದಲ ದಿನವಾದ್ದರಿಂದ ಕೆಲವು ಕೇಂದ್ರಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂಗಳನ್ನು ನೀಡಿ ಸ್ವಾಗತಿಸಿದರು. ಪರೀಕ್ಷೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೆಲವೆಡೆ ವಿತರಿಸಲಾಯಿತು. ವಿವಿಧ ಸಂಘಟನೆ ಸದಸ್ಯರು ಕೇಂದ್ರದ ಹೊರಗೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.

ನಗರದ ಮರಿಮಲ್ಲಪ್ಪ ಶಾಲೆ ಬಳಿ ಹಲವು ಪೋಷಕರೂ ತಮ್ಮ ಮಕ್ಕಳೊಂದಿಗೆ ಆಗಮಿಸಿ, ಧೈರ್ಯ ತುಂಬುವುದು. ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸುವುದು ಕಂಡು ಬಂತು. ಮುಂಚಿತವಾಗಿಯೇ ಬಂದ ಮಕ್ಕಳು ಅಲ್ಲಲ್ಲೇ ಗುಂಪುಗೂಡಿ ಅಂತಿಮ ತಯಾರಿ ನಡೆಸುವುದು ಕಂಡುಬಂತು. ಬಹುತೇಕ ಎಲ್ಲ ಕೇಂದ್ರಗಳಲ್ಲೂ ಇದೇ ವಾತಾವರಣವಿತ್ತು.

ಮಹಾರಾಜ ಶಾಲೆ, ಮಹಾರಾಣಿ ಪಿ.ಯು.ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಿಗೆ ಡಿಡಿಪಿಯು ಎಚ್‌.ಕೆ.ಪಾಂಡು ಭೇಟಿ ನೀಡಿದರು. ಆಯಾ ವ್ಯಾಪ್ತಿಯ ಬಿಇಒಗಳು ಕೆಲ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪಾರದರ್ಶಕ ಮತ್ತು ಪ್ರಾಮಾಣಿಕ ಪರೀಕ್ಷೆ ನಡೆಸಲು ಸಿಬ್ಬಂದಿಗೆ ಸೂಚಿಸಿದರು. ಫ್ಲೈಯಿಂಗ್‌ ಸ್ಕ್ವಾಡ್‌ಗಳು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿದವು.

ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್‌ ನಿಷೇಧಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಜೆರಾಕ್ಸ್‌ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು.

ವಾಹನ ವ್ಯವಸ್ಥೆ: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್‌‍ಆರ್‌ಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷಾ ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಪ್ರಯಾಣ ಮಾಡಿದರು. ಬಸ್‌‍ ವ್ಯವಸ್ಥೆ ಇಲ್ಲದಿರುವ ಕಡೆಗಳಲ್ಲಿ ಶಾಲೆಗಳಿಂದಲೂ ವಾಹನ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವವರಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಯಿತು.

ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು– ಪ್ರಜಾವಾಣಿ ಚಿತ್ರ
ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು– ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT