ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರ ಕಡ್ಡಾಯ ಆದೇಶ ಎಲ್ಲ ಶಾಲೆ– ಕಾಲೇಜು ಪಾಲಿಸಬೇಕು: ಸಚಿವ ನಾಗೇಶ್

Last Updated 6 ಫೆಬ್ರುವರಿ 2022, 9:56 IST
ಅಕ್ಷರ ಗಾತ್ರ

ಮೈಸೂರು: ‘ಸಮವಸ್ತ್ರ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಎಲ್ಲಾ ಶಾಲಾ-ಕಾಲೇಜುಗಳು ಪಾಲಿಸಬೇಕು. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿ, ’ಸಮವಸ್ತ್ರ ಇಲ್ಲದೆ ಶಾಲಾ-ಕಾಲೇಜುಗಳಿಗೆ ಪ್ರವೇಶ ಇಲ್ಲವೆಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪಾಲನೆ ಮಾಡದಿದ್ದರೆ ನಿಯಮಾನುಸಾರ ಸರ್ಕಾರ ಕ್ರಮ ಜರುಗಿಸಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು’ ಎಂದರು.

‘ಯಾವುದೇ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ದುರುದ್ದೇಶ ಸರ್ಕಾರಕ್ಕೆ ಇಲ್ಲ. 1983ರ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ಮಾಡಿದ್ದಲ್ಲ. ಕಾಂಗ್ರೆಸ್‌ ಸರ್ಕಾರ ಇದ್ದಾಗಿನಿಂದಲೂ ಇದೆ’ ಎಂದು ಸ್ಪಷ್ಟಪಡಿಸಿದರು.

‘ಇಷ್ಟು ದಿನ ಈ ಸಮಸ್ಯೆ ಇರಲಿಲ್ಲ. ಕೆಲವರು ಮಕ್ಕಳನ್ನು ಪ್ರಚೋದಿಸಿ ಹಿಜಾಬ್‌ ಧರಿಸಿಕೊಂಡು ಶಾಲೆಗೆ ಹೋಗುವಂತೆ ಮಾಡಿದರು. ಧರ್ಮಪಾಲನೆ ಹೆಸರಿನಲ್ಲಿ ವಿಷಬೀಜ ಬಿತ್ತಿದರು. ಉಡುಪಿಯ ಶಾಲೆಯಲ್ಲಿ ಕಲಿಯತ್ತಿರುವ 92 ಮುಸ್ಲಿಂ ಮಕ್ಕಳಲ್ಲಿ 6 ಮಂದಿ ಮಾತ್ರ ಹಿಜಾಬ್‌ಗೆ ಹಟ ಹಿಡಿದರು. ಇದರಿಂದ ಗೊಂದಲ ಸೃಷ್ಟಿಯಾಯಿತು’ ಎಂದು ಹೇಳಿದರು.

‘ಪಾಪ್ಯುಲರ್‌ ಫ್ರಂಟ್ ಯಾರ ಕೈಯಲ್ಲಿದೆ, ಈಗಿನ ವಿವಾದದ ಹಿಂದೆ ಯಾರ ಕೈವಾಡ ಇದೆ ಎಂಬುದು ಜಗತ್ತಿಗೆ ಗೊತ್ತು. ಅವರ ಕುಮ್ಮಕ್ಕಿನಿಂದ ಆ ಮಕ್ಕಳು ಹಿಜಾಬ್ ಧರಿಸಿದ್ದಾರೆ. ಹಿಜಾಬ್‌ ಪರ ಮಾತನಾಡಿರುವ ರಾಹುಲ್‌ ಗಾಂಧಿಗೆ ಮಾಹಿತಿ ಕೊರತೆ ಇದೆ. ಐವತ್ತು ವರ್ಷ ಆಳಿದ ಕಾಂಗ್ರೆಸ್‌ಗೆ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಕಾಳಜಿ ಇದೆ ಅಂತ ಗೊತ್ತಿದೆ. ಇಟಲಿ, ಫ್ರಾನ್ಸ್ ಅಲ್ಲದೆ, ಕೆಲವು ಮುಸ್ಲಿಂ ರಾಷ್ಟ್ರಗಳಲ್ಲೂ ಹಿಜಾಬ್ ನಿಷೇಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT