ಮಂಗಳವಾರ, ಜನವರಿ 31, 2023
26 °C
69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಜಿ.ಡಿ.ಹರೀಶ್‌ಗೌಡ

ರೈತರು, ಸಹಕಾರಿಗಳಿಗೆ ‘ಯಶಸ್ವಿನಿ’ ಆಶಾಕಿರಣ- ಜಿ.ಡಿ.ಹರೀಶ್‌ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ ಬಂದಿದ್ದು, ಸಹಕಾರಿಗಳ ಸದಸ್ಯರೆಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಸಲಹೆ ನೀಡಿದರು.

ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ ರಕ್ಷಣೆ ದುಬಾರಿಯಾಗಿರುವ ಈ ಕಾಲದಲ್ಲಿ ಯಶಸ್ವಿನಿ ಯೋಜನೆಯು ಆಶಾಕಿರಣದಂತೆ ಬಂದಿದೆ. ಸಹಕಾರಿ ಸಂಘದ ಸದಸ್ಯರಿಗೆಂದೇ ಈ ಯೋಜನೆ ರೂಪಿಸಲಾಗಿದೆ. ಜನರಲ್ಲಿ ಅರಿವು ಮೂಡಿಸುವ ಮೂಲಕ ಸಹಕಾರ ಸಂಸ್ಥೆಗಳ ಜೊತೆ ಸಾಗುವಂತೆ ಅವರನ್ನು ಪ್ರೇರೇಪಿಸಬೇಕು. ಯೋಜನೆಗೆ ಹೆಚ್ಚು ಜನರು ನೋಂದಣಿ ಮಾಡಿಸಬೇಕು’ ಎಂದರು.

ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ‘ನ.14 ಜವಾಹರಲಾಲ್‌ ನೆಹರೂ ಜಯಂತಿಯೂ ಆಗಿದೆ. ಅವರು ಸಹಕಾರ ಕ್ಷೇತ್ರದ ಕೊಡುಗೆ ಹಾಗೂ ತತ್ವಗಳಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಸಪ್ತಾಹದ ಈ ಅವಧಿಯಲ್ಲಿ ಸಹಕಾರ ಕ್ಷೇತ್ರದ ಸಾಧನೆಗಳು, ವೈಫಲ್ಯಗಳ ಬಗ್ಗೆ ಚಿಂತನೆ–ವಿಮರ್ಶೆ ನಡೆಸಿ ಅವರ ನಂಬಿಕೆಯಂತೆ ಅಭಿವೃದ್ಧಿ ಕಡೆ ಸಾಗಬೇಕು’ ಎಂದು ತಿಳಿಸಿದರು.

‘ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ವ್ಯಾಪಾರ ಸರಳೀಕರಣ ಹಾಗೂ ರಫ್ತು ವೃದ್ಧಿಗಾಗಿ ‘ಜೆಮ್‌–ಪೋರ್ಟಲ್‌’ ಎಂಬ ಡಿಜಿಟಲ್‌ ವ್ಯವಸ್ಥೆಯ ಜೊತೆ ಕಾರ್ಯನಿರ್ವಹಿಸುತ್ತಿದ್ದೇವೆ. ಸಹಕಾರಿ ತತ್ವದ ಮೈಮುಲ್‌ ಘಟಕ ಹೊಸ ಪ್ರಯತ್ನಗಳಿಂದ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ‘ನಂದಿನಿ’ಯು ಬ್ರ್ಯಾಂಡ್‌ ಆಗಿ ಬೆಳೆದಿದೆ. ಇದೇ ಮಾದರಿಯಲ್ಲಿ ಸಹಕಾರಿ ಕ್ಷೇತ್ರವೂ ಬೆಳೆಯಬೇಕು’ ಎಂದು ಆಶಿಸಿದರು.

ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಚಿಕ್ಕಹಳ್ಳಿ ಕುಮಾರ್ ಮಾತನಾಡಿದರು. ‘ಜೆಮ್-ಪೋರ್ಟಲ್’ ಬಳಕೆ ಕುರಿತು ಉಪನ್ಯಾಸಕ ಮಹದೇವಪ್ಪ ಎಸ್. ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎಂ.ಬಿ.ಮಂಜೇಗೌಡ, ಭೈರಪ್ಪ ವೈ., ಎಚ್‌.ಎಸ್‌.ಪ್ರಶಾಂತ್ ತಾತಾಚಾರ್, ಮೈಮುಲ್ ನಿರ್ದೇಶಕರಾದ ಎಸ್.ಸಿ.ಅಶೋಕ್, ಲೀಲಾ ನಾಗರಾಜ್, ಅಧಿಕಾರಿಗಳಾದ ಹರೀಶ್ ಕುಮಾರ್.ಕೆ.ಎಸ್, ಜಿ.ಆರ್‌.ವಿಜಯ್‌ಕುಮಾರ್‌, ಬಿ.ಎನ್‌.ವಿಜಯ್‌ಕುಮಾರ್‌, ಡಾ.ಸಣ್ಣತಮ್ಮೇಗೌಡ, ಡಾ.ದಿವಾಕರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು