ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ಬಿಸಿಲಿಗೆ ಕಂಗಾಲಾದ ಮೈಸೂರು ಜನ

38 ಡಿಗ್ರಿ ದಾಟಿದ ಉಷ್ಣಾಂಶ; ಬಿಸಿಗಾಳಿ ಬೀಸಿದ ಅನುಭವ; ವೃದ್ಧರು–ಮಕ್ಕಳ ಪರಿತಾಪ
Published 5 ಏಪ್ರಿಲ್ 2024, 6:39 IST
Last Updated 5 ಏಪ್ರಿಲ್ 2024, 6:39 IST
ಅಕ್ಷರ ಗಾತ್ರ

ಮೈಸೂರು: ಏಪ್ರಿಲ್‌ ಮೊದಲ ವಾರದಲ್ಲಿ ಬಿಸಿಲ ತಾಪ ಇನ್ನಷ್ಟು ಹೆಚ್ಚಾಗಿದ್ದು, ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಜನ ಮನೆಯಿಂದ ಹೊರಗೆ ಕಾಲಿಡಲು ಹೆದರುವಂತೆ ಆಗಿದೆ.

ಮೈಸೂರು ನಗರದಲ್ಲಿ ಗುರುವಾರ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆ. ಇದ್ದರೆ, ಗರಿಷ್ಠ 38 ಡಿಗ್ರಿಯಷ್ಟಿತ್ತು. ಮುಂದಿನ ಕೆಲವು ದಿನಗಳಲ್ಲಿ ಈ ಪ್ರಮಾಣ 40 ಡಿಗ್ರಿ ಸೆ.ವರೆಗೆ ತಲುಪುವ ನಿರೀಕ್ಷೆ ಇದೆ. ಇದು ಈಚಿನ ವರ್ಷಗಳಲ್ಲೇ ಗರಿಷ್ಠ ತಾಪಮಾನ ಆಗಲಿದೆ.

ಬೆಳಿಗ್ಗೆ 8ರಿಂದಲೇ ಜನರಿಗೆ ಬಿಸಿಲಿನ ತಾಪದ ಅನುಭವ ಆಗುತ್ತಿದ್ದು, ಹೊತ್ತು ಕಳೆದಂತೆಲ್ಲ ಸೆಖೆಯ ಪ್ರಲಾಪ ಹೆಚ್ಚಾಗಿದೆ. ಮಧ್ಯಾಹ್ನದ ಹೊತ್ತು ಬಿಸಿಗಾಳಿ ಬೀಸಿದ ಅನುಭವ ಆಗುತ್ತಿದೆ. ರಾತ್ರಿ ವೇಳೆಯಲ್ಲಿ ವಿಪರೀತ ಸೆಖೆ ಇದ್ದು, ನಿದ್ರೆ ಮಾಡಲಾಗದಂತಹ ಪರಿಸ್ಥಿತಿ ಇದೆ. ಇದರಿಂದಾಗಿ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತಿವೆ.

ಉಷ್ಣಾಂಶ ಹೆಚ್ಚಳದಿಂದಾಗಿ ಜನರಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿವೆ. ಬಿಸಿಲು ಹೆಚ್ಚಿದಷ್ಟು ವೈರಾಣು ಜ್ವರ, ವಾಂತಿ–ಬೇಧಿಯಂತಹ ಸಮಸ್ಯೆ ಹೆಚ್ಚಾಗುತ್ತಿವೆ. ಅದರಲ್ಲೂ ಮನೆಯ ಒಬ್ಬರಿಗೆ ಜ್ವರ ಬಂದರೆ ಅದು ಮನೆಮಂದಿಗೆಲ್ಲ ಹರಡುತ್ತಿದೆ. ಜೊತೆಗೆ ಸೀತಾಳ ಸಿಡುಬಿನಂತಹ ಆರೋಗ್ಯ ಸಮಸ್ಯೆಗಳು ಬೇಸಿಗೆಯಲ್ಲೇ ಹೆಚ್ಚು. ಹೀಗಾಗಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳಿತು ಎನ್ನುವುದು ವೈದ್ಯರ ಸಲಹೆ.

‘ಕೆಲವು ದಿನಗಳಿಂದ ವೈರಾಣು ಜ್ವರದ ಸಮಸ್ಯೆ ಕೊಂಚ ಹೆಚ್ಚಿದೆ. ಸದ್ಯ ಮಕ್ಕಳಿಗೆ ಪರೀಕ್ಷೆಗಳು ನಡೆದಿರುವ ಕಾರಣ ಹೆಚ್ಚಿನವರು ಹೊರಗೆ ಕಾಲಿಟ್ಟಿಲ್ಲ. ಹೀಗಾಗಿ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಆಗಿಲ್ಲ. ಹೊರಗೆ ತುಂಬಾ ಬಿಸಿಲು ಇರುವ ಕಾರಣ, ಮಕ್ಕಳು–ವೃದ್ಧರು ಆರೋಗ್ಯ ಕಾಳಜಿ ವಹಿಸಬೇಕು’ ಎನ್ನುತ್ತಾರೆ ಕೆ.ಆರ್‌. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಆರ್. ಯೋಗೀಶ್‌.

‘ಬೇಸಿಗೆಗೆ ಆಹಾರ ಕ್ರಮದಲ್ಲೂ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ದ್ರವಯುಕ್ತ ಆಹಾರಕ್ಕೆ ಮೊದಲ ಆದ್ಯತೆ ನೀಡಬೇಕು. ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಮಸಾಲೆಯುಕ್ತ ಹಾಗೂ ಮಾಂಸಾಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಒಂದೇ ಬಾರಿ ಹೆಚ್ಚು ತಿನ್ನುವುದಕ್ಕಿಂತ ಆಗಾಗ್ಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು’ ಎನ್ನುವುದು ಅವರ ಸಲಹೆ.

ಬೇಸಿಗೆ ಧಗೆಗೆ ಸಲಹೆಗಳು

ರಾಜ್ಯದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಬೀಸಿದ ಅನುಭವ ಆಗುತ್ತಿದ್ದು ತಾಪಮಾನ ಇನ್ನಷ್ಟು ಏರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ. ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಲ್ಲಿ ಓಡಾಡುವುದನ್ನು ತಪ್ಪಿಸಿ ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಿರಿ ಹಗುರವಾದ ತಿಳಿ ಬಣ್ಣಗಳ ಸಡಿಲವಾದ ಉಡುಪುಗಳನ್ನು ಧರಿಸಿ ಹೊರಗೆ ಹೋಗುವಾಗ ನೀರಿನ ಬಾಟಲಿ ಒಯ್ಯಿರಿ ಆಲ್ಕೋಹಾಲ್‌ ಚಹಾ ಕಾಫಿ ಸೇವನೆ ಕಡಿಮೆ ಮಾಡಿ ನಿಂಬೆ ರಸ ಮಜ್ಜಿಗೆ ತಾಜಾ ಹಣ್ಣಿನ ಪಾನೀಯ ಸೇವಿಸಿ ಬಿಸಿಲಿನಲ್ಲಿ ಓಡಾಡುವಾಗ ಟೋಪಿ ಛತ್ರಿ ಬಳಸಿ ನಿಲ್ಲಿಸಿದ ವಾಹನಗಳ ಒಳಗೆ ಸಾಕುಪ್ರಾಣಿಗಳನ್ನು ಬಿಡದಿರಿ

ಹಣ್ಣುಗಳಿಗೆ ಬೇಡಿಕೆ

ಬಿಸಿಲು ಹೆಚ್ಚಾದಷ್ಟು ತಾಜಾ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದ್ದು ನಗರದ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ–ಖರಬೂಜ ಮೊದಲಾದ ಬೇಸಿಗೆ ವಿಶೇಷ ಹಣ್ಣುಗಳ ಮಾರಾಟ ಹೆಚ್ಚಿದೆ. ಜನರು ದೊಡ್ಡ ಗಾತ್ರದ ಹಣ್ಣುಗಳನ್ನು ಕೊಂಡೊಯ್ಯುತ್ತಿದ್ದಾರೆ. ಜೊತೆಗೆ ರಸ್ತೆ ಬದಿಯಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟ ಹಾಗೂ ಜ್ಯೂಸ್‌ಗೂ ಬೇಡಿಕೆ ಕುದುರಿದೆ. ಕಲ್ಲಂಗಡಿ ಹಣ್ಣಿನ ಬೆಲೆ ಪ್ರತಿ ಕೆ.ಜಿ.ಗೆ ₹40ಕ್ಕೆ ಹಾಗೂ ಖರಬೂಜದ ಬೆಲೆ ₹50ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT