ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಜಾತ್ರೆ | ಜಾತಿಯಿಂದಲ್ಲ, ಉತ್ತಮ‌ ಬದುಕಿನಿಂದ ಶ್ರೇಷ್ಠತೆ: ಸಿದ್ದರಾಮಯ್ಯ

Published 7 ಫೆಬ್ರುವರಿ 2024, 15:10 IST
Last Updated 7 ಫೆಬ್ರುವರಿ 2024, 15:10 IST
ಅಕ್ಷರ ಗಾತ್ರ

ಮೈಸೂರು: ಯಾವ ಜಾತಿಯಲ್ಲಿ ಹುಟ್ಟಿದೆ ಎಂಬುದರ ಮೇಲೆ ಶ್ರೇಷ್ಠತೆ ನಿಗದಿ ಆಗುವುದಿಲ್ಲ. ಮನುಷ್ಯರಾಗಿ ಬಾಳುವುದರಿಂದ ಶ್ರೇಷ್ಠತೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುತ್ತೂರು ಜಾತ್ರೆಯ ವೇದಿಕೆಯಲ್ಲಿ ಬುಧವಾರ ಸಂಜೆ ದೇಸಿ ಆಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಇಂದು ಜಾತಿ, ಮೇಲು-ಕೀಳು ಎನ್ನುವ ಭಾವನೆ ಇದೆ. ಅದರ ಬದಲಿಗೆ ಸಮಾನತೆ ಸ್ಥಾಪಿಸುವ ಅಗತ್ಯ ಇದೆ ಎಂದರು.

ಬಸವಾದಿ ಶರಣರು ಸಮ‌ ಸಮಾಜದ ನಿರ್ಮಾಣದ ಪ್ರಯತ್ನ ಮಾಡಿದ್ದರು. ಕಂದಾಚಾರ ತೊಡೆದು, ವೈಚಾರಿಕತೆ ಬೆಳೆಸಿದ್ದರು. ನಾವೆಲ್ಲರೂ ಮನುಷ್ಯರು. ಪರಸ್ಪರ ಪ್ರೀತಿಯಿಂದ ಬಾಳಬೇಕೆ ಹೊರತು ದ್ಬೇಷಿಸಬಾರದು ಎಂದು ಕಿವಿಮಾತು ಹೇಳಿದರು.

ಕೆಲವರು ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದು, ಅದನ್ನು ತಡೆಯಲು ಇಂತಹ ಜಾತ್ರೆಗಳು ಸಹಕಾರಿ. ಕುವೆಂಪು ಆಶಿಸಿದಂತೆ ನಮ್ಮ ನಾಡು ಸರ್ವ ಜನಾಂಗದ ತೋಟವಾಗಬೇಕು. ಬಸವಣ್ಣ ಹೇಳಿದಂತೆ ಎಲ್ಲವರೂ ನಮ್ಮವ ಎಂಬ ಸಮಾಜ‌ ನಿರ್ಮಾಣ ಆಗಬೇಕು ಎಂದು ಆಶಿಸಿದರು.

'ದೇಶದ ಸಂಪತ್ತು, ಅಧಿಕಾರ ಸಮಾನ ಹಂಚಿಕೆ ಆಗಬೇಕು. ಇವು ಬಲಾಢ್ಯರ ಕೈಯಿಂದ ಜನ ಸಾಮಾನ್ಯರಿಗೆ ವರ್ಗಾವಣೆ ಆಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು. ನಾನು ಮುಖ್ಯಮಂತ್ರಿ ಆಗಲು ಶಿಕ್ಷಣ ಹಾಗೂ ಸಂವಿಧಾನ ಕಾರಣ. ಸಂವಿಧಾನ ಬದಲಾವಣೆಯ ಹುನ್ನಾರ ಈಗಲೂ ನಡೆದಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.

ಇಂದಿನ ಸಮಾಜ‌‌ ಜಾತಿಯಿಂದ ಚಲನಾ ರಹಿತ ಆಗಿದ್ದು, ಜನರಿಗೆ ಸಾಮಾಜಿಕ- ಆರ್ಥಿಕ‌ ಶಿಕ್ಷಣ ಬಂದಾಗ ಮಾತ್ರ ಅದಕ್ಕೆ ಚಲನೆ ದೊರಕಲು ಸಾಧ್ಯ ಎಂದರು.

ಇಂದು ಓದಿದವರಲ್ಲೇ ಜಾತಿ, ಮೌಢ್ಯ ಹೆಚ್ಚಾಗಿದೆ. ನರಕ-ನಾಕ, ಹಣೆಬರಹ ಎಂಬುದೆಲ್ಲ‌‌ ಮಿಥ್ಯ. ಈ ಜನ್ಮವಷ್ಟೇ ಸತ್ಯ.‌ ನಾವೆಲ್ಲರೂ ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ಜೀವನ ಸಾರ್ಥಕಗೊಳಿಸುವ ಪ್ರಯತ್ನ ಮಾಡಬೇಕು. ಮಕ್ಕಳಿಗೆ ವೈಚಾರಿಕ‌ ಶಿಕ್ಷಣ ನೀಡಿ. ಮೌಢ್ಯ ಬೆಳೆಸಬೇಡಿ.‌ ಆಗ ಮಾತ್ರ ಮನುಷ್ಯರಾಗಿ ಚಿಂತನೆ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ದೇಸಿ ಆಟವಾಡಿದ ಸಿದ್ದರಾಮಯ್ಯ, ಸಚಿವರು

ಜಾತ್ರೆ ಅಂಗವಾಗಿ ಆಯೋಜಿಸಿರುವ ದೇಸಿ ಆಟಗಳ ಸ್ಪರ್ಧೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಕೆಲಹೊತ್ತು ವಿವಿಧ ಗ್ರಾಮೀಣ ಆಟಗಳನ್ನಾಡುವ ಮೂಲಕ ಗಮನ ಸೆಳೆದರು. ಸಚಿವರಾದ ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಎಚ್.ಸಿ.‌ ಮಹದೇವಪ್ಪ, ವೆಂಕಟೇಶ್ ಸಾಥ್‌ ನೀಡಿದರು. ಹುಲಿ-ಕುರಿ, ಹಾವು-ಏಣಿ, ಚದುರಂಗ, ಚೌಕಾಬಾರ, ಅಳಿಗುಳಿಮನೆ ಆಟಗಳನ್ನು ವೇದಿಕೆಯಲ್ಲಿ ಆಡಲಾಯಿತು.

'ವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕ' ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೊ ಮುಂದೆ ಈ ಘೋಷಣೆ ಬರೆಯಿಸಲಾಗುವುದು
–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT