ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು, ನವೋದ್ಯಮಿಗಳಿಗೆ ‘ಟೆಕ್‌ ಭಾರತ್’: ಸಿ.ಎನ್‌.ಭೋಜರಾಜ್‌

ಮೇ 19ರಿಂದ 21ರವರೆಗೆ ಆಹಾರ ತಂತ್ರಜ್ಞಾನ ವಸ್ತು ಪ್ರದರ್ಶನ l ಮುಖ್ಯಮಂತ್ರಿ ಭಾಗಿ
Last Updated 10 ಮೇ 2022, 9:25 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಉತ್ಪ‍ನ್ನಗಳ ಆಧಾರಿತ ನವೋದ್ಯಮಗಳ ಸ್ಥಾಪಿಸುವವರಿಗಾಗಿ ಇಲ್ಲಿನಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಆವರಣದಲ್ಲಿ ಮೇ 19ರಿಂದ 22ರವರೆಗೆಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’ ಆಯೋಜಿಸಲಾಗಿದೆ.

‘ಲಘು ಉದ್ಯೋಗ ಭಾರತಿ– ಕರ್ನಾಟಕ, ಐಎಂಎಸ್‌ ಫೌಂಡೇಶನ್‌ ವತಿಯಿಂದ ಸಿಎಸ್‌ಐಆರ್‌– ಸಿಎಫ್‌ಟಿಆರ್‌ಐ ಸಹಯೋಗದಲ್ಲಿ ನಡೆಯಲಿರುವ ತಂತ್ರಜ್ಞಾನ ವಸ್ತುಪ್ರದರ್ಶನ ಮತ್ತು ಸಮಾವೇಶವನ್ನು ಮೇ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ’ ಎಂದು ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿ ಸಿ.ಎನ್‌.ಭೋಜರಾಜ್‌ ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಗಾವಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಕಾರ್ಯಕ್ರಮ ಯಶಸ್ವಿಯಾಗಿವೆ. ಇದೀಗ ಸಿಎಫ್‌ಟಿಆರ್‌ಐನಲ್ಲಿ ನಡೆಯುವ ಮುಖ್ಯ ಸಮಾವೇಶಕ್ಕೆ ದೇಶದ ಕೃಷಿ, ಆಹಾರ ತಂತ್ರಜ್ಞಾನ ಮುಂಚೂಣಿ ಕಂಪನಿಗಳು ಭಾಗವಹಿಸಲಿವೆ’ ಎಂದರು.

‘19ರಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಕೈಲಾಶ್‌ ಚೌಧರಿ, ಪಶುಪತಿ ಕುಮಾರ್‌ ಪಾರಸ್‌, ಸಂಸದ ಪ್ರತಾಪಸಿಂಹ, ಇನ್ಫೊಸಿಸ್‌ ಮಾಜಿ ಸಿಇಒ ಕ್ರಿಸ್‌ ಗೋಪಾಲಕೃಷ್ಣನ್ ಪಾಲ್ಗೊಳ್ಳಲಿದ್ದು, 20ರ ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌, ನಬಾರ್ಡ್‌ ಮುಖ್ಯಸ್ಥರಾದ ಡಾ.ಜಿ.ಆರ್‌.ಚಿಂತಲಾ, ಸಚಿವ ಸಿ.ಎನ್.ಅಶ್ವತ್ಥ ನಾರಾಯಣ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮೂರು ದಿನಗಳ ಸಮಾವೇಶದಲ್ಲಿ ಹವಾಮಾನ ವೈಪರೀತ್ಯದ ನಡುವೆ ಸುಸ್ಥಿರ ಕೃಷಿ ಆರ್ಥಿಕತೆಯ ಅಭಿವೃದ್ಧಿ, ಆಹಾರ ತಂತ್ರಜ್ಞಾನಗಳ ಬಳಕೆ, ಆಹಾರ ಸಂರಕ್ಷಣೆ, ಮಹಿಳೆಯರ ಸಬಲೀಕರಣಕ್ಕೆ ಆಹಾರೋದ್ಯಮಗಳ ಸ್ಥಾಪನೆ, ಉದ್ಯಮ ಮತ್ತು ಮಾರುಕಟ್ಟೆ ವಿಸ್ತರಣೆ, ರಫ್ತು ಹೆಚ್ಚಳ, ಕೃಷಿ ಸವಾಲುಗಳು ಮತ್ತು ಪರಿಹಾರದ ಕುರಿತು ವಿಚಾರ ಸಂಕಿರಣಗಳು ಇರಲಿವೆ’ ಎಂದರು.

‘ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿದ್ದು, ಇದುವರೆಗೂ 40 ಮಂದಿ ನೋಂದಾಯಿಸಿಕೊಂಡಿದ್ದಾರೆ. ಆಹಾರ ತಂತ್ರಜ್ಞಾನ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ. ರೈತರು, ವಿದ್ಯಾರ್ಥಿಗಳು, ನವೋದ್ಯಮಿಗಳಾಗುವ ಕನಸು ಕಂಡವರೂ ಇದರಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಿಎಫ್‌ಟಿಆರ್‌ಐನ 400 ತಂತ್ರಜ್ಞಾನ ಲಭ್ಯ: ‘ಅಮುಲ್‌ ದೇಶದ ಡೇರಿ ಉದ್ಯಮಗಳ ಯಶಸ್ಸಿನಲ್ಲಿ ಸಿಎಫ್‌ಟಿಆರ್‌ಐ ಕೊಡುಗೆ ಇದೆ. ಭತ್ತ ಸಂಸ್ಕರಣೆಯ ತಂತ್ರಜ್ಞಾನವನ್ನು ಏಷ್ಯಾದ ಶೇ 80ರಷ್ಟು ಆಹಾರ ಉದ್ಯಮಗಳು ಬಳಸುತ್ತಿವೆ. ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಅಂತಹ 400 ತಂತ್ರಜ್ಞಾನಗಳು ವಸ್ತುಪ್ರದರ್ಶನದಲ್ಲಿ ಲಭ್ಯವಿವೆ’ ಎಂದು ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್‌ ಹೇಳಿದರು.

‘ಕೋವಿಡ್‌ ನಂತರ ಆಹಾರೋದ್ಯಮಗಳು ಹೆಚ್ಚು ಸ್ಥಾಪನೆಯಾಗುತ್ತಿವೆ. ರೈತರ ಆದಾಯ ದ್ವಿಗುಣಗೊಳಿಸುವುದು, ರಪ್ತು ಹೆಚ್ಚಿಸುವುದು ಗುರಿಯಾಗಿದೆ. ಅದಕ್ಕಾಗಿ ಸಂಸ್ಥೆಯು ಪೂರಕ ಕೆಲಸ ಮಾಡುತ್ತಿದೆ. ಸಂಸ್ಥೆಯ ತಂತ್ರಜ್ಞಾನದ ಹಕ್ಕನ್ನು 5 ಸಾವಿರಕ್ಕೂ ಹೆಚ್ಚು ನವೋದ್ಯಮಿಗಳು ಪಡೆದು ಉದ್ಯಮ ಆರಂಭಿಸಿದ್ದಾರೆ. ಟೆಕ್‌ ಭಾರತ್‌ ಸಮಾವೇಶದಲ್ಲಿ ಸಂಸ್ಥೆಯ ವಿಜ್ಞಾನಿಗಳು, ದೇಶದ ಉದ್ಯಮಿಗಳು ಪಾಲ್ಗೊಂಡು ಚರ್ಚಿಸಲಿದ್ದಾರೆ’ ಎಂದರು.

ಲಘು ಉದ್ಯೋಗ ಭಾರತಿ ಕರ್ನಾಟಕದ ಉಪಾಧ್ಯಕ್ಷೆ ಛಾಯಾ ನಂಜಪ್ಪ ಮಾತನಾಡಿ, ‘ಕೃಷಿ ಮತ್ತು ಆಹಾರ ತಂತ್ರಜ್ಞಾನ ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ಮೈಸೂರಿನಲ್ಲಿದ್ದು, ನವೋದ್ಯಮಗಳು ರೂಪುಗೊಳ್ಳಲು ವಿಫುಲ ಅವಕಾಶಗಳಿವೆ. ಸಿಎಫ್‌ಟಿಆರ್‌ಐ ಕಡಿಮೆ ದರಕ್ಕೆ ತಂತ್ರಜ್ಞಾನದ ಹಕ್ಕುಗಳನ್ನು ನೀಡುತ್ತಿದೆ. ಹೀಗಾಗಿ ಟೆಕ್‌ ಭಾರತ್‌ ಅನ್ನು ಇಲ್ಲಿಯೇ ಆಯೋಜಿಸಲಾಗಿದೆ’ ಎಂದರು.

ಸಿಎಫ್‌ಟಿಆರ್‌ಐನ ತಂತ್ರಜ್ಞಾನ ವರ್ಗಾವಣೆ ಮತ್ತು ವ್ಯಾಪಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಸತ್ಯೇಂದ್ರ ರಾವ್, ಲಘು ಉದ್ಯೋಗ ಭಾರತಿ ಕಾರ್ಯಕಾರಣಿ ಸದಸ್ಯ ರಾಜೀವ್‌, ಮೈಸೂರು ವಿಭಾಗದ ಕಾರ್ಯದರ್ಶಿ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT