ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ತುಂಡರಿಸಿ ಕಾಡಾನೆಯನ್ನು ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ನೆಲದ ಹುಲ್ಲು ತಿನ್ನಲು ಸಂಕಷ್ಟ; ಅರಣ್ಯ ಇಲಾಖೆಯಿಂದ ಕ್ರಮ
ಸತೀಶ್ ಬಿ.ಆರಾಧ್ಯ
Published 14 ಮೇ 2024, 5:28 IST
Last Updated 14 ಮೇ 2024, 5:28 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಉದ್ದನೆಯ ದಂತದ ಕಾರಣದಿಂದ ನೆಲದಲ್ಲಿನ ಹುಲ್ಲನ್ನು ತಿನ್ನಲಾಗದೇ ಆಹಾರಕ್ಕಾಗಿ ರೈತರ ಜಮೀನಿಗೆ ದಾಳಿಯಿಡುತ್ತಿದ್ದ ಕಾಡಾನೆಯನ್ನು ಈಚೆಗೆ ಸೆರೆಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು ದಂತ ತುಂಡರಿಸಿ ಕಾಡಿಗೆ ಬಿಟ್ಟಿದ್ದಾರೆ.

ಈ ಆನೆಯನ್ನು ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದಲ್ಲಿ ಸೆರೆ ಹಿಡಿದು, ಗುಂಡ್ರೆ ವನ್ಯ ಜೀವಿ ವಲಯದ ನಾಯಿಹಳ್ಳ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಬಿಡಲಾಗಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಆನೆಗಳ ದಂತಗಳು ಸೊಂಡಿಲಿಗೂ ಹೆಚ್ಚು ಉದ್ದನೆಯಾಗಿ ನೇರವಾಗಿ ಬೆಳೆದರೆ ಅಂತಹ ಸಂದರ್ಭದಲ್ಲಿ ಆನೆಗಳಿಗೆ ನೆಲದ ಮೇಲೆ ಸಿಗುವ ಹುಲ್ಲನ್ನು ಕಿತ್ತು ತಿನ್ನಲು ಸಾಧ್ಯವಾಗುವುದಿಲ್ಲ, ಇಂತಹ ಆನೆಗಳು ಸಹಜವಾಗಿ ಏತ್ತರದ ಮರಗಿಡಗಳಲ್ಲಿ ಸಿಗುವ ಆಹಾರವನ್ನು ಹುಡುಕುತ್ತವೆ. ಸುಲಭವಾಗಿ ಸಿಗುವ ಬಾಳೆ, ತೆಂಗು ಸೇರಿದಂತೆ ರೈತರು ಬೆಳೆದಿರುವ ಬೆಳೆಗಳನ್ನು ಅವಲಂಬಿಸುತ್ತವೆ.

ಈ ಆನೆಯೂ ನಾಯಿಹಳ್ಳ ವ್ಯಾಪ್ತಿಯ ರೈತರ ಜಮೀನಿನಲ್ಲಿ ಸುಲಭವಾಗಿ ಸಿಗುವ ಬಾಳೆ, ತೆಂಗು ಸೇರಿದಂತೆ ಇತರ ಬೆಳೆಗಳಿಗೆ ದಾಳಿಯಿಡುತ್ತಿತ್ತು. ಇದನ್ನು ಮನಗಂಡ ಅಧಿಕಾರಿಗಳು, ಆನೆಯ ಎರಡೂ ದಂತಗಳನ್ನು ಅರ್ಧಕ್ಕೆ ಕತ್ತರಿಸಿದ್ದು, ಕಾಡಿಗೆ ಬಿಟ್ಟಿದ್ದಾರೆ. ಈ ಕೆಲಸಕ್ಕೆ ಸಾಕಾನೆಗಳಾದ ಭೀಮ ಮತ್ತು ಅಭಿಮನ್ಯುವಿನ ಸಹಕಾರ ತೆಗೆದುಕೊಳ್ಳಲಾಗಿತ್ತು.

‘ಕಾಡಂಚಿನ ಗ್ರಾಮ ಗೆಂಡತ್ತೂರು ಗ್ರಾಮದಲ್ಲಿ ಕೃಷಿಯಿಂದ ಜೀವನ ನಡೆಸುತ್ತಿದ್ದೇವೆ. ಉಪಟಳ ಕೊಡುತ್ತಿರುವ ಕಾಡಾನೆ ಇಲ್ಲಿ ತೊಂದರ ಕೊಟ್ಟರೆ ತುಂಬಾ ಕಷ್ಟವಾಗುತ್ತದೆ. ಇಲ್ಲಿ ಆನೆಯನ್ನು ಬಿಡಬಾರದು’ ಎಂದು ಗ್ರಾಮಸ್ಥ ರಾಮೇಗೌಡ ಅರಣ್ಯ ಇಲಾಖೆಗೆ ಮನವಿ ಮಾಡಿದರು.

‘ಆನೆಯ ದಂತ ತುಂಡು ಮಾಡಿರುವುದರಿಂದ ಕಾಡಿನ ಇತರೆ ಆನೆಗಳೊಂದಿಗೆ ಸೇರಿಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಅದರ ಮೇವಿಗೆ ತೊಂದರೆ ಉಂಟಾಗಲಾರದು. ಆನೆಯನ್ನು ಬಿಟ್ಟ ನಂತರ ಅದರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ. ದಂತ ಕತ್ತರಿಸಿರುವ ಆನೆಯು ಇದುವರೆಗೂ ರೈತರ ಜಮೀನಿಗೆ ಬಂದಿಲ್ಲ. ರೈತರೂ ಆತಂಕ ಪಡಬೇಕಿಲ್ಲ’ ಎಂದು ಗುಂಡ್ರೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಅಮೃತೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕ ನರಗುಂದ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿರ್ದೇಶಕ ಪ್ರಭಾಕರ್‌, ಆನೆ ಯೋಜನೆ ನಿರ್ದೇಶಕ ಮನೋಜ್‌ ರಂಜನ್‌, ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪಶು ವೈದ್ಯ ವಾಸಿಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆನೆಗಳಲ್ಲಿ ಸೊಂಡಿಲಿಗೂ ಹೆಚ್ಚು ಉದ್ದ ದಂತಗಳು ಬೆಳೆದರೆ ನೆಲದಲ್ಲಿನ ಹುಲ್ಲು ತಿನ್ನಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ದಂತಗಳ ಕತ್ತರಿಸಲಾಗುತ್ತದೆ.
ನಾಗರಾಜು, ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT