ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಗಣತಿ ವಿಚಾರದಲ್ಲಿ ಸರ್ಕಾರವೇ ವಿವಾದ ಹುಟ್ಟುಹಾಕಿದೆ: ಭಗವಂತ ಖೂಬಾ ಆರೋಪ

Published 23 ನವೆಂಬರ್ 2023, 9:13 IST
Last Updated 23 ನವೆಂಬರ್ 2023, 9:13 IST
ಅಕ್ಷರ ಗಾತ್ರ

ಮೈಸೂರು: ಜಾತಿ ಗಣತಿ ವಿಚಾರದಲ್ಲಿ ರಾಜ್ಯ ಸರ್ಕಾರವೇ ವಿವಾದ ಹುಟ್ಟುಹಾಕಿ, ಪರ–ವಿರೋಧ ಚರ್ಚೆ ನಡೆಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ದೂರಿದರು.

ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಕಾಂತರಾಜು ಆಯೋಗದ ವರದಿ ಜಾರಿ ವಿಚಾರದಲ್ಲಿ ಪಕ್ಷದ ನಿಲುವಿಗೆ ನಾವೆಲ್ಲ ಬದ್ಧರಾಗಿದ್ದೇವೆ. ಈ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹೇಳುವುದಿಲ್ಲ’ ಎಂದರು. ಸಿದ್ದರಾಮಯ್ಯ ಸರ್ಕಾರ ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ಆರು ತಿಂಗಳಾಯಿತು. ಗ್ಯಾರಂಟಿ ಯೋಜನೆಗಳು ಸಂಪೂರ್ಣ ಜಾರಿಯಾಗಿಲ್ಲ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ರಾಜ್ಯ ಸರ್ಕಾರ ಬೊಕ್ಕಸ ಲೂಟಿ ಮಾಡುವುದರಲ್ಲಿಯೇ ಹೆಚ್ಚು ಬ್ಯುಸಿ ಆಗಿದೆ. ಒಂದೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದೆ ಎಂದು ಟೀಕಿಸಿದರು.

‘ಬಿಜೆಪಿ ಪ್ರತಿ ಚುನಾವಣೆಯಲ್ಲಿಯೂ ಅನೇಕ ತಂತ್ರಗಾರಿಕೆ ಮಾಡುತ್ತ ಬಂದಿದೆ. ಈ ಬಾರಿಯ ಲೋಕಸಭೆ ಚುನಾವಣೆ ವಿಚಾರದಲ್ಲಿಯೂ ಪಕ್ಷದ ವರಿಷ್ಠರು ಉತ್ತಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸದ್ಯ ನಡೆದಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಬಹುಮತ ಸಿಗಲಿದೆ. ತೆಲಂಗಾಣದಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್‌ ಗಾಂಧಿ ಹೇಳಿಕೆಯು ಕಾಂಗ್ರೆಸ್ ನೇತಾರರ ಮಾನಸಿಕತೆಯನ್ನು ತೋರಿಸುತ್ತದೆ. ಅಧಿಕಾರಕ್ಕಾಗಿ ಯಾರನ್ನು ಎಷ್ಟೇ ಕೀಳುಮಟ್ಟಕ್ಕೆ ಇಳಿದು ಟೀಕೆ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ರಾಹುಲ್‌ ಗಾಂಧಿಗೆ ಬುದ್ಧಿ ಇದೆಯೇ? ಮೋದಿಯಂತಹ ವಿಶ್ವದ ಪ್ರಭಾವಿ ನಾಯಕರ ವಿಚಾರದಲ್ಲಿ ಈ ರೀತಿ ಶಬ್ಧಗಳನ್ನು ಬಳಸುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ. ಅದಕ್ಕೆ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ನ ಸ್ಥಿತಿ ಕ್ಷೀಣಿಸುತ್ತಲೇ ಇದೆ’ ಎಂದರು.

‘ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಗ್ರಾ.ಪಂ. ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹಕಾರ ನೀಡಿಲ್ಲ. ಹಾಗಿದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ನಿಮ್ಮ ಯೋಗ್ಯತೆ ಏನು? ಪ್ರತಿಯೊಂದಕ್ಕೂ ಏಕೆ ಕೇಂದ್ರದ ಕಡೆ ಬೆಟ್ಟು ಮಾಡುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ ಈ ಯೋಜನೆಗೆ ರಾಜ್ಯ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಬೇಕಿತ್ತು. ಆದರೆ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಎಲ್ಲ ಇದೇ ನಿಲುವು ತೆಗೆದುಕೊಂಡಿದ್ದಾರೆ. ಇದೇನಾ ನೀವು ಒಕ್ಕೂಟ ವ್ಯವಸ್ಥೆಗೆ ಕೊಡುವ ಗೌರವ’ ಎಂದು ಪ್ರಶ್ನಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿಯು ಯುವಜನರಿಗೆ ಉತ್ತಮ ಶಿಕ್ಷಣ ನೀಡುವ ಕುರಿತಾಗಿ ಇದೆಯೇ ಹೊರತು ಯಾವುದೇ ಜಾತಿ, ಧರ್ಮದ ಪ್ರಚಾರಕ್ಕೆ ಅಲ್ಲ. ಎರಡೂವರೆ ಲಕ್ಷ ಜನರ ಅಭಿಪ್ರಾಯ ಪಡೆದು ಈ ನೀತಿ ರೂಪಿಸಲಾಗಿದೆ. ಕರ್ನಾಟಕದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ಅವರಿಗಿಂತ ಬುದ್ಧಿವಂತರ? ಪ್ರತಿಯೊಂದರಲ್ಲೂ ರಾಜಕೀಯ ಮಾಡುವವರಿಗೆ ನಾಚಿಕೆ ಆಗಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಹಿಂದಿನ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಮುಂದುವರಿಸಬೇಕು. ಅದು ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಸರ್ಕಾರದ ಜವಾಬ್ದಾರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT