ಮೈಸೂರು: ಸೋರುತ್ತಿರುವ ಶಿಥಿಲ ಕಟ್ಟಡ, ಸರ್ಕಾರಿ ಶಾಲೆಯತ್ತ ಬಾರದ ಮಕ್ಕಳು, ಹಾಜರಾತಿಯ ಕೊರತೆಯಿಂದ ಕಂಗಾಲಾಗಿದ್ದ ಶಾಲೆಗಳೀಗ ಮಾದರಿಯಾಗಿವೆ. ಶಿಕ್ಷಕರ ನಾವಿನ್ಯಪೂರ್ಣ ಕ್ರಮಗಳಿಂದ ನಗರದ ಲಕ್ಷ್ಮಿಪುರಂ ಹಾಗೂ ಕುಕ್ಕರಹಳ್ಳಿ ಸರ್ಕಾರಿ ಶಾಲೆಗಳು ಎಲ್ಲರ ಗಮನ ಸೆಳೆಯುತ್ತಿವೆ.
ಲಕ್ಷ್ಮಿಪುರಂ ಶಾಲೆಯ ಎಸ್.ರವಿಕುಮಾರ್, ಕುಕ್ಕರಹಳ್ಳಿ ಶಾಲೆಯ ಆರ್.ಚಂದ್ರ ಅವರ ಯೋಚನೆ, ಯೋಜನೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲದೇ ಸ್ವಯಂಸೇವಾ ಸಂಸ್ಥೆಗಳು, ದಾನಿಗಳು ನೆರವಾಗಿದ್ದಾರೆ. ಸೆ.5ರ ‘ಶಿಕ್ಷಕರ ದಿನಾಚರಣೆ’ ಪ್ರಯುಕ್ತ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಮುಂದೆ ಇಟ್ಟಿದ್ದಾರೆ.
ಅಭಿವೃದ್ಧಿಗೆ ₹ 3.34 ಕೋಟಿ: 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಲಕ್ಷ್ಮಿಪುರಂನ ನಂಜುಮಳಿಗೆ ಗಾಡಿಚೌಕದಲ್ಲಿರುವ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಂಡಿದೆ. ಶಿಥಿಲಗೊಂಡಿದ್ದ ಶಾಲೆಯ ಅಭಿವೃದ್ಧಿಗೆ ₹ 3.34 ಕೋಟಿ ಹರಿದುಬಂದಿದೆ.
ಈಗಾಗಲೇ ₹ 1.5 ಕೋಟಿ ವೆಚ್ಚದಲ್ಲಿ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣವಾಗಿದ್ದು, ಶಾಲೆಯ ಹಳೆಯ ವಿದ್ಯಾರ್ಥಿ ಅಮೆರಿಕದ ಷಿಕಾಗೊದಲ್ಲಿನ ವೈದ್ಯ ಡಾ.ಬಿ.ಆರ್.ಸಚ್ಚಿದಾನಂದ ಮೂರ್ತಿ ವೆಚ್ಚ ಭರಿಸಿದ್ದಾರೆ. ಇದು ಸಾಧ್ಯವಾಗಿದ್ದು, ಮುಖ್ಯಶಿಕ್ಷಕ ಎಸ್.ರವಿಕುಮಾರ್ ಅವರಿಂದ.
‘ಹೊಸ ಕಟ್ಟಡದಲ್ಲಿ 300 ಆಸನಗಳ ಸಭಾಂಗಣ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಹಾಗೂ ತರಗತಿ ಕೊಠಡಿಗಳಿವೆ. ಎರಡನೇ ಅಂತಸ್ತಿನಲ್ಲಿ ಭೋಜನಾಲಯವಿದೆ. ಇದೀಗ ಮತ್ತೆ 9 ಕೊಠಡಿಗಳಿರುವ ಕಟ್ಟಡವು ನಿರ್ಮಾಣವಾಗಲಿದ್ದು, ಅದರ ಅಂದಾಜು ವೆಚ್ಚ ₹ 1.84 ಕೋಟಿ. ಶಿಕ್ಷಕರ ದಿನಾಚರಣೆ ನಂತರ ಭೂಮಿಪೂಜೆ ನಡೆಯಲಿದೆ’ ಎಂದು ರವಿಕುಮಾರ್ ತಿಳಿಸಿದರು.
‘ಹುಣಸೂರು ತಾಲ್ಲೂಕಿನ ನಂಜಾಪುರದಲ್ಲಿ ಸೇವಾವೃತ್ತಿ ಆರಂಭವಾಯಿತು. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕೆಲಸ ಮಾಡಿದೆ. 2016ರ ಏಪ್ರಿಲ್‌ನಲ್ಲಿ ಲಕ್ಷ್ಮಿಪುರಂ ಶಾಲೆಗೆ ಬಂದಾಗ ಮೂಲಸೌಲಭ್ಯವಿಲ್ಲದೆ ಸೊರಗಿತ್ತು. 6 ವಿದ್ಯಾರ್ಥಿಗಳಿದ್ದರು. ನೀರಿನ ವ್ಯವಸ್ಥೆ ಇರಲಿಲ್ಲ. ಮೊದಲು ಕೊಳವೆಬಾವಿ ತೆಗೆಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು. ಶೌಚಾಲಯಗಳಿಗೆ ದಾನಿಗಳ ಸಹಾಯದಿಂದ ಟೈಲ್ಸ್ ಹಾಕಿಸಲಾಯಿತು. ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದ್ದರಿಂದ ಹಾಜರಾತಿ 60ಕ್ಕೇರಿದೆ’ ಎಂದರು.
‘2021 ಆ.11ರಂದು ವೈದ್ಯ ಸಚ್ಚಿದಾನಂದಮೂರ್ತಿ ಅವರಲ್ಲಿ ಹಳೆ ಕಟ್ಟಡದ ಹೆಂಚು ದುರಸ್ತಿಗೆ ನೆರವು ಬೇಕಿತ್ತೆಂದಿದ್ದೆ. ಅವರು ₹ 1.5 ಕೋಟಿ ವೆಚ್ಚದಲ್ಲಿ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣ ಮಾಡಿದ್ದರು. ಇದೀಗ ಅವರ ಸಹಕಾರದಿಂದಲೇ ₹ 1.84 ಕೋಟಿ ವೆಚ್ಚದಲ್ಲಿ ನೆಲ ಅಂತಸ್ಥಿನ ಕಟ್ಟಡ ನಿರ್ಮಾಣವಾಗಲಿದೆ’ ಎಂದು ಮಾಹಿತಿ ನೀಡಿದರು.
‘1ರಿಂದ 7ತರಗತಿ ವರೆಗೆ 7 ಕೊಠಡಿ, ಸಿಬ್ಬಂದಿ ಹಾಗೂ ಭೋಜನಾಲಯಕ್ಕೆ ತಲಾ ಒಂದು ಕೊಠಡಿ ನಿರ್ಮಾಣವಾಗುತ್ತಿದೆ. ದ್ವಿಭಾಷಾ ಮಾಧ್ಯಮದಲ್ಲಿ ಶಾಲೆ ನಡೆಯುತ್ತಿದ್ದು, ಮುಂದಿನ ವರ್ಷ ಮಕ್ಕಳ ಸಂಖ್ಯೆ 100 ದಾಟಲಿದೆ’ ಎಂದ ಅವರು, ‘ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯೂ ಈ ಬಾರಿ ಬಂದಿದೆ’ ಎಂದು ಸಂತಸ ಹಂಚಿಕೊಂಡರು.
‘ಮಕ್ಕಳಿಗೆ ಹಾಸ್ಟೆಲ್ ಬಸ್ ಸೌಲಭ್ಯ’
ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ‘ಬಸವಮಾರ್ಗ ಫೌಂಡೇಶನ್’ ವಿದ್ಯಾರ್ಥಿನಿಲಯ ಹಾಗೂ ಬಸ್ ಸೇವೆಯನ್ನು ಒದಗಿಸಿದೆ. ಮಾದರಿ ಶಾಲೆಯಾಗಿ ಹೊಮ್ಮಿರುವುದರ ಹಿಂದೆ ಮುಖ್ಯಶಿಕ್ಷಕ ಆರ್.ಚಂದ್ರ ಅವರ ಶ್ರಮವಿದೆ.
‘ಫೌಂಡೇಶನ್ ಶಾಲೆಯನ್ನು ದತ್ತು ಪಡೆದಿದ್ದು ಬೋಗಾದಿ ಮಾರ್ಗದಲ್ಲಿ ಕೆ.ಹೆಮ್ಮನಹಳ್ಳಿವರೆಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದೆ. 18 ಮಕ್ಕಳಿಗೆ ಬಾಲಕರ ವಿದ್ಯಾರ್ಥಿನಿಲಯ ತೆರೆಯಲಾಗಿದೆ. ಜಿಲ್ಲೆಯಲ್ಲದೆ ನಂಜನಗೂಡು ಮದ್ದೂರು ಶ್ರೀರಂಗಪಟ್ಟಣದ ಮಕ್ಕಳಿದ್ದಾರೆ. ಹಾಸ್ಟೆಲ್‌ನಿಂದ ಶಾಲೆಗೆ ಬರಲು ಸೈಕಲ್ ನೀಡಲಾಗಿದೆ’ ಎಂದರು.
‘ಎಲ್ಲ ವಿದ್ಯಾರ್ಥಿಗಳಿಗೆ ನಿತ್ಯ ಬೆಳಿಗ್ಗೆ ಉಪಾಹಾರವನ್ನು ನೀಡಲಾಗುತ್ತಿದೆ. ಶಾಲೆಯ ಎಲ್ಲ ಶಿಕ್ಷಕರು ನಿತ್ಯ ಸಂಜೆ ಪಾಠಗಳನ್ನು ಮಾಡುತ್ತಿದ್ದಾರೆ. ಎಲ್ಲ ಕ್ರಮಗಳಿಂದ ಹಾಜರಾತಿ ಸಂಖ್ಯೆ ಮುಂದಿನ ವರ್ಷ 100 ದಾಟಲಿದೆ’ ಎಂದು ಮಾಹಿತಿ ನೀಡಿದರು.
‘ಸರ್ಕಾರವು ಶೂ–ಸಾಕ್ಸ್‌ಗಾಗಿ ₹ 300 ಕೊಡುತ್ತಿದ್ದು ಅದಕ್ಕೆ ದಾನಿಗಳಿಂದ ₹ 200 ಸೇರಿಸಿ ಉತ್ತಮ ದರ್ಜೆಯ ಶೂ ನೀಡಲಾಗುತ್ತಿದೆ. ಸಮವಸ್ತ್ರವನ್ನು ಹೊಲಿಸಿಕೊಡಲಾಗುತ್ತಿದೆ. ಗೌರಿ– ಗಣೇಶ ಹಬ್ಬಕ್ಕೆ ಬಟ್ಟೆ ನೀಡಲಾಗಿದೆ. ಬೆಳಿಗ್ಗೆ ಕ್ರೀಡಾ ತರಬೇತಿ ನೀಡುತ್ತಿರುವುದರಿಂದ ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದರು.
‘ನಾಟಕ ಸಂಗೀತ ಕಂಪ್ಯೂಟರ್ ಜ್ಞಾನ ಸ್ಪೋಕನ್ ಇಂಗ್ಲಿಷ್ ಕೈ ಬರಹ ಅಭ್ಯಾಸ ಸೇರಿದಂತೆ ವಿವಿಧ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಶೇ 75ರಷ್ಟು ಅಂಕ ಪಡೆದವರಿಗೆ ಉಚಿತ ಪ್ರವಾಸ ಏರ್ಪಡಿಸಲಾಗುತ್ತಿದೆ’ ಎಂದರು.
‘ಬಸವಮಾರ್ಗ ಪ್ರತಿಷ್ಠಾನದ ಬಸವರಾಜು ರೌಂಡ್ ಟೇಬಲ್ 109 ರೋಟರಿ ಈಸ್ಟ್ ರಮೇಶ್ ಗುರುರಾಜ್ ಮಲ್ಲಮ್ಮ ಶಿವಶಂಕರ್ ಸೇರಿದಂತೆ ಸಂಸ್ಥೆಗಳು ಹಾಗೂ ದಾನಿಗಳಿಂದ ಶಾಲೆಯು ಮಾದರಿಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.