ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರವಾದ ವಾತಾವರಣವಿದೆ: ಜಿ.ವಿ. ರಾಜೇಶ್

Published 5 ಫೆಬ್ರುವರಿ 2024, 7:58 IST
Last Updated 5 ಫೆಬ್ರುವರಿ 2024, 7:58 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮೊದಲಾದ ಕಾರಣದಿಂದ ಪಕ್ಷದ ಪರವಾದ ವಾತಾವರಣವಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸವಾಲುಗಳೂ ಇದ್ದು ಕಾರ್ಯಕರ್ತರು ಮೈಮರೆಯಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ ತಿಳಿಸಿದರು.

ಪಕ್ಷದ ಮಹಾನಗರ ಜಿಲ್ಲಾ ಘಟಕದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲೋಕಸಭಾ ಚುನಾವಣೆ ಸುಲಭವೇನಲ್ಲ. ಏಕೆಂದರೆ, ಕಾಂಗ್ರೆಸ್‌ನವರು ಎಲ್ಲ ವಿಷಯವನ್ನೂ ಲೋಕಲೈಸ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯವೂ ಕೇಂದ್ರದ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮತದಾರರ ಮನೆ ಮನೆಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸೂಚಿಸಿದರು.

ಅಳುಕೇನಿಲ್ಲ:

‘ಸ್ವಾತಂತ್ರ್ಯೋತ್ತರ ಭಾರತದ‌ ನಂತರ ರಾಜಕಾರಣಕ್ಕೆ ಹೊಸ ಆಯಾಮ ಹಾಗೂ ಕಲ್ಪನೆಯನ್ನು ಬಿಜೆಪಿ ನೀಡಿದೆ. ರಾಜಕಾರಣ ಮಾಡಲು ಹಣ ಬಲ, ತೋಳ್ಬಲ ಬೇಕು ಎಂಬ ಭಾವನೆ ಹಿಂದೆ ಇತ್ತು. ಆದರೆ, ಶ್ರಮದ ಆಧಾರದಲ್ಲಿ ಪಕ್ಷ ಕಟ್ಟಬಹುದು ಎಂಬುದನ್ನು ಬಿಜೆಪಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಇದು ನಮ್ಮ ‍ಪಕ್ಷದಲ್ಲಷ್ಟೆ ಸಾಧ್ಯ’ ಎಂದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ‌ಮೋದಿ ಅವರಿಗೆ ಮತ ಕೇಳಲು‌ ನಮ್ಮ ಕಾರ್ಯಕರ್ತರಿಗೆ ಯಾವುದೇ ಅಳಕು‌ ಅಥವಾ ಮುಜುಗರ ಇರುವುದಿಲ್ಲ. ಅಂತಹ ಆಡಳಿತವನ್ನು ನಮ್ಮ ಸರ್ಕಾರ ನೀಡುತ್ತಿದೆ’ ಎಂದರು.

‘2014ಕ್ಕಿಂತ ಹಿಂದೆ ದೇಶದಲ್ಲಿ ಸುರಕ್ಷತೆ ಇರಲಿಲ್ಲ. ಎಲ್ಲಿ ಬೇಕಾದರೂ ಬಾಂಬ್ ಸ್ಫೋಟ ಆಗಬಹುದು ಎಂಬ ಭಯವಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ‌ ನಂತರ‌ ಅಂಥ ದುರ್ಘಟನೆಗಳು ನಡೆದಿಲ್ಲ. ಹೀಗೆ ದೇಶವನ್ನು ನಡೆಸುವುದು ಸುಲಭವೇನಲ್ಲ’ ಎಂದು ಸಮರ್ಥಿಸಿಕೊಂಡರು.

ಸಾಂಸ್ಕೃತಿಕ ಭಾರತವನ್ನು ಕಟ್ಟಲು:

‘ಶ್ರೀಮಂತರು ಹಾಗೂ ಉಳ್ಳವರ ಜೇಬು ತುಂಬಿಸುವುದೇ ಅಭಿವೃದ್ಧಿ ಎಂಬುದು ಕಾಂಗ್ರೆಸ್ ಕಲ್ಪನೆಯಾಗಿದೆ.‌ ಆದರೆ, ಬಡವರ ಆರ್ಥಿಕತೆ ಸುಧಾರಿಸಬೇಕು ಎಂಬ ಅಂತ್ಯೋದಯದ ಪರಿಕಲ್ಪನೆ ನಮ್ಮದು. ಆದ್ದರಿಂದಲೇ ನಮ್ಮ ಶೇ 80ರಷ್ಟು ಯೋಜನೆ ಬಡವರು ಮತ್ತು ರೈತರ ಪರವಾಗಿದೆ. ಮೋದಿ ನೇತೃತ್ವದ ಸರ್ಕಾರದಿಂದಾಗಿ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಹಿಂದೆ ಸಂವಿಧಾನಕ್ಕೆ ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿತ್ತು. ಅದನ್ನು ‌ನಮ್ಮ ಸರ್ಕಾರ ತಡೆದಿದೆ. ಸಾಂಸ್ಕೃತಿಕ ಭಾರತವನ್ನು ಕಟ್ಟುವ ಕೆಲಸವನ್ನು ಮಾಡಿದೆ’ ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡುವ ಮೂಲಕ ಮೋದಿಯವರು ಕಾರ್ಯಕರ್ತರಲ್ಲಿ ನವಚೈತನ್ಯ ಉಂಟು ಮಾಡಿದ್ದಾರೆ’ ಎಂದರು.

‘ಕಾಂಗ್ರೆಸ್‌ ಸರ್ಕಾರ ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ’ ಎಂದು ದೂರಿದ ಅವರು, ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ನಗರದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿದ್ದರು. ಆದರೆ, ಈಗಿನ ಸರ್ಕಾರ ಕೃಷ್ಣರಾಜ ಕ್ಷೇತ್ರಕ್ಕೆ ನೀಡಿದ್ದ ₹ 45 ಕೋಟಿ ವಾಪಸ್ ತೆಗೆದುಕೊಂಡಿದೆ. ಒಂದೇ ರೂಪಾಯಿಯನ್ನೂ ನನ್ನ ಕ್ಷೇತ್ರಕ್ಕೆ ಉಳಿಸಿಲ್ಲ. ಇದನ್ನು ಅಧಿವೇಶನದಲ್ಲಿ ಪ್ರಶ್ನಿಸಲಿದ್ದೇನೆ’ ಎಂದು ತಿಳಿಸಿದರು.

ಮೋದಿಗೆ ಅಭಿನಂದನಾ ನಿರ್ಣಯ:

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಿ ಬಾಲರಾಮನ ಪ್ರಾಣ ಪ್ರತಿಷ್ಠಾಪಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು. ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ಆರ್.ರಘು ಮಂಡಿಸಿದ ನಿರ್ಣಯವನ್ನು ಕಾರ್ಯಕಾರಿಣಿ ಅನುಮೋದಿಸಿತು.

ಶಾಸಕ ಟಿ.ಎಸ್.ಶ್ರೀವತ್ಸ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಮೈಸೂರು ಕ್ಲಸ್ಟರ್‌ ಅಧ್ಯಕ್ಷ ಎಸ್.ಎ.ರಾಮದಾಸ್, ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ಆರ್.ರಘು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥಾಮಸ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್ ಹಾಗೂ ವಾಣೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಾಘವೇಂದ್ರ, ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ವಿ.ಗಿರಿಧರ್, ಕೇಬಲ್ ಮಹೇಶ್, ಮಾಜಿ ಶಾಸಕ ಮಾರುತಿರಾವ್ ಪವಾರ್, ಮುಖಂಡರಾದ ಎಸ್. ಸಂದೇಶ್‌ಸ್ವಾಮಿ, ಶಿವಕುಮಾರ್, ಜೋಗಿ ಮಂಜು, ಎಂ.ವಿ.ಫಣೀಶ್, ಕವೀಶ್ ಗೌಡ, ಯಶಸ್ವಿನಿ ಸೋಮಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT