ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್–ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?: ರಾಧಾಮೋಹನ್ ದಾಸ್

Published 7 ಏಪ್ರಿಲ್ 2024, 6:48 IST
Last Updated 7 ಏಪ್ರಿಲ್ 2024, 6:48 IST
ಅಕ್ಷರ ಗಾತ್ರ

ಮೈಸೂರು: ‘ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?’ ಎಂದು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್‌ ಕೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ‘ಜನ ಏನಾದರೂ ಹೇಳಲಿ. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವಿಲ್ಲ. ನಾನೂ ಹಾಸನಕ್ಕೆ ಹೋಗಿದ್ದೆ. ಪ್ರಜ್ವಲ್ ಜತೆ 2 ತಾಸು ಮಾತನಾಡಿದೆ. ಯಾವುದೇ ದೂರನ್ನೂ ಅವರು ಹೇಳಿಕೊಳ್ಳಲಿಲ್ಲ. ಇಬ್ಬರ ನಡುವೆ ಗೊಂದಲವಿದೆ ಎಂದು ಅನ್ನಿಸುತ್ತಿಲ್ಲ’ ಎಂದರು.

‘ಏನೋ ಆಗಿದೆ ಎಂಬಂತೆ ಭಾವಿಸುತ್ತೀರೇಕೆ? ಹಾಸನದಲ್ಲಿ ಪ್ರೀತಂ ಸೋತಿದ್ದರೂ ಪವರ್‌ಫುಲ್ ಲೀಡರ್. ಅವರಿಗೆ ಹಾಸನ ಒಗ್ಗೂಡಿಸಲು ಒಂದು ದಿನ ಸಾಕು. ಈಗಾಗಲೇ ಆ ಕೆಲಸ ಮಾಡುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಜೆಡಿಎಸ್‌ನವರಿಗಿಂತಲೂ ಬಿಜೆಪಿ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಪ್ರೀತಂ ಕೂಡ ಹಾಸನಕ್ಕೆ ಹೋಗುತ್ತಾರೆ. ಅವರಿಗೆ ಮೈಸೂರು–ಚಾಮರಾಜನಗರ ಉಸ್ತುವಾರಿ ನೀಡಲಾಗಿದೆ. ನಿತ್ಯವೂ ಅವರು ಹಾಸನದಲ್ಲೇ ಇರಲು ಸಾಧ್ಯವಿಲ್ಲ’ ಎಂದರು.

‘ಪ್ರೀತಂ ಅಲ್ಲಿ ಸೋತಿರಬಹುದು. ಆದರೆ, ಜೆಡಿಎಸ್‌ ಶಾಸಕನಿಗಿಂತಲೂ ಜನಪ್ರಿಯ’ ಎಂದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್‌ನ ಡಿ.ಕೆ ಸುರೇಶ್ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರೀತಂ ಗೌಡ ಮಾತನಾಡಿ, ‘ಪಕ್ಷವು ಕಾಶ್ಮೀರ ಅಥವಾ ಕನ್ಯಾಕುಮಾರಿಗೆ ಕಳಿಸಿದರೂ ಹೋಗುತ್ತೇನೆ. ಪಕ್ಷ ಹೇಳಿದ್ದರಿಂದ ಮೈಸೂರು, ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದೇನೆ. ಡಿ.ವಿ. ಸದಾನಂದ ಗೌಡರು ಹಾಸಕ್ಕೆ ಹೋಗಿದ್ದರು. ಯಾಕೆ ಹೋಗಿದ್ರಿ ಎಂದು ಕೇಳಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು‌. ಜನರು ನನ್ನ ಮುಖ ನೋಡಿ ಮತ ಹಾಕುವುದಿಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡಿ ಮತ ನೀಡುತ್ತಾರೆ. ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ್ದು’ ಎಂದಷ್ಟೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT