ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾದ ಟೊಮೆಟೊ, ಕುಸಿದ ಬೀನ್ಸ್

18 ದಿನಗಳಲ್ಲಿ ₹1 ಕುಸಿತ ಕಂಡ ಕೋಳಿಮೊಟ್ಟೆ
Last Updated 30 ಜೂನ್ 2020, 9:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಈ ವಾರ ಬೀನ್ಸ್‌ ಬೆಲೆ ತೀವ್ರ ಕುಸಿತ ಕಂಡು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದ್ದರೆ, ಟೊಮೆಟೊ ದುಬಾರಿಯಾಗುವ ಮೂಲಕ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಆದರೆ, ಟೊಮೆಟೊ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಹೆಚ್ಚಿನ ಲಾಭದ ನಿರೀಕ್ಷೆ ಹುಸಿಯಾಗುತ್ತಿದೆ.

ಕಳೆದ ವಾರ ಒಂದು ದಿನಕ್ಕೆ ಸರಾಸರಿ 1,310 ಕ್ವಿಂಟಲ್‌ನಷ್ಟು ಟೊಮೊಟೊ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಸೋಮವಾರ ಕೇವಲ 730 ಕ್ವಿಂಟಲ್‌ ಅಷ್ಟೇ ಮಾರುಕಟ್ಟೆಗೆ ಬಂದಿದೆ. ಟೊಮೆಟೊ ಸಗಟು ಬೆಲೆ ಕೆ.ಜಿಗೆ ₹25ಕ್ಕೆ ಮಾರಾಟವಾಗಿತ್ತು. ಆವಕದಲ್ಲಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಒಂದು ಕಾರಣ ಎನಿಸಿದೆ ಎಂದು ತರಕಾರಿ ವ್ಯಾಪಾರಿ ರಾಮು ತಿಳಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಬೀನ್ಸ್ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ತಿಂಗಳ ಆರಂಭದಲ್ಲಿ ಕೆ.ಜಿ ಬೀನ್ಸ್‌ನ ಸಗಟು ಧಾರಣೆ ₹50 ಇತ್ತು. ಸೋಮವಾರ ಇದರ ದರ ₹12ಕ್ಕೆ ಕಡಿಮೆಯಾಗಿದೆ. ಬೆಳೆಗಾರರಿಗಂತೂ ಲಾಭವಿರಲಿ, ಬೆಳೆಯಲು ವ್ಯಯಿಸಿದ ಹಣವೂ ಸಿಗದ ಸ್ಥಿತಿ ಇದೆ. ಕನಿಷ್ಠ ಕೋಯ್ಲು ಮತ್ತು ಮಾರುಕಟ್ಟೆ ಸಾಗಾಣಿಕೆ ವೆಚ್ಚವೂ ಇದರಿಂದ ಬರುತ್ತಿಲ್ಲ ಎಂದು ನಂಜನಗೂಡು ತಾಲ್ಲೂಕಿನ ಬೀನ್ಸ್ ಬೆಳೆಗಾರ ಕೆಂಡಗಣ್ಣ ತಿಳಿಸುತ್ತಾರೆ.

ಆವಕದಲ್ಲಿ ಹೆಚ್ಚಿನ ವ್ಯತ್ಯಾಸವಾಗದೇ ಇದ್ದರೂ ಆಷಾಢ ಬಂದಿರುವುದರಿಂದ ಸಹಜವಾಗಿಯೇ ಶುಭ, ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಬೀನ್ಸ್‌ಗೆ ಬೇಡಿಕೆ ತೀವ್ರಗತಿಯಲ್ಲಿ ಕಡಿಮೆಯಾಗಿದೆ.

ಉಳಿದಂತೆ, ದಪ್ಪಮೆಣಸಿನಕಾಯಿ ಕೆ.ಜಿಗೆ ₹60, ಕ್ಯಾರೆಟ್ ₹26, ನುಗ್ಗೆಕಾಯಿ ₹ 30, ಹಸಿಮೆಣಸಿನಕಾಯಿ ₹ 30ಕ್ಕೆ ಮಾರಾಟವಾಗಿದೆ. ಬದನೆ ₹ 5, ಬೀಟ್‌ರೂಟ್‌ ₹ 9, ಎಲೆಕೋಸು ₹ 6, ಹೂಕೋಸು ₹ 10ಕ್ಕೆ ಖರೀದಿಯಾಗಿದೆ.

ಕಳೆದ 18 ದಿನಗಳಿಂದ ಸತತವಾಗಿ ಕುಸಿತದ ಹಾದಿಯಲ್ಲಿರುವ ಕೋಳಿ ಮೊಟ್ಟೆ ಈ ವಾರವೂ ಕಡಿಮೆಯಾಗಿದೆ. 18 ದಿನಗಳಲ್ಲಿ ಒಂದು ರೂಪಾಯಿ ಕಡಿಮೆಯಾಗುವ ಮೂಲಕ ಚೇತರಿಕೆಯನ್ನೇ ಕಂಡಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ಕಳೆದ ವಾರ ₹ 4.05 ಇತ್ತು. ಈಗ ₹ 3.70ಕ್ಕೆ ಕಡಿಮೆಯಾಗಿದೆ. ಇನ್ನು ಮುಂದೆ ದರ ಚೇತರಿಕೆ ಪಡೆಯುವ ಸಾಧ್ಯತೆ ಇಲ್ಲ ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT