ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟದಲ್ಲಿ 27 ಲಕ್ಷ ಸಸಿ ನೆಟ್ಟ ಲೆಕ್ಕ ಕೇಳುವೆ: ಎಸ್.ಟಿ.ಸೋಮಶೇಖರ್

ಚಾಮುಂಡಿ ಬೆಟ್ಟದಲ್ಲಿ 1 ಲಕ್ಷ ಸಸಿ ನೆಡುವಿಕೆ; ಕಂದಾಯ–ಅರಣ್ಯ ಸಚಿವರಿಗೆ ಆಹ್ವಾನ: ಎಸ್‌.ಟಿ.ಸೋಮಶೇಖರ್
Last Updated 6 ಜೂನ್ 2020, 3:20 IST
ಅಕ್ಷರ ಗಾತ್ರ

ಮೈಸೂರು: ‘ಸ್ವಚ್ಛ ನಗರಿ ಮೈಸೂರನ್ನು ಹಸರೀಕರಣ ಮಾಡುವ ಸಂಕಲ್ಪ ತೊಟ್ಟಿದ್ದು, ಜಿಲ್ಲೆಯಾದ್ಯಂತ 27 ಲಕ್ಷ ಸಸಿಗಳನ್ನು ಈ ಬಾರಿಯ ಮುಂಗಾರಿನಲ್ಲಿ ನೆಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಶುಕ್ರವಾರ ಇಲ್ಲಿ ತಿಳಿಸಿದರು.

ಜೆ.ಪಿ.ನಗರದ ಮಕ್ಕ ಗಣಪತಿ ದೇವಸ್ಥಾನ ಸಮೀಪದ ಎ ಬ್ಲಾಕ್‍ನಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದ ಸಚಿವರು, ‘ಈ ಸಸಿಗಳನ್ನು ಎಲ್ಲಿ ನೆಡಲಾಗಿದೆ. ಅವುಗಳ ಬೆಳವಣಿಗೆ ಯಾವ ಹಂತದಲ್ಲಿವೆ ಎಂಬುದನ್ನು ಸತತ ಮೂರು ವರ್ಷ ಲೆಕ್ಕ ಕೇಳುವ ಮೂಲಕ ನಿಗಾ ವಹಿಸಲಾಗುವುದು. ಲೆಕ್ಕ ಕೇಳಿದರೆ ಬದ್ಧತೆ ಇರಲಿದೆ’ ಎಂದು ಹೇಳಿದರು.

‘ಚಾಮುಂಡಿ ಬೆಟ್ಟದಲ್ಲಿ ಒತ್ತುವರಿ ನಡೆದಿದೆ. ಇದನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇನೆ. ಒತ್ತುವರಿ ತೆರವುಗೊಳಿಸಿದ ಬಳಿಕ ತಂತಿ ಬೇಲಿ ನಿರ್ಮಿಸುವಂತೆಯೂ ಕೇಳಿಕೊಂಡಿರುವೆ. ಇದರ ನಡುವೆಯೇ ಅರಣ್ಯ–ಕಂದಾಯ ಸಚಿವರಿಬ್ಬರೂ ಹಾಗೂ ಎರಡೂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಮೈಸೂರಿಗೆ ಆಹ್ವಾನಿಸಿದ್ದು, 1 ಲಕ್ಷ ಸಸಿ ನೆಡುವ ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಪ್ರತಿಯೊಂದಕ್ಕೂ ಮಾಲೀಕತ್ವ ಇರಬೇಕು. ಆ ನಿಟ್ಟಿನಲ್ಲಿ ಮುಂದಿನ ಭವಿಷ್ಯವನ್ನು ಬರೆಯಬಹುದಾಗಿದ್ದು, ಜುಲೈ 1ರಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 80 ಸಾವಿರ ಮನೆಗೆ, ತಲಾ 2 ಗಿಡಗಳನ್ನು ನೀಡುವ ಸಂಕಲ್ಪ ಮಾಡಿದ್ದೇವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‍ಕುಮಾರ್ ಮಿಶ್ರಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‍ಕುಮಾರ್ ಹಾಜರಿದ್ದರು.

ಉದ್ಯಾನದಲ್ಲಿ ಪರಿಸರ ದಿನಾಚರಣೆ

ಸಾತಗಳ್ಳಿ ಬಸ್ ನಿಲ್ದಾಣದ ಸಮೀಪದಲ್ಲಿರುವ ದೇವನೂರು ಮೂರನೇ ಹಂತದಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಉದ್ಯಾನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸಚಿವ ಎಸ್.ಟಿ.ಸೋಮಶೇಖರ್ ಸಸಿ ನೆಟ್ಟರು.

ಮುಡಾ ಬಡಾವಣೆಗಳಾದ ದೇವನೂರು 3ನೇ ಹಂತ, ಹಂಚ್ಯಾ ಸಾತಗಳ್ಳಿ ಎ ವಲಯ, ದಟ್ಟಗಳ್ಳಿ 3ನೇ ಹಂತ, ವಿಜಯನಗರ 4ನೇ ಹಂತ 2ನೇ ಘಟ್ಟದ ಉದ್ಯಾನಗಳಲ್ಲಿ ಅತ್ತಿ, ನೇರಳೆ, ಸೀಬೆ, ಹಲಸು, ಸಂಪಿಗೆ, ನಾಗಲಿಂಗ, ಅರಳಿ, ಬೇವು, ಬಾಗೆ, ಕಾಡು ಬಾದಾಮಿ ಸೇರಿದಂತೆ ವಿವಿಧ ಬಗೆಯ 1,290 ಗಿಡಗಳನ್ನು ನೆಡಲಾಯಿತು.

ಶಾಸಕ ತನ್ವೀರ್ ಸೇಠ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ಡಿ.ಬಿ.ನಟೇಶ್, ಪ್ರಾಧಿಕಾರದ ಅಧಿಕಾರಿ ಗಿರೀಶ್ ಉಪಸ್ಥಿತರಿದ್ದರು.

ಮಾನಸ ಗಂಗೋತ್ರಿ

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಳಿ ಸಚಿವ ಸೋಮಶೇಖರ್ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 3 ಸಾವಿರ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಸಚಿವರು ಶುಭ ಕೋರಿದರು. ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮತ್ತಿತರರಿದ್ದರು.

ಪೋಷಕ ನಟರಿಗೆ ಆರ್ಥಿಕ ಸಹಾಯ

ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಪೋಷಕ ನಟರಿಗೆ ಸಚಿವ ಎಸ್.ಟಿ.ಸೋಮಶೇಖರ್ ಆರ್ಥಿಕ ಸಹಾಯ ನೀಡಿದರು.

ಜನಮನ ವೇದಿಕೆ ಅಧ್ಯಕ್ಷ, ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಈ ಕಾರ್ಯಕ್ರಮ ಆಯೋಜಿಸಿ ₹ 75 ಸಾವಿರ ನೆರವು ನೀಡಿದರು. ಇದೇ ಸಮಾರಂಭದಲ್ಲಿ ಭಾಗಿಯಾದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ₹ 75 ಸಾವಿರ, ಸಹಕಾರಿ ಧುರೀಣ ರಾಜೀವ್, ಉದ್ಯಮಿ ಅಮರನಾಥ್‌ರಾಜೇ ಅರಸ್ ತಲಾ ₹ 25 ಸಾವಿರ ದೇಣಿಗೆ ನೀಡಿದರು.

30 ಕಲಾವಿದರಿಗೆ ತಲಾ ₹ 8 ಸಾವಿರ ವಿತರಿಸಲಾಯಿತು. ಕಲಾವಿದರಾದ ಡಿಂಗ್ರಿ ನಾಗರಾಜ್, ರೇಖಾದಾಸ್ , ವೈದ್ಯನಾಥ್ ಬಿರಾದಾರ್, ಶಂಕರ್ ಅಶ್ವಥ್, ಮೈಸೂರು ರಮಾನಂದ ಮತ್ತಿತರರಿದ್ದರು.

ಮನೆ ಮನೆಗೆ ಕರಪತ್ರ

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಶಂಕರ ಮಠ ರಸ್ತೆಯಲ್ಲಿ ‘ಜನರೇ ಪ್ರೇರಕ, ನಾನು ಪ್ರಧಾನ ಸೇವಕ’ ಎಂಬ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ ಪ್ರತಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸೋಮಶೇಖರ್, ‘ಕೇಂದ್ರ ಸರ್ಕಾರದ ಯಾವುದೇ ಯೋಜನೆಯನ್ನು ಮೊದಲು ಜನರಿಗೆ ತಲುಪಿಸುವ ಕೆಲಸ ಮಾಡುವುದು ಶಾಸಕ ಎಸ್‌.ಎ.ರಾಮದಾಸ್’ ಎಂದು ಪ್ರಶಂಸಿಸಿದರು.

ಶಾಸಕರಾದ ರಾಮದಾಸ್, ನಾಗೇಂದ್ರ ಸ್ಥಳೀಯ ಮುಖಂಡರಿದ್ದರು.

ದಂದೆ ನನ್ನ ಜಾಯಮಾನವಲ್ಲ; ತಿರುಗೇಟು

‘ಅಬಕಾರಿ ಅಧಿಕಾರಿಯ ವರ್ಗಾವಣೆ ನನ್ನ ಗಮನಕ್ಕೆ ಬಂದಿದೆ. ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ವರ್ಗಾಯಿಸಲಾಗಿದೆ. ಈ ಹಿಂದೆ ಪಡೆದವರು, ಕೊಟ್ಟವರಿಗೇ ದಂದೆ ಗೊತ್ತು’ ಎಂದು ಶಾಸಕ ಸಾ.ರಾ.ಮಹೇಶ್‌ ಟೀಕೆಗೆ, ಸಚಿವ ಸೋಮಶೇಖರ್ ತಿರುಗೇಟು ನೀಡಿದರು.

‘ಅನಧಿಕೃತ ಉಸ್ತುವಾರಿ ಸಚಿವ ಯಾರಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಕರೆದೊಯ್ಯುವುದು ನನ್ನ ಕೆಲಸ. ಜಿಲ್ಲಾಡಳಿತದ ಕೆಲಸದಲ್ಲಿ ವಿಶ್ವನಾಥ್ ಹಸ್ತಕ್ಷೇಪ ಮಾಡುತ್ತಿಲ್ಲ. ಅವರು ವಿಧಾನ ಪರಿಷತ್ ಸದಸ್ಯತ್ವಕ್ಕಾಗಿ ಬೆಂಗಳೂರಿನಲ್ಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಉಸ್ತುವಾರಿ ಸಚಿವರ ಕಚೇರಿಯನ್ನು ಸೋಮಶೇಖರ್ ಆರಂಭಿಸಿದರು. ಬಿಜೆಪಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT