ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಯುಗಾದಿ ಆಚರಣೆ

ಬೇವು–ಬೆಲ್ಲ ಸವಿದು ಹೊಸ ವರ್ಷವನ್ನು ಬರಮಾಡಿಕೊಂಡ ಜನರು
Last Updated 23 ಮಾರ್ಚ್ 2023, 11:39 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಯುಗಾದಿ ಹಬ್ಬವನ್ನು ಜನರು ಸಂಭ್ರಮ–ಸಡಗರದಿಂದ ಬುಧವಾರ ಆಚರಿಸಿದರು.

ಬಹುತೇಕ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಕಂಡುಬಂತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಜನರು ಪೂಜೆ ಸಲ್ಲಿಸಿ ಬೇವು–ಬೆಲ್ಲ ತಿಂದು, ಹೋಳಿಗೆಯ ಊಟ ಸವಿದರು. ಇದರೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಜಿಲ್ಲೆಯಲ್ಲಿ ಹಬ್ಬದ ಮರು ದಿನ ‘ವರ್ಷತೊಡಕು’ ಅಂಗವಾಗಿ ಜನರು ಬಗೆಬಗೆಯ ಮಾಂಸಾಹಾರ ಸೇವಿಸುವುದು ಸಂಪ್ರದಾಯ. ಆದರೆ, ಈ ಬಾರಿ ಗುರುವಾರ ಬಂದಿದ್ದರಿಂದ ವರ್ಷತೊಡಕು ಅಷ್ಟೇನು ಕಂಡುಬರಲಿಲ್ಲ. ಬಹಳಷ್ಟು ಮಂದಿ ಗುರುವಾರ ಮಾಂಸಾಹಾರ ಸೇವಿಸುವುದಿಲ್ಲ. ಹೀಗಾಗಿ, ಖರೀದಿಯೂ ಅಷ್ಟಾಗಿ ಕಂಡುಬರಲಿಲ್ಲ. ಶುಕ್ರವಾರ ಆ ಕಾರ್ಯಕ್ರಮ ನಡೆಯಲಿದೆ. ಕೆಲವರು ಭಾನುವಾರಕ್ಕೆ ಮುಂದೂಡಿದ್ದಾರೆ.

ಯುಗಾದಿ ಸಂಗೀತೋತ್ಸವ: ಅಂಬಾವಿಲಾಸ ಅರಮನೆ ಆವರಣದಲ್ಲಿ ಅರಮನೆ ಮಂಡಳಿಯಿಂದ ಹಮ್ಮಿಕೊಂಡಿದ್ದ ‘ಯುಗಾದಿ ಸಂಗೀತೋತ್ಸವ’ಕ್ಕೂ ಗುರುವಾರ ಚಾಲನೆ ನೀಡಲಾಯಿತು. ಶಾಸಕ ಎಸ್.ಎ.ರಾಮದಾಸ್, ವಿಧಾನಪರಿಷತ್‌ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಮೇಯರ್‌ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ ಯೋಗೇಶ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಇದ್ದರು. ನಂತರ, ಗಾಯಕ ರಘು ದೀಕ್ಷಿತ್‌ ತಂಡದವರು ಕಾರ್ಯಕ್ರಮ ನೀಡಿದರು. ನೂರಾರು ಮಂದಿ ಭಾಗವಹಿಸಿದ್ದರು.

ಸೌಹಾರ್ದ ಯುಗಾದಿ: ‘ಸೌಹಾರ್ದ ಕರ್ನಾಟಕ ಮೈಸೂರು’ ವತಿಯಿಂದ ಮಿಷನ್ ಆಸ್ಪತ್ರೆ ಬಳಿಯ ಜಾಕಿರ್ ಹುಸೇನ್ ವೃತ್ತದಲ್ಲಿ ಬುಧವಾರ ‘ಸೌಹಾರ್ದ ಯುಗಾದಿ’ಯನ್ನು ಆಚರಿಸಲಾಯಿತು. ನೆರೆದಿದ್ದವರು ಸಾಮರಸ್ಯ ಸಹಬಾಳ್ವೆಗಾಗಿ ಪರಸ್ಪರ ಬೇವು-ಬೆಲ್ಲ, ಹೋಳಿಗೆ ಹಂಚಿ ತಿಂದು ಸೌಹಾರ್ದ ಯುಗಾದಿಯನ್ನು ಆಚರಿಸಿದರು.

ಮುಸ್ಲಿಂ ಧರ್ಮ ಗುರು ಮೌಲಾನಾ ಅಯೂಬ್ ಅನ್ಸಾರಿ ಮಾತನಾಡಿ, ‘ಸೌಹಾರ್ದ, ಸಹಬಾಳ್ವೆ ನಮ್ಮ ಉಸಿರು. ಇಂದು ಇಂತಹ ಸೌಹಾರ್ದವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ನಮ್ಮ ನಡುವೆ ಕಟ್ಟುತ್ತಿರುವ ತಾರತಮ್ಯದ ಗೋಡೆಯನ್ನು ಎಲ್ಲರೂ ಸೇರಿ ಕೆಡವಬೇಕಿದೆ. ಈ ನಿಟ್ಟಿನಲ್ಲಿ ನಾವು ಐಕ್ಯತೆಯಿಂದ ಸಾಗೋಣ. ಸಂವಿಧಾನದ ಆಶಯಗಳನ್ನು ಮುಂದಕ್ಕೆ ಕೊಂಡೊಯ್ಯೊಣ’ ಎಂದರು.

ನಂತರ ಮುಖಂಡ ಬಾರ್ಬರಾ ಬೇಯರ್ ಮಾತನಾಡಿ, ‘ಸಾಮರಸ್ಯ–ಸಹಬಾಳ್ವೆ ಇಂದಿನ ಅಗತ್ಯ. ಜಾತ್ಯತೀತತೆ ನಮ್ಮ ದೇಶದ ಉಸಿರು. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಹಬ್ಬ, ಜಾತ್ರೆಗಳನ್ನು ಒಟ್ಟಾಗಿ ಮಾಡುವುದು ಸೌಹಾರ್ದವನ್ನು ಬಲಪಡಿಸುವುದಕ್ಕೆ ಸಹಕಾರಿಯಾಗಿದೆ’ ಎಂದು ಹೇಳಿದರು.

ಮನಸ್ಸು ಜೋಡಿಸುವ ಕೆಲಸ: ಸಿ.ಪಿ.ಐ(ಎಂ) ಜಿಲ್ಲಾ ಸಮಿತಿಯ ಕಾರ್ಯದರ್ಶಿ ಜಗದೀಶ್ ಸೂರ‌್ಯ ಮಾತನಾಡಿ, ‘ಭಾರತದ ಸೌಂದರ್ಯವೇ ಜಾತ್ಯತೀತತೆ ಹಾಗೂ ಸೌಹಾರ್ದ. ಇಂತಹ ಸೌಹಾರ್ದ ಪರಂಪರೆಯನ್ನು ಕೋಮುವಾದಿಗಳು ಧರ್ಮ, ಜಾತಿಯ ಆಧಾರದಲ್ಲಿ ಛಿದ್ರಗೊಳಿಸುತ್ತಿದ್ದಾರೆ. ಒಂದು ಕಡೆ ಒಡೆಯುವ ಕೆಲಸವನ್ನು ಕೋಮುವಾದಿಗಳು‌ ಮಾಡುತ್ತಿದ್ದರೆ, ಮತ್ತೊಂದೆಡೆ ಸೌಹಾರ್ದವನ್ನು ಕಟ್ಟುವ ಕೆಲಸವನ್ನು ಜಾತ್ಯತೀತ ಮನಸ್ಸುಗಳು, ಸಂಘಟನೆಗಳು ಮಾಡುತ್ತಿವೆ. ಇದರ ಭಾಗವಾಗಿ ಸೌಹಾರ್ದ ಯುಗಾದಿ ಆಚರಿಸಲಾಗುತ್ತಿದೆ. ಎಲ್ಲರೂ ಒಂದೆಡೆ ಬೆರೆತು ಮನಸ್ಸು ಜೋಡಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದೆ’ ಎಂದು ತಿಳಿಸಿದರು.

ಸೌಹಾರ್ದ ಕರ್ನಾಟಕದ ಸಂಚಾಲಕ ಲ.ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನೂರ್ ಮರ್ಚೆಂಟ್, ನೂರಿಬಾಬಾ, ಪ್ರೊ.ನಂಜರಾಜೇ ಅರಸ್, ಬಷೀರ್‌ ಅಹ್ಮದ್‌, ಸೌಯದ್ ಉಮಾರ್, ಡಾ.ಶಾಜಿಯಾ, ರವಿ ಕುಮಾರ್, ಮೈಕಲ್ ಸಘಾಯ್ ರಾಜ್, ಜ್ಞಾನ ಪ್ರಕಾಶ್, ಸೈಯದ್ ಅಬ್ಬಾಸ್, ಖಾದೀರ್ ಅಹ್ಮದ್, ಎಂ.ಎಫ್.ಖಲೀಂ, ನೆಲೆ ಗೋಪಾಲ್, ದ್ಯಾವಪ್ಪ ನಾಯಕ್, ಕಲ್ಲಳ್ಳಿ ಕುಮಾರ್, ಪುರುಷೋತ್ತಮ್, ಜಿ.ಜಯರಾಂ, ಕೆ.ಬಸವರಾಜ್, ಸಂಬಯ್ಯ, ಎಸ್‌ಎಫ್‌ಐನ ವಿಜಯ್ ಕುಮಾರ್‌, ಲಿಖಿತ, ಯತೀಶ್, ಶಿವು, ನಾಗರಾಜ್, ಬಸವಯ್ಯ, ಬಲರಾಂ ಭಾಗವಹಿಸಿದ್ದರು.

ಸುತ್ತೂರು ಕ್ಷೇತ್ರದಲ್ಲಿ ಆಚರಣೆ: ಜಿಲ್ಲೆಯ ನಂಜನಗೂಡು ತಾಲ್ಲೂಕು ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬುಧವಾರ ನಡೆಯಿತು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್.ಕರಿಕಲ್‌ ಅವರು ‘ಅಲ್ಲಮಪ್ರಭು ದೇವರ ವಚನಗಳ ವೈಶಿಷ್ಟ್ಯ’ ಕುರಿತು ಮಾತನಾಡಿದರು.

‘ಅಲ್ಲಮಪ್ರಭು ಮೇರು ವ್ಯಕ್ತಿತ್ವವನ್ನು ಹೊಂದಿದ್ದರು. ಯಾವುದೇ ವಿಚಾರಗಳನ್ನೂ ವಿಮರ್ಶೆ ಮಾಡದೇ ಒಪ್ಪಿಕೊಳ್ಳುತ್ತಿರಲಿಲ್ಲ’ ಎಂದು ತಿಳಿಸಿದರು.

‘ವಚನದಲ್ಲಿ ಅಂತರಂಗದ ತೊಳಲಾಟ, ಆತಂಕ ಇರುವುದಿಲ್ಲ. ಆತ್ಮವಿಶ್ವಾಸದಿಂದ ಸ್ಥಿತಿ–ಸಿದ್ಧಾಂತಗಳು ಇರುವುದನ್ನು ನಾವು ಕಾಣುತ್ತೇವೆ. ಗಹನವಾದ ಅಧ್ಯಾತ್ಮ, ತಾತ್ವಿಕ ವಿಚಾರಗಳು ವಚನಗಳಲ್ಲಿ ಇರುತ್ತವೆ’ ಎಂದರು.

‘ಅಲ್ಲಮ್ಮನ ವಚನಗಳು ಎಲ್ಲ ರೀತಿಯ ಜ್ಞಾನಕ್ಕೆ ದಾರಿದೀಪವಾಗಿವೆ. ಮನಸ್ಸು ಶುದ್ಧಿ ಇಲ್ಲದ ಮೇಲೆ ಲಿಂಗಪೂಜೆಯನ್ನು ಮಾಡಿದರೆ ಏನು ಫಲ ಎಂದು ಹೇಳುವ ಮೂಲಕ ಆಡಂಬರದ ಆಚರಣೆ ಮಾಡುವುದನ್ನು ಒಪ್ಪುತ್ತಿರಲಿಲ್ಲ’ ಎಂದು ತಿಳಿಸಿದರು.

ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಕೆ.ಜಿ.ಪುಟ್ಟಹೊನ್ನಯ್ಯ ಮಾತನಾಡಿದರು.

ಶ್ರೀಮಠ ಹಾಗೂ ಗ್ರಾಮದ ಹೊನ್ನೇರುಗಳನ್ನು ಶ್ರೀಮಠದಿಂದ ಮಂಗಳವಾದ್ಯ ಹಾಗೂ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಜಮೀನುಗಳಿಗೆ ತೆರಳಿ ಭೂಮಿತಾಯಿಗೆ ಪೂಜೆ ಸಲ್ಲಿಸಿ ಹೊಸ ವರ್ಷದ ಕೃಷಿ ಕಾಯಕಕ್ಕೆ ಚಾಲನೆ ನೀಡಲಾಯಿತು. ಕರ್ತೃಗದ್ದುಗೆ ಹಾಗೂ ಶ್ರೀಕ್ಷೇತ್ರದ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.

25 ವಟುಗಳು ದೀಕ್ಷಾ ಸಂಸ್ಕಾರ ಪಡೆದರು. ನೀಲಕಂಠಸ್ವಾಮಿ ಮಠದ ಶ್ರೀ, ಕುಂದೂರು ಮಠದ ಶ್ರೀ, ಚುಂಚನಹಳ್ಳಿ ಮಠದ ಶ್ರೀ, ಹೊನ್ನಲಗೆರೆ ಮಠದ ಶ್ರೀ, ಪಂಚಗವಿ ಮಠದ ಶ್ರೀ, ಕಳ್ಳೀಪುರ ಮಠದ ಶ್ರೀ, ಉದ್ಯಮಿ ರಘು ಆಚಾರ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT