ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ‘ಟಿಪ್ಪು ಸುಲ್ತಾನ್’ ಗಂಧದ ಉರುಸ್‌; ಮೆರವಣಿಗೆ

ಗಂಧವನ್ನು ಹೊತ್ತು ಸಾಗಿದ ಶಾಸಕ ತನ್ವೀರ್‌ ಸೇಠ್‌ l ನೂರಾರು ಮಂದಿ ಭಾಗಿ
Published 6 ಜೂನ್ 2024, 15:53 IST
Last Updated 6 ಜೂನ್ 2024, 15:53 IST
ಅಕ್ಷರ ಗಾತ್ರ

ಮೈಸೂರು: ಅಶೋಕರಸ್ತೆಯ ಮಿಲಾದ್‌ ಭಾಗ್‌ನಲ್ಲಿ ಹಜ್ರತ್‌ ಟಿಪ್ಪು ಸುಲ್ತಾನ್‌ ಶಹೀದ್ ವೆಲ್‌ಫೇರ್ ಮತ್ತು ಉರುಸ್‌ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ್‌ ಅವರ 232ನೇ ಗಂಧದ ಉರುಸ್‌ ಪ್ರಯುಕ್ತ ಗುರುವಾರ ಸಂದಲ್‌ (ಗಂಧ) ಮೆರವಣಿಗೆ ನಡೆಯಿತು.

ಮೀನಾ ಬಜಾರ್‌ನ ಟಿಪ್ಪು ಹಾಲ್‌ನಲ್ಲಿ ಬೆಳಿಗ್ಗೆ ಮೌಲಾನಾ ಮೊಹಮ್ಮದ್‌ ಉಸ್ಮಾನ್‌ ಶರೀಫ್ ಸಾಹೇಬ್‌ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಆ ಬಳಿಕ ಪವಿತ್ರ ಗಂಧವನ್ನು ಮಿಲಾದ್‌ ಬಾಗ್‌ಗೆ ತರಲಾಯಿತು. ಗೌರವಸಮರ್ಪಣೆ ಬಳಿಕ ಶಾಸಕ ತನ್ವೀರ್‌ ಸೇಠ್‌ ಗಂಧವನ್ನು ಹೊತ್ತು ಹೆಜ್ಜೆಹಾಕಿದರು.

ದಫ್‌ ಕಲಾವಿದರು, ಸೂಫಿ ಸಂತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾರೋಟಿನಲ್ಲಿ ತನ್ವೀರ್‌ ಸೇಠ್‌ ಗಂಧವನ್ನು ತಲೆಯ ಮೇಲೆ ಹೊತ್ತು ಅಶೋಕ ರಸ್ತೆ, ಸೇಂಟ್‌ ಫಿಲೋಮಿನಾ ಚರ್ಚ್‌ ವೃತ್ತ, ಫೌಂಟೇನ್‌ ವೃತ್ತ, ಬಡಾಮಕಾನ್‌, ಟಿಪ್ಪು ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿಂದ ಪವಿತ್ರ ಗಂಧವನ್ನು ಶ್ರೀರಂಗಪಟ್ಟಣದ ದರಿಯಾ ದೌಲತ್‌ ಭಾಗ್‌ಗೆ ಕೊಂಡೊಯ್ಯಲಾಯಿತು.

ಶಾಸಕ ತನ್ವೀರ್ ಸೇಠ್‌ ಮಾತನಾಡಿ, ‘ಟಿಪ್ಪು ಸುಲ್ತಾನರ ತ್ಯಾಗ, ಹೋರಾಟ ಹಾಗೂ ಬಲಿದಾನ ನಾಡಿನ ಜನರಲ್ಲಿ ಉಳಿದಿದೆ. ಪ್ರತಿವರ್ಷವೂ ಉರುಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ಹೃದಯದಿಂದ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವಧ್ಯಾನ ಮಂದಿರದ ಬಸವಲಿಂಗ ಸ್ವಾಮೀಜಿ, ‘ಮೈಸೂರಿನ ಹುಲಿ ಎಂದೇ ಜನಮಾನಸದಲ್ಲಿ ನೆಲೆಗೊಂಡಿರುವ ಟಿಪ್ಪು ಸುಲ್ತಾನ್, ಚಿಕ್ಕ ಸಂಸ್ಥಾನವಾಗಿದ್ದ ಮೈಸೂರನ್ನು ಈಗಿರುವ ಕರ್ನಾಟಕದಾಚೆಗೂ ವಿಸ್ತರಿಸಿದರು. ಉಳುವವರಿಗೆ ಭೂಮಿಯ ಹಕ್ಕನ್ನು ನೀಡಿದರು. ಅವರಿಂದಾಗಿಯೇ ಕೇರಳ, ತಮಿಳುನಾಡು, ಆಂಧ್ರದಲ್ಲಿ ದಲಿತರು ಭೂಮಿಯ ಮಾಲೀಕತ್ವವನ್ನು ಪಡೆದರು’ ಎಂದು ಹೇಳಿದರು.

‘ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ, ಅಲ್ಲಿನ ಸ್ವಾಮೀಜಿಗೆ ರಕ್ಷಣೆ ಕೊಟ್ಟದ್ದಲ್ಲದೆ, ಧನ ಕನಕ ನೀಡಿದರು. ಸೌಹಾರ್ದ ‍ಪರಂಪರೆ ಕಟ್ಟಿದ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು. ಮೈಸೂರು ಅರಸರ ಗೌರವಕ್ಕೆ ಚ್ಯುತಿ ತರಲಿಲ್ಲ. ಆದರೆ, ಕೆಲ ಮೂರ್ಖರು ಅಜ್ಞಾನದಿಂದ ವಿರೋಧಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.  

‘ವಿದೇಶದಿಂದಲೂ ತಂತ್ರಜ್ಞರನ್ನು ಕರೆತಂದು ನಾಡಿನ ಅಭಿವೃದ್ಧಿಗೆ ಪ್ರಯತ್ನಿಸಿದರು. ಅವರ ಶಾಸನಗಳು, ಪತ್ರಗಳು ಕನ್ನಡದಲ್ಲಿಯೇ ಇವೆ. ಕನ್ನಡ ನಾಡಿನ ಹೆಮ್ಮೆಯ ಪುತ್ರ’ ಎಂದರು.

ಬೆಂಗಳೂರಿನ ಹಜರತ್‌ ಸೂಫಿ ವಲಿ ಬಾಬಾ, ‘ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ಕೊನೆ ಉಸಿರಿರುವವರೆಗೂ ಹೋರಾಡಿದರು. ನಾಡಿನ ಜನರು ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಿದರು. ರೈತರು, ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿದರು’ ಎಂದರು.

‘ಹಿಂದೂ– ಮುಸ್ಲಿಮರು ನನ್ನ ಕಣ್ಣುಗಳೆಂದು ಟಿಪ್ಪು ಹೇಳಿದ್ದರು. ರಾಕೆಟ್‌ ತಯಾರಿಕೆ, ರೇಷ್ಮೇ ಕೈಗಾರಿಕೆ, ಕಾವೇರಿಗೆ ಅಣೆಕಟ್ಟೆ ಕಟ್ಟಲು ಶಂಕುಸ್ಥಾಪನೆ ಮಾಡಿದ್ದರು. ಯುದ್ಧಭೂಮಿಯಲ್ಲೇ ಹೋರಾಡುತ್ತ ಮಡಿದ ದೇಶದ ಮೊದಲ ಹು‌ತಾತ್ಮ ಅವರು’ ಎಂದು ಹೇಳಿದರು.

ಮೌಲನಾ ಮೊಹಮ್ಮದ್‌ ಉಸ್ಮಾನ್‌ ಶರೀಫ್ ಸಾಹೇಬ್‌ ಅವರನ್ನು ಸನ್ಮಾನಿಸಲಾಯಿತು. ಹಜರತ್‌ ಮೌಲಾನಾ ಇಸ್ಮಾಯಿಲ್‌ ಷರೀಫ್‌, ಅಫ್ರೋಜ್‌ ಪಾಷಾ, ಮೊಹಬೊಬ್‌ ಖಾನ್‌, ಮಜೀದ್‌ ಅಹಮದ್‌, ಮೊಹಮ್ಮದ್‌ ಖಲೀಲ್‌ ಉರ್ ರೆಹಮಾನ್, ಮೊಹಮ್ಮದ್‌ ಮುಷೀರ್ ಚಿಸ್ಟಿ, ರದೀವುಲ್ಲಾ ಖಾನ್, ಸೂಫಿ ಮುಕ್ತಿತಾರ್ ಅಹಮದ್‌ ನೂರಿ ಬಾಬಾ ಹಾಜರಿದ್ದರು.

ಗಂಧವನ್ನು ಹೊತ್ತು ಸಾಗಿದ ಶಾಸಕ ತನ್ವೀರ್ ಸೇಠ್
ಗಂಧವನ್ನು ಹೊತ್ತು ಸಾಗಿದ ಶಾಸಕ ತನ್ವೀರ್ ಸೇಠ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT