ಮೈಸೂರು: ಹಳ್ಳಿಗಳ ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಮೂಲಕ, ‘ನಮ್ಮನ್ನು ನಾವು ಅರಿತುಕೊಳ್ಳುವುದು’ ಎಂಬ ವಿಭಿನ್ನ ಆಲೋಚನೆಯೊಂದಿಗೆ ಡಿ.22ರ ಭಾನುವಾರ, ಗ್ರಾಮಗಳತ್ತ ಹೆಜ್ಜೆ ಹಾಕಿದ್ದ ‘ನನ್ನೊಳಗಿನ ನಡಿಗೆ’ (ವಾಕ್ ವಿದಿನ್) ತಂಡ ಶನಿವಾರ ಮೈಸೂರಿಗೆ ಮರಳಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ) ಹಾಗೂ ‘ಗ್ರಾಮ್’ ಸಂಸ್ಥೆ ಆಯೋಜಿಸಿದ್ದ ‘ನನ್ನೊಳಗಿನ ನಡಿಗೆ’ ಕಾರ್ಯಕ್ರಮ ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಿಂದ ಆರಂಭಗೊಂಡಿತ್ತು.
ಡಾ.ಆರ್.ಬಾಲಸುಬ್ರಹ್ಮಣ್ಯಂ ಸಾರಥ್ಯದಲ್ಲಿ ಸತತ ಏಳು ದಿನ ಮೈಸೂರು, ನಂಜನಗೂಡು ತಾಲ್ಲೂಕಿನ 41 ಹಳ್ಳಿ ಸುತ್ತಿ, 160 ಕಿ.ಮೀ. ದೂರ ಸಂಚರಿಸಿದ ‘ನನ್ನೊಳಗಿನ ನಡಿಗೆ’ ತಂಡ ಹಲವು ಅನುಭವಗಳೊಂದಿಗೆ ಮೈಸೂರಿಗೆ ಮರಳಿದೆ.
ಶನಿವಾರ ಬೆಳಿಗ್ಗೆ ಮಾರಶೆಟ್ಟಿಹಳ್ಳಿಯ ಶಿರೂರು ಫಾರ್ಮ್‌ನಿಂದ ನಡಿಗೆ ಆರಂಭಿಸಿದ ತಂಡ, ರಿಂಗ್ ರೋಡ್ ಮೂಲಕ ಮೈಸೂರು ಪ್ರವೇಶಿಸಿತು. ಜೆಎಲ್‌ಬಿ ರಸ್ತೆ, ಕಲಾಮಂದಿರದ ಮುಂಭಾಗ ಹಾದು, ಎನ್‌ಆರ್ ಫೌಂಡೇಷನ್‌ನ ಎನ್‌ಆರ್ ಕಮ್ಯುನಿಟಿ ಡೆವಲಪ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿತು.
ಇಲ್ಲಿನ ವಿವಿಧ ಅಭಿವೃದ್ಧಿ ಚಟುವಟಿಕೆ ಗಮನಿಸಿ, ಮಧ್ಯಾಹ್ನದ ಭೋಜನ ಸ್ವೀಕರಿಸಿತು. ಇಲ್ಲಿಂದ ಒಂಟಿಕೊಪ್ಪಲಿನ ಮೂಲಕ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಉಪಶಮನ ಕೇಂದ್ರ ತಲುಪುವ ಮೂಲಕ ಕಾಲ್ನಡಿಗೆಯನ್ನು ಸಂಪೂರ್ಣಗೊಳಿಸಿತು.