ಮೈಸೂರು: ‘ರಾಮನ ಮೂರ್ತಿ ನೋಡಿದಾಗೆಲ್ಲ ಅಣ್ಣನ (ಅಪ್ಪ) ನೆನಪು ಬರುತ್ತದಮ್ಮ. ರಾಮನನ್ನು ಇಡೀ ಪ್ರಪಂಚವೇ ನೋಡುವಾಗ ಅಣ್ಣ ಇಲ್ವಲ್ಲಮ್ಮ ಅಂತ ಅರುಣ ಕಣ್ಣೀರಾಗುತ್ತಾನೆ. ಎಲ್ಲೋ ನೋಡ್ತಾ ಇರ್ತಾರಪ್ಪಾ. ಮನಸ್ಸಿಗೆ ಹಚ್ಚಿಕೊಬೇಡ ಎನ್ನುತ್ತಿರುತ್ತೇನೆ. ಇಂದು ಅವನ ತಂದೆ ಇರಬೇಕಿತ್ತು...’
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ ಭಾವುಕರಾದರು.
ಸಂಕ್ರಾಂತಿ ದಿನವೇ ವಿಗ್ರಹ ಆಯ್ಕೆಯಾಗಿರುವ ಅಧಿಕೃತ ಘೋಷಣೆ ಸೋಮವಾರ ಸಂಜೆ ಹೊರಬರುತ್ತಿದ್ದಂತೆಯೇ, ನಗರದ ಬಸವೇಶ್ವರ ವೃತ್ತದ ಬಳಿಯಿರುವ ಅವರ ಮನೆ ‘ಕಶ್ಯಪ ಕಲಾನಿಕೇತನ’ದಲ್ಲಿ ಹಬ್ಬದ ಸಂಭ್ರಮ ನೂರ್ಮಡಿಯಾಗಿತ್ತು.
ಅರುಣ್ ಪತ್ನಿ ವಿಜೇತಾ, ಅಕ್ಕ ಚೇತನಾ, ಅಣ್ಣ ಸೂರ್ಯಪ್ರಕಾಶ್, ಚಿಕ್ಕಪ್ಪಂದಿರಾದ ಶಿವಶಂಕರ್, ನಾಗೇಶ್, ಸಹೋದರರಾದ ಯಶ್ವಂತ್, ಸೌಮ್ಯಾ, ಗುರು, ಮಕ್ಕಳಾದ ಸಾನ್ವಿ, ವೇದಾಂತ್ ಸೇರಿದಂತೆ ಇಡೀ ಕುಟುಂಬದ ಸದಸ್ಯರೆಲ್ಲರಲ್ಲೂ ಸಂತಸ ಉಕ್ಕಿತ್ತು.
‘ರಾಮನ ಮೂರ್ತಿ ಕೆತ್ತಲು ಕಳೆದ ವರ್ಷದ ಜೂನ್‌ನಲ್ಲಿ ಹೋದವ ಬಂದಿದ್ದು ಡಿಸೆಂಬರ್‌ನಲ್ಲಿ, ಮಕ್ಕಳನ್ನು ನೋಡಿಕೊಂಡು ಹೋದವನು ಮತ್ತೆ ಬಂದಿಲ್ಲ. ಅವರ ತಂದೆ, ತಾತನಂತೆಯೇ ಕೆಲಸದಲ್ಲಿ ಶ್ರದ್ಧಾಭಕ್ತಿ. ಕರೆ ಮಾಡಿದಾಗೆಲ್ಲ, ‘ಗರ್ಭಗುಡಿಯಲ್ಲಿ ರಾಮ ಕೂರುವವರೆಗೂ ಬರುವುದಿಲ್ಲ ಎನ್ನುತ್ತಿದ್ದ’ ಎಂದು ಸರಸ್ವತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಂಕಣ ಕಟ್ಟಿ, ವಿಗ್ರಹ ಕೆತ್ತನೆ ಶುರು ಮಾಡಿದವ ದೊಡ್ಡ ತಪಸ್ಸನ್ನೇ ಮಾಡಿದ್ದಾನೆ. ಅಲ್ಲೆಲ್ಲ ಊಟ ಸರಿಹೋಗಲ್ಲ. ಅಡುಗೆ ಮಾಡಿಕೊಡಲು ನಾನು ಬರುತ್ತೇನೆಂದರೂ, ಅಮ್ಮ ನಿಮಗಿಲ್ಲಿ ಆರೋಗ್ಯ ಸರಿಹೋಗಲ್ಲ. ಚಳಿ–ಬಿಸಿಲು ಜಾಸ್ತಿಯೆಂದ. ಅಮ್ಮ ಸಂಕಟಪಡುತ್ತಾಳೆಂದು ಊಟ ಆಯಿತೆನ್ನುತ್ತಿದ್ದ. ಈಚೆಗೆ ಬಂದಾಗ ಹತ್ತು ಕೆ.ಜಿ ಇಳಿದುಹೋಗಿದ್ದ. ಅವನ ಶ್ರಮ ಈಗ ಫಲ ಕೊಟ್ಟಿದೆ’ ಎಂದು ಧನ್ಯತಾ ಭಾವದಲ್ಲಿ ಮಿಂದರು.
‘ಓಟ, ಆಟ ಎಲ್ಲ ಇಷ್ಟ. ವಾಲಿಬಾಲ್‌ನಲ್ಲೂ ಅವರ ಕೋಚ್, ‘ಚೆನ್ನಾಗಿ ಆಡ್ತಾನೆ, ನಮ್ಮತ್ರ ಕಳಿಸಿಬಿಡಿ ಎಂದಿದ್ದರು. ಅವನು ಸರ್ಕಾರಿ ಕೆಲಸ ಮಾಡಬೇಕೆಂದಿದ್ದೆ. ಆದರೆ, ತಂದೆಯ ಹಾದಿಯಲ್ಲೇ ಬೆಳೆದಿದ್ದಾನೆ. ಎಲ್ಲ ಹಿರೀಕರ ಆಶೀರ್ವಾದ. ಸುಭಾಷರ ಪ್ರತಿಮೆ ಉದ್ಘಾಟನೆಯಾದಾಗ ನನ್ನನ್ನು ಕರೆದೊಯ್ದಿದ್ದ. ಈ ಬಾರಿಯೂ ಅವಕಾಶ ಸಿಗಬಹುದೇನೋ’ ಎಂದರು.
‘ನಮ್ಮ ತಾತ ಬಸವಣ್ಣ ಶಿಲ್ಪಿ 1962ರಲ್ಲಿ ಜವಾಹರಲಾಲ್ ನೆಹರೂ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. 1984ರಲ್ಲಿ ರಾಷ್ಟ್ರೀಯ ಪ್ರಶಸ್ತಿಯೂ ದೊರೆತಿತ್ತು. ತಾತ– ಅಜ್ಜಿ ಹಾಗೂ ತಂದೆಯ ಆಶೀರ್ವಾದ ನಾವೆಲ್ಲ ಒಟ್ಟಿಗೇ ಇದ್ದೇವೆ. ಅರುಣ್ ಸಾಧನೆಯ ಹಿಂದೆ ಈ ಮನೆಯೂ ಇದೆ. ಬಿಡಿಬಿಡಿಯಾದರೆ ಶಕ್ತಿ ಕಡಿಮೆಯೆಂದು ತಂದೆ ಹೇಳುತ್ತಿದ್ದರು. ಅವರು ತೋರಿದ ದಾರಿಯಲ್ಲಿ ಸಾಗುತ್ತಿದ್ದೇವೆ’ ಎಂದು ಸಹೋದರ ಸೂರ್ಯಪ್ರಕಾಶ್ ಹೇಳಿದರು.
‘ಅರುಣ್ ಕೆತ್ತಿದ ಮೂರ್ತಿ ಆಯ್ಕೆಯಾಗಿರುವುದು ಮೈಸೂರಿಗಷ್ಟೇ ಅಲ್ಲ. ಕರ್ನಾಟಕದ ಹೆಮ್ಮೆ. ಮೂರ್ತಿಯನ್ನು ಕೆತ್ತುವ ಆರಂಭದಲ್ಲಿ ನೋಡಿದ್ದೇನೆ. ಅವನ ಕಲ್ಪನೆಯ ರಾಮ ಹೇಗೆ ಮೂಡಿಬಂದಿದ್ದಾನೆಂಬ ಕುತೂಹಲವಿದೆ. ಪ್ರತಿಷ್ಠಾಪನೆಯಾದ ನಂತರ ಅವಕಾಶ ಸಿಕ್ಕರೆ ಕಣ್ತುಂಬಿಕೊಳ್ಳುತ್ತೇವೆ’ ಎಂದು ಅರುಣ್ ಭಾವ ಸುನಿಲ್ ಕುಮಾರ್ ಹೇಳಿದರು.
ಎಂಬಿಎ ಮುಗಿದ ಮೇಲೆ ಕೆಲಸಕ್ಕೆ ಹೋಗೆಂದರೂ ತಂದೆ ಹಾದಿಯಲ್ಲಿ ಸಾಗಿ ಮಗ ಅರುಣ್ ಈ ಸಾಧನೆ ಮಾಡಿದ್ದಾನೆ.–ಸರಸ್ವತಿ, ಅರುಣ್ ಯೋಗಿರಾಜ್ ತಾಯಿ
ಸಂಕ್ರಾಂತಿಯಂದೇ ಅರುಣ್ ಅವರ ಮೂರ್ತಿ ಆಯ್ಕೆಯಾಗಿರುವುದು ನಮ್ಮ ಕುಟುಂಬವೆಂದೂ ಮರೆಯಲಾಗದ ಘಟನೆ .– ವಿಜೇತಾ, ಅರುಣ್ ಪತ್ನಿ
ವಾಲಿಬಾಲ್ ಎಂಬಿಎ ಬಿಟ್ಟು ಶಿಲ್ಪಿಯಾದ ಅರುಣ್...
ಉತ್ತರಾಖಂಡದ ಕೇದಾರನಾಥದಲ್ಲಿ 2021ರಲ್ಲಿ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆಯು ಅರುಣ್ ಯೋಗಿರಾಜ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ನವದೆಹಲಿಯ ಕರ್ತವ್ಯಪಥದಲ್ಲಿ ಸ್ಥಾಪನೆಯಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯಲ್ಲೂ ಅವರ ಕೈಚಳಕವಿದೆ. ಇದೀಗ ಅಯೋಧ್ಯೆಯ ‘ಬಾಲರಾಮ’ ಮೂಡಿದ್ದಾನೆ. 15 ವರ್ಷಗಳಿಂದ ಶಿಲ್ಪ ಕೆತ್ತನೆಯಲ್ಲಿ ತೊಡಗಿಕೊಂಡಿರುವ ಅರುಣ್ ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು. ಚೌಡಪ್ಪ ಆಚಾರ್ ಬಸವಣ್ಣ ಆಚಾರ್ ಬಸವಣ್ಣ ಶಿಲ್ಪಿ ಯೋಗಿರಾಜ್ ಶಿಲ್ಪಿ ಪ್ರಸಿದ್ಧ ಶಿಲ್ಪ ಕಲಾವಿದರು. ಅಪ್ಪ ಯೋಗಿರಾಜ್ ಕೊಡುತ್ತಿದ್ದ ಉಳಿಪೆಟ್ಟು ಬಾಲ್ಯದ ಅರುಣ್ ಅವರನ್ನು ಈ ವೃತ್ತಿಯತ್ತ ಆಕರ್ಷಿಸಿತ್ತು. ಅಂಬೇಡ್ಕರ್ ರಾಮಕೃಷ್ಣ ಪರಮಹಂಸ ವಿಶ್ವೇಶ್ವರಯ್ಯ ಜಯಚಾಮರಾಜ ಒಡೆಯರ್ ಶಿವಕುಮಾರ ಸ್ವಾಮೀಜಿ ವಿಷ್ಣುವರ್ಧನ್ ಸೇರಿದಂತೆ ಹಲವರ ಪ್ರತಿಮೆ ನಿರ್ಮಿಸಿದ್ದಾರೆ. ಓದಿದ್ದು ಎಂಬಿಎ. ವಿದ್ಯಾಭಾಸಕ್ಕೆ ತಕ್ಕಂತೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ‘ಕಲ್ಲಿ’ನ ಸೆಳೆತಕ್ಕೆ ಮಾರು ಹೋದರು. ಕಲ್ಲಿಗೆ ಮೂರ್ತರೂಪ ಕೊಡುತ್ತಾ ಬದುಕು ಕಟ್ಟಿಕೊಂಡರು. ಅಗ್ರಹಾರದ ಗನ್‌ಹೌಸ್ ಪಕ್ಕದಲ್ಲಿ ಅರುಣ್ ಅವರ ಮನೆಯ ಆವರಣದಲ್ಲಿರುವ ‘ವರ್ಕ್‌ಶಾಪ್’ನಿಂದ ಸದಾ ಶಿಲೆ ಕೆತ್ತುವ ಸದ್ದು ಬರುತ್ತಲೇ ಇರುತ್ತದೆ. 38 ವರ್ಷದ ಅರುಣ್ ಶಿಲ್ಪ ಕಲಾಕೃತಿ ರಚನೆ ಜತೆಗೆ ಕ್ಲೇ ಮಾಡೆಲಿಂಗ್ ಚಿತ್ರಕಲೆಯಲ್ಲೂ ನಿಪುಣರು. ಜತೆಗೆ ವಾಲಿಬಾಲ್ ಕ್ರೀಡೆಯಲ್ಲೂ ಮಿಂಚಿದ್ದಾರೆ. ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.