ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ಸಂಸದರಿದ್ದರೂ ನನ್ನ ಮೇಲೆಯೇ ದಾಳಿಯೇಕೆ: ಪ್ರತಾಪಸಿಂಹ ಪ್ರಶ್ನೆ

Published 26 ಡಿಸೆಂಬರ್ 2023, 11:17 IST
Last Updated 26 ಡಿಸೆಂಬರ್ 2023, 11:17 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದಲ್ಲಿ 28 ಸಂಸದರಿದ್ದರೂ ಮೈಸೂರು ಸಂಸದರನ್ನೇಕೆ ಎಲ್ಲರೂ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ನಾನು ಸೋಮಾರಿ ಸಿದ್ದನ ತರಹ ಕೆಲಸ ಮಾಡದೇ ಕೂರಬೇಕಿತ್ತೆ? ಜಾತಿ ಜಾತಿ ನಡುವೆ ಜನರನ್ನು ಎತ್ತಿಕಟ್ಟುತ್ತಿರಬೇಕಿತ್ತೇ’ ಎಂದು ಸಂಸದ ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರಿನಲ್ಲಿ ಮಂಗಳವಾರ ಹನುಮ ಜಯಂತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲಾಗುವುದಿಲ್ಲವೆಂದು ಸಿದ್ದರಾಮಯ್ಯ ಅವರಿಗೂ ಗೊತ್ತು. ತವರು ಕ್ಷೇತ್ರದಲ್ಲಿ ಸೋತರೆ ಅವರ ಮುಖ್ಯಮಂತ್ರಿ ಕುರ್ಚಿ ಅಲ್ಲಾಡಲಿದೆ. ಹೀಗಾಗಿಯೇ ದಾಳಿ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಜನರ ಮನೆ ಮಗನಾಗಿ ಕೆಲಸ ಮಾಡಿದ್ದನ್ನು ಸಹಿಸಲಾಗದೇ ನಿರ್ದಿಷ್ಟ ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಎಂಬಂತೆ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ’ ಎಂದರು.

‘ನನ್ನ ಸಹೋದರ ಮರಗಳ್ಳನೆಂದು ಕಾಂಗ್ರೆಸ್‌ ‍‍ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕುತ್ತಾರೆ. ಎಫ್‌ಐಆರ್‌ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಕಳೆದ 15 ವರ್ಷದಿಂದ ಶುಂಠಿ ಬೆಳೆದು ಜೀವನ ನಡೆಸುತ್ತಿದ್ದಾನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಿಮಗೆ ತಾಕತ್ತು, ದಮ್ಮಿದ್ದರೆ ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಹೋರಾಟ ಮಾಡಿ. 40 ವರ್ಷದಲ್ಲಿ ನೀವೇನು ಕಡೆದು ಕಟ್ಟೆ ಹಾಕಿದ್ದೀರಿ ಎಂಬುದನ್ನಿಟ್ಟುಕೊಂಡು ಜನರ ಮುಂದೆ ಹೋಗಿ. ಆದರೆ, ವೈಯಕ್ತಿಕ ದಾಳಿಯೇಕೆ ಮಾಡುತ್ತೀರಿ’ ಎಂದು ಹರಿಹಾಯ್ದರು.

‘ಬೆಂಗಳೂರು–ಮೈಸೂರು ಹೆದ್ದಾರಿ ರಿಂಗ್‌ ರಸ್ತೆ, ವಿಮಾನ ನಿಲ್ದಾಣ, ಸಾಫ್ಟ್‌ವೇರ್‌ ಪಾರ್ಕ್‌, ₹483 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿಯಾಗುತ್ತಿದೆ. ದೇಶದಲ್ಲಿ ಯಾವ ಸಂಸದರೂ ತರಲಾಗದ 10 ರೈಲು ಸೇವೆಯನ್ನು ಮೈಸೂರಿಗೆ ತರಲಾಗಿದೆ. ಈ ಮೂಲಕ ಅಭಿವೃದ್ಧಿ ರಾಜಕಾರಣ ಮಾಡಿದ್ದೇನೆ’ ಎಂದರು.

‘ಜಲಜೀವನ್‌ ಮಿಷನ್ ಯೋಜನೆಯಡಿ ₹213 ಕೋಟಿ ವೆಚ್ಚದಲ್ಲಿ ಹುಣಸೂರಿನ 294 ಗ್ರಾಮಗಳಿಗೆ, ₹239 ಕೋಟಿ ವೆಚ್ಚದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ 303 ಗ್ರಾಮಗಳಿಗೆ ಕುಡಿಯುವ ನೀರು ಕೊಡಲಾಗಿದೆ. ಇದುವರೆಗೂ ಕಾಂಗ್ರೆಸ್‌ನವರಿಗೆ ಮಾಡಲಾಗಿತ್ತೇ. ತಂಬಾಕು ಅನಧಿಕೃತ ಬೆಳೆಗಾರರಿಗೂ ಪರವಾನಗಿ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT