ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದುವೀರ್‌ ಗೆದ್ದರೆ ನಮಗೆ ಗೌರವ: ಶಾಸಕ ಜಿ.ಟಿ. ದೇವೇಗೌಡ

Published 16 ಮಾರ್ಚ್ 2024, 14:01 IST
Last Updated 16 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ ಬೆಂಬಲ ಕೋರಿದರು.

ಅವರನ್ನು ಸ್ವಾಗತಿಸಿ ಮಾತನಾಡಿ ಜಿಟಿಡಿ, ‘ಯದುವೀರ್ ಅರಮನೆ ಒಳಗೆ ಇದ್ದರಾದರೂ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಅವರಿಗೆ ಹಾಕುವ ಒಂದೊಂದು ಮತವೂ ಚಾಮುಂಡೇಶ್ವರಿ ಪಾದಕ್ಕೆ ಹಾಕುವ ಹೂವಿದ್ದಂತೆ’ ಎಂದರು.

‘ಮೀಸಲಾತಿ ಜಾರಿಗೆ ತಂದವರೇ ಮೈಸೂರು ಮಹಾರಾಜರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿರುದ್ಧ ನಾನು 1996ರಲ್ಲಿ ಸ್ಪರ್ಧಿಸಿ ಸೋತಿದ್ದೆ. ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಯದುವೀರ್ ಅವರನ್ನು ಗೆಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಬಿಜೆಪಿ–ಜೆಡಿಎಸ್ ನಡುವೆ ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ’ ಎಂದು ಹೇಳಿದರು.

‘ರಾಜವಂಶದ ಕುಡಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅವರು ಹೆಚ್ಚಿನ ಅಂತರದಿಂದ ಗೆದ್ದರೆ ನಮಗೇ ಗೌರವ’ ಎಂದರು.

‘ಯದುವೀರ್‌ ಅವರು ಚುನಾವಣೆಗೆ ಸಿದ್ಧವಾಗಿರುವುದಾಗಿ ತಮ್ಮ ನಡೆ–ನುಡಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಟಿಕೆಟ್‌ ಘೋಷಣೆಯಾದ ಮರುದಿನವೇ ರಸ್ತೆಬದಿಯಲ್ಲಿ ಕುಳಿತು ಚಹಾ ಕುಡಿದು ಟೀಕಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

‘ನಾನು- ನನ್ನ ಮಗ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನೀನೂ ಹೋಗಬೇಡ ಎಂದು ಪ್ರತಾಪ ಸಿಂಹಗೆ ಹೇಳಿದ್ದೇನೆ. ಆತ ಬುದ್ಧಿವಂತ. ನಮ್ಮೊಂದಿಗೆ ಸಹಕಾರ ನೀಡು ನಿನ್ನ ಗೌರವ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದ್ದೇನೆ. ಕಳೆದ ಬಾರಿ ನಮ್ಮ ಮೈತ್ರಿ ಕಾಂಗ್ರೆಸ್ ಜೊತೆ ಇದ್ದರೂ ನಮ್ಮ ಬೆಂಬಲ ಬಿಜೆಪಿಗೇ ಇತ್ತು’ ಎಂದು ತಿಳಿಸಿದರು.

ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವ ಎಸ್.ಎ. ರಾಮದಾಸ್, ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರುವ ಎಸ್. ಬಾಲರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT