ಮೈಸೂರು: ‘ಈಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚುತ್ತಿದ್ದು, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಜನಪ್ರಿಯವಾಗುತ್ತಿದೆ’ ಎಂದು ಆಯುಷ್ ಇಲಾಖೆ ಆಯುಕ್ತ ಡಾ. ಶ್ರೀನಿವಾಸಲು ಹೇಳಿದರು.
ನಗರದ ಕಲಾಮಂದಿರದಲ್ಲಿ ಶನಿವಾರ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಬಗ್ಗೆ ಜನರಿಗೆ ವಿಶ್ವಾಸ ಮತ್ತು ಗೌರವ ತರುವಂತಹ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡಬೇಕು. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.
‘ಜನರಿಗೆ ಆರೋಗ್ಯದ ಬಗ್ಗೆ ಅರಿವು ನೀಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಆಯೋಗ ರಚಿಸಲಾಗಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸಾತ್ವಿಕ ಆಹಾರ, ವಿಹಾರ ಕ್ರಮದಿಂದ ಆರೋಗ್ಯ ಭಾಗ್ಯ ಪಡೆಯಬಹುದು’ ಎಂದು ಹೇಳಿದರು.
ಆಯುಷ್ ಇಲಾಖೆ ನಿರ್ದೇಶಕ ಡಾ.ರಾಘವೇಂದ್ರ ರಾವ್ ಮಾತನಾಡಿ, ‘ವೈದ್ಯ ವೃತ್ತಿ ಪವಿತ್ರವಾಗಿದ್ದು, ತುಂಬು ಹೃದಯದಿಂದ ರೋಗಿಗಳ ಸೇವೆ ಮಾಡಬೇಕು. ವಿವಿಧ ವೈದ್ಯಕೀಯ ಪದ್ಧತಿಗಳ ಪ್ರಯೋಜನ ರೋಗಿಗಳಿಗೆ ಸಿಗುವಂತೆ ಆಗಬೇಕು’ ಎಂದು ಆಶಿಸಿದರು.
31 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್, ಸಹಾಯಕ ಪ್ರಾಧ್ಯಾಪಕರಾದ ಅನಿತಾ, ಕೆಂಪೇಗೌಡ ಇದ್ದರು.