ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಮುಗಿಯದ ಗೊಂದಲ

Last Updated 29 ಜನವರಿ 2013, 7:04 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ (ಡಿಸಿಟಿ) ಯೋಜನೆ ಮೈಸೂರು ಜಿಲ್ಲೆಯಲ್ಲಿ ಜ.1 ರಿಂದ ಅನುಷ್ಠಾನಗೊಂಡಿದೆ. ಎಲ್ಲ ಯೋಜನೆಗಳಂತೆ ಇದಕ್ಕೂ ಆರಂಭದಲ್ಲಿ ಅಪಸ್ವರ, ವಿಘ್ನ ಎದುರಾಗಿದೆ. `ಆಧಾರ್             ಕಾರ್ಡ್' ಹೊಂದಿರುವ ಫಲಾನುಭವಿಗಳಿಗೆ ಸಮೀಪದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಆದರೆ, ಶೇ 55 ರಷ್ಟು ಜನರಿಗೆ ಇದುವರೆಗೂ ಆಧಾರ್ ಕಾರ್ಡ್ ತಲುಪಿಲ್ಲ. ಇದು `ನೇರ ನಗದು' ವರ್ಗಾವಣೆ ಯಶಸ್ಸಿಗೆ ತೊಡಕಾಗಿ ಪರಿಣಮಿಸಿದೆ.

ಈ ನಡುವೆ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಬ್ಸಿಡಿ ಹಣವನ್ನೂ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಮರುಪಾವತಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಗ್ಯಾಸ್ ಏಜೆನ್ಸಿಗಳು ಗ್ರಾಹಕರ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್‌ನ ನಕಲು ಪ್ರತಿಗಳನ್ನು ಈಗಾಗಲೇ ಪಡೆದುಕೊಂಡಿವೆ. ಆದಾಗ್ಯೂ, ಗೊಂದಲ ಇನ್ನೂ ಮುಂದುವರಿದಿದೆ.

ಗೃಹ ಬಳಕೆಗಾಗಿ ಒಂದು ವರ್ಷದ ಅವಧಿಯಲ್ಲಿ ಪೂರೈಸುವ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಂಖ್ಯೆಯನ್ನು ಕೇಂದ್ರ ಸರ್ಕಾರ ಈಗಿನ 6ರ ಬದಲು 9ಕ್ಕೆ ಹೆಚ್ಚಿಸಲು ಮುಂದಾಗಿರುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಕೊಂಚ ನೆಮ್ಮದಿ ತಂದಿರುವುದು ನಿಜ. ಆದರೆ, ಈ ಹೆಚ್ಚಳ 2013ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಆದಾಗ್ಯೂ, ಬರುವ   ಮಾರ್ಚ್ 31ರ ವರೆಗೆ ಪ್ರತಿ ಬಳಕೆದಾರರಿಗೆ 3ರ ಬದಲು 5 ಸಬ್ಸಿಡಿ ಸಿಲಿಂಡರ್‌ಗಳು ದೊರೆಯಲಿವೆ. ಹೀಗಾಗಿ ಬೇಳೆ ಬೇಯಲು ಕಷ್ಟವಾಗದು!

ಮೈಸೂರು ನಗರದಲ್ಲಿ ಒಟ್ಟು 16 ಸಿಲಿಂಡರ್ ವಿತರಣಾ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಎಚ್‌ಪಿಸಿ-5, ಬಿಪಿಸಿ-13 ಹಾಗೂ ಎಲ್‌ಪಿಜಿ-3 ಕೇಂದ್ರಗಳು ಸಿಲಿಂಡರ್ ವಿತರಣೆ ಮಾಡುತ್ತಿವೆ. ಬಿಳಿಕೆರೆ ಬಳಿ ಈಚೆಗೆ ಮತ್ತೊಂದು ಕೇಂದ್ರವನ್ನು ಹೊಸದಾಗಿ ಆರಂಭಿಸಲಾಗಿದೆ. 2012ರ ಸೆಪ್ಟೆಂಬರ್ 14 ರಿಂದ 2013ರ ಮಾರ್ಚ್ 31ರ ವರೆಗೆ ಮೂರು ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಈಗ ಸಿಲಿಂಡರ್‌ಗಳ ಮಿತಿಯನ್ನು 6 ರಿಂದ 9ಕ್ಕೆ ಏರಿಕೆ ಮಾಡಿದ್ದರಿಂದ 5 ಸಿಲಿಂಡರ್‌ಗಳು ಲಭ್ಯವಾಗಲಿವೆ. ಇದಕ್ಕಾಗಿ ಎಲ್ಲ ಗ್ಯಾಸ್ ಏಜೆನ್ಸಿಗಳು ಕೆವೈಸಿ ಫಾರಂ ಅನ್ನು ಭರ್ತಿ ಮಾಡಿಸಿಕೊಂಡಿವೆ. ಈ ಫಾರಂನಲ್ಲಿ ಗ್ರಾಹಕರ ಡೊಮೆಸ್ಟಿಕ್ ಸಂಖ್ಯೆ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಚಾಲನಾ ಪರವಾನಿಗೆ ಪತ್ರ, ಪಾಸ್‌ಪೋರ್ಟ್, ಪಾನ್   ಕಾರ್ಡ್, ಆರ್‌ಆರ್ ಸಂಖ್ಯೆ..ಹೀಗೆ ಎಲ್ಲವನ್ನೂ ಪಡೆಯಲಾಗಿದೆ. `ಕೆವೈಸಿ ಫಾರಂ' ಸಲ್ಲಿಸುವ ಅವಧಿಯ್ನು ಎರಡು ಬಾರಿ ವಿಸ್ತರಿಸಿ, ಎಲ್ಲ ಗ್ರಾಹಕರೂ ವಿವರಗಳನ್ನು ಒದಗಿಸಲು ಅವಕಾಶ ಮಾಡಿಕೊಡಲಾಗಿತ್ತು.

ಕೇಂದ್ರ ಸರ್ಕಾರದ ಹುನ್ನಾರ?
20 ವರ್ಷಗಳ ಹಿಂದೆ ಎಪಿಎಲ್, ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 5 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುತ್ತಿತ್ತು. ಆ ಬಳಿಕ ಅದನ್ನು 2 ಲೀಟರ್‌ಗೆ ಸೀಮಿತಗೊಳಿಸಿ, ಬಿಳಿ ಸೀಮೆ ಎಣ್ಣೆ ಬದಲು ನೀಲಿ ಸೀಮೆ ಎಣ್ಣೆ ವಿತರಿಸಲಾರಂಭಿಸಿದರು. ಬಿಳಿ ಸೀಮೆ ಎಣ್ಣೆ ಬೇಕು ಎಂದಾದರೆ ನೀಲಿ ಸೀಮೆ ಎಣ್ಣೆಗಿಂತಲೂ 5 ರಿಂದ 10 ರೂಪಾಯಿ ಹೆಚ್ಚುವರಿ ಪಾವತಿಸುವಂತೆ ಸೂಚಿಸಲಾಯಿತು. ಹೀಗೆ ಆರಂಭವಾದ `ಹಂಚಿಕೆ ನಾಟಕ' ಕೊನೆಗೆ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಮಾತ್ರ ಸೀಮೆ ಎಣ್ಣೆ, ಉಳಿದವರಿಗೆ ಇಲ್ಲ ಎಂದು ಪ್ರಕಟಿಸಲಾಯಿತು.

ಈಗ ಇದೇ ಮಾದರಿಯನ್ನು ಸಿಲಿಂಡರ್ ವಿತರಣೆಗೂ ಅನುಸರಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಒಂದು ಸಿಲಿಂಡರ್‌ಗೆ ರೂ. 901 ಪಾವತಿಸುವಂತೆ ಸೂಚಿಸಿ, ಎಲ್ಲ ಗ್ರಾಹಕರೂ ಈ ಹಣವನ್ನು ಭರಿಸುವಷ್ಟು ಸಮರ್ಥರಾಗುವಂತೆ ಮಾಡಲಾಗುತ್ತದೆ. ಆ ಬಳಿಕ ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಸಬ್ಸಿಡಿ ದರದಲ್ಲಿ ಸಿಲಿಂಡರ್ ವಿತರಿಸಲಾಗುತ್ತದೆ. ಇನ್ನುಳಿದವರು (ಎಪಿಎಲ್ ಕಾರ್ಡುದಾರರು) ಕಡ್ಡಾಯವಾಗಿ ರೂ. 901 ಪಾವತಿಸಬೇಕು. ಯಾವುದೇ ಕಾರಣಕ್ಕೂ ಸಬ್ಸಿಡಿ ನೀಡುವುದಿಲ್ಲ ಎಂದು ಘೋಷಿಸಲು ಕೇಂದ್ರ ಇಷ್ಟೆಲ್ಲ ನಾಟಕವಾಡುತ್ತಿದೆ. 2014ರ ಲೋಕಸಭೆ ಚುನಾವಣೆ ಬಳಿಕ ಎಲ್ಲ ಗ್ರಾಹಕರಿಗೂ, ಪ್ರತಿ ಸಿಲಿಂಡರ್‌ಗೆ ರೂ. 901 ಕಡ್ಡಾಯಗೊಳಿಸಲು ಹುನ್ನಾರ ನಡೆಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT