ಶುಕ್ರವಾರ, ಜೂನ್ 5, 2020
27 °C

ಕೊರೊನಾ ಸಂಕಷ್ಟಕ್ಕೆ ಮಿಡಿದ ಹೃದಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ತಡೆ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ಬಡವರು, ಅಲೆಮಾರಿಗಳು, ದಿನಗೂಲಿಗಳು, ಹೊರ ರಾಜ್ಯದ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸುವ ಮೂಲಕ ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಮಾನವೀಯತೆ ಮೆರೆದಿದ್ದಾರೆ.

ವಕೀಲರು, ಸಾಹಿತಿಗಳು, ಉಪನ್ಯಾಸಕರು, ಜನ ಪ್ರತಿನಿಧಿಗಳು ಸೇರಿಂದತೆ ಹಲವು ದಾನಿಗಳು ಉದಾರವಾಗಿ ದಾನ ಮಾಡುತ್ತಿದ್ದಾರೆ. ಕೆಲವರು ಅನ್ನ, ಸಾಂಬರ್‌ ಸೇರಿದಂತೆ ಸಿದ್ಧ ಆಹಾರ ಪೂರೈಸಿದರೆ, ಕೆಲವರು ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ, ಬೆಲ್ಲ, ಸಕ್ಕರೆ, ಟೀ ಪುಡಿ ಮತ್ತಿತರ ಅಗತ್ಯ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

ವಕೀಲ ಕೆ.ಪಿ.ಶ್ರೀಪಾಲ್ ನೇತೃತ್ವದ ತಂಡ ಸೋಮವಾರ ಹಕ್ಕಿಪಿಕ್ಕಿ ಕ್ಯಾಂಪ್‌ ಸೇರಿದಂತೆ ವಿವಿಧ ಬಡಾವಣೆಗಳಿಗೆ ತೆರಳಿ ಕಿಟ್‌ಗಳನ್ನು ವಿತರಿಸಿದರು. ದೊಡ್ಡಪೇಟೆ ಸಿಪಿಐ ವಸಂತ ಕುಮಾರ್, ಶಿ.ಜು.ಪಾಶ, ಷಡಾಕ್ಷರಿ, ಇರ್ಫಾನ್, ವಸೀಂ ಇದ್ದರು.

ಜಿಲ್ಲಾ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗದ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಬಿದಿ ಬದಿ ನಿರ್ಗತಿಕರಿಗೆ ಅನ್ನದ ವ್ಯವಸ್ಥೆ ಮಾಡುತ್ತಿದೆ. ಶಿವಮೊಗ್ಗ ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ರಾತ್ರಿ ಊಟ ಪೂರೈಸುವ ಹೊಣೆ ನಿಭಾಯಿಸುತ್ತಿದ್ದಾರೆ. ಮಾನವ ಹಕ್ಕುಗಳ ಕಮಿಟಿ ಜನರ ಜೀವ ರಕ್ಷಣೆಗೆ ಬೀದಿಯಲ್ಲಿ ನಿಂತು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರಿಗೆ, ನಿರ್ಗತಿಕರಿಗೆ ನೀರು, ಬಿಸ್ಕೆಟ್ ಮತ್ತಿತರ ವಸ್ತುಗಳನ್ನು ಹಂಚಿದರು.

ಪಾಲಿಕೆ ಮಾಜಿ ಸದಸ್ಯೆ ಗೌರಿ ಶ್ರೀನಾಥ್ ನೇತೃತ್ವದ ತಂಡ ಕೊಳೆಗೇರಿಗಳಲ್ಲಿ ವಾಸಿಸುವ ದುರ್ಬಲರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಿತು. ಪ್ರೆಸ್‌ಟ್ರಸ್ಟ್‌  ವತಿಯಿಂದ ಪತ್ರಿಕಾ ವಿತರಕರಿಗೆ ಮಾಸ್ಕ್‌, ಗ್ಲೌಸ್ ನೀಡಲಾಯಿತು. ಬೆಳ್ಮಣ್‌ನ ಹ್ಯೂಮಾನಿಟಿ ಟ್ರಸ್ಟ್‌ನಿಂದ ಪೊಲೀಸರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. 

ಮುಖ್ಯಮಂತ್ರಿ ನಿಧಿಗೆ ದೇಣಿಗೆ:  ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಮುಖ್ಯಮಂತ್ರಿ ನಿಧಿಗೆ ₨ 10 ಲಕ್ಷ, ಕಾಶಿ ಶ್ರೀಗಳು ₨ 5 ಲಕ್ಷ ದೇಣಿಗೆ ನೀಡಿದರು. ಬಸವೇಶ್ವರ ವೀರಶೈವ ಸಮಾಜದ ಮುಖಂಡರು ಪಾಲಿಕೆ ಮಾಜಿ ಸದಸ್ಯ ಎನ್‌.ಜೆ.ರಾಜಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಅವರಿಗೆ ಚೆಕ್‌ ನೀಡಿದರು. ಕಾಶಿ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಣ ನೀಡಿದರು.

ಚಿಕನ್‌ ಸ್ಟಾಲ್‌ಗಳ ಬಂದ್: ಹಕ್ಕಿ ಜ್ವರದ ಭೀತಿ ಕಾರಣ ನಗರದ ಚಿಕಿನ್ ಸ್ಟಾಲ್‌ಗಳ ಮೇಲೆ ಸೋಮವಾರ ದಾಳಿ ನಡೆಸಿದ ತಹಶೀಲ್ದಾರ್ ಗಿರೀಶ್ ನೇತೃತ್ವದ ತಂಡ ಬಂದ್‌ ಮಾಡಿಸಿತು. ಅನಧಿಕೃತವಾಗಿ ಕಾರ್ಯನಿರ್ವಹಿಸುವ ಸ್ಟಾಲ್‌ಗಳ ಮಾಲೀಕರ ವಿರುದ್ಧ ಕೇಸು ದಾಖಲಿಸುವ ಎಚ್ಚರಿಕೆ ನೀಡಿದರು.

ಶುಭಂ ಹೋಟೆಲ್‌ಗೆ ಅನುಮತಿ: ಬೇಡಿಕೆ ಸಲ್ಲಿಸಿದವರಿಗೆ ಸಿದ್ಧ ಆಹಾರ ಪೂರೈಸಲು ನಗರದ ಶುಭಂ ಹೋಟೆಲ್‌ಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಕಡಿಮೆ ದರಕ್ಕೆ ಆಹಾರ ಪೂರೈಸುವ ಜತೆಗೆ, ನಿರ್ಗತಿಕರಿಗೆ ಉಚಿತ ಸೇವೆ ಸಲ್ಲಿಸಲಾಗುವುದು ಎಂದು ಹೋಟೆಲ್‌ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು