4
ಸೊರಬ: ಪ್ರಗತಿ ಪರಿಶೀಲನಾ ಸಂಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ

ಸ್ಥಳ ಪರಿಶೀಲನೆ ನಂತರವೇ ಕಾಮಗಾರಿಗೆ ಅನುಮತಿ

Published:
Updated:
ಸೊರಬದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿದರು

ಸೊರಬ: ಯಾವುದೇ ಇಲಾಖೆಯ ಮುಖ್ಯಸ್ಥರು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ ನಂತರವೇ ಆಯಾ ಕಾಮಗಾರಿ ಪ್ರಾರಂಭಿಸುವಂತೆ ಶಾಸಕ ಕುಮಾರ್ ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನಸ್ಸಿಗೆ ಬಂದಂತೆ ಯೋಜನೆ ರೂಪಿಸಿ ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

‘ಜನರ ಆರೋಗ್ಯಕ್ಕೆ ಸಂಚಕಾರ ತರುವ ನಕಲಿ ವೈದ್ಯರ ಬಗ್ಗೆ ಪಟ್ಟಿ ಮಾಡಿ. ಕೂಡಲೇ ಅಂತಹ ಕ್ಲಿನಿಕ್‌ಗಳನ್ನು ಮುಚ್ಚಿಸಬೇಕು. ನಕಲಿ ವೈದ್ಯರ ಬಗ್ಗೆ 15 ದಿನದೊಳಗೆ ವರದಿ ನೀಡಿ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಗಾಯಿತ್ರಿ ಅವರಿಗೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರು ಹುದ್ದೆಗೆ  ರಾಜೀನಾಮೆ ನೀಡಿರುವುದರಿಂದ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಗೆ ತೊಂದರೆಯಾಗುತ್ತಿದೆ. ತಾಲ್ಲೂಕಿನ ಹೊಸಬಾಳೆ, ಭಾರಂಗಿ, ಕೆರೆಹಳ್ಳಿ ಹಾಗೂ ಉಳವಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಗಾಯಿತ್ರಿ ಸಭೆಗೆ ಮಾಹಿತಿ ನೀಡಿದರು.

ಕಟ್ಟಡಗಳ ದುರಸ್ತಿಗೆ ಕೈಗೊಂಡಿರುವ ಕ್ರಮದ ಕುರಿತು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅವರನ್ನು ಶಾಸಕರು ವಿಚಾರಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟಡದ ದುರಸ್ತಿಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿಲ್ಲ. ಜೊತೆಗೆ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಿಲ್ಲ ಎಂದು ಅವರು ಹೇಳಿದ್ದೇ ಶಾಸಕರು ಸಿಡಿಮಿಡಿಗೊಂಡರು.

ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ಹೀಗಾಗಿ ಸ್ಥಳೀಯ ಅಧಿಕಾರಿಗಳು ವಿಳಂಬ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಹಳಷ್ಟು ನಿವಾಸಿಗಳು 10 ವರ್ಷಗಳ ಹಿಂದೆಯೇ ಸರ್ಕಾರದಿಂದ ಪರಿಹಾರ ಪಡೆದು ರಸ್ತೆ ವಿಸ್ತರಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಕೆಲವರು ಮಾತ್ರ ಹೆಚ್ಚಿನ ಪರಿಹಾರ ಕೇಳಿ ತಡೆ ಉಂಟು ಮಾಡುತ್ತಿದ್ದಾರೆ. ಈಗಾಗಲೇ ಅವರ ಮನವೊಲಿಸಲಾಗಿದೆ. ರಸ್ತೆ ವಿಸ್ತರಣೆಗೆ ಒಂದು ವಾರದಲ್ಲಿ ಲೋಕೋಪಯೋಗಿ ಇಲಾಖೆ ಮುಂದಾಗಬೇಕು ಎಂದು ಎಂಜಿನಿಯರ್ ರೇವಣಸಿದ್ದಯ್ಯ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬೀಡಾಡಿ ದನಗಳ ಮಾಲೀಕರ ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಶ್ರೀಪಾದ್, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗಗೌಡ, ತಾರಾ ಶಿವಾನಂದಪ್ಪ, ಸತೀಶ್ ಅರ್ಜುನಪ್ಪ,ವಿರೇಶ್ ಕೊಟಗಿ, ತಹಶೀಲ್ದಾರ್ ಸಿ.ಪಿ.ನಂದಕುಮಾರ್, ಇಒ ಬಸವರಾಜ್, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಬಿಇಒ ಮಂಜುನಾಥ್, ಲೋಕೋಪಯೋಗಿ ಎಂಜಿನಿಯರ್ ರೇವಣಸಿದ್ದಯ್ಯ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !