ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಂತಿ–ಭೇದಿ ಪ್ರಕರಣ ಹೆಚ್ಚಳ: ಕಾಲರಾ ಭೀತಿ

ಕಲುಷಿತ ನೀರು: ಪ್ರಯೋಗಾಲಯಕ್ಕೆ ನೀರಿನ ಮಾದರಿ ರವಾನೆ
Last Updated 15 ಮೇ 2019, 18:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕಲುಷಿತ ನೀರು ಸೇವನೆಯಿಂದ ವಾಂತಿ–ಭೇದಿಗೆ ತುತ್ತಾಗಿ ಅಸ್ವಸ್ಥಗೊಂಡ ತಾಲ್ಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಳಿ, ಪಡುವಳ್ಳಿ, ಕೋಟೇಗುಡ್ಡೆ, ನಲ್ಲಿಗುಡ್ಡೆ ಗ್ರಾಮಕ್ಕೆ ಬುಧವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ವಾಂತಿ–ಭೇದಿಗೆ ತುತ್ತಾಗಿದ್ದ 20 ಮಂದಿ ಸ್ಥಳೀಯ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ ಮತ್ತಿಬ್ಬರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದು ಕಾಲರಾ ರೋಗ ಹರಡುವ ಭೀತಿ ಉಂಟಾಗಿದೆ.

ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಳಿ ಗ್ರಾಮದಲ್ಲಿ 3 ಜನರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದು ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಮಾರು 40 ಕುಟುಂಬಗಳಿರುವ ಈ ಗ್ರಾಮದ ಜನರು ಮಾಲತಿ ನದಿ ಹಾಗೂ ತೆರೆದ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದಾರೆ. ನದಿ ಹಾಗೂ ಬಾವಿಯಲ್ಲಿ ನೀರು ಬತ್ತಿರುವುದರಿಂದ ಶುದ್ಧ ನೀರು ಲಭ್ಯವಾಗುತ್ತಿಲ್ಲ. ಗ್ರಾಮಸ್ಥರು ಅನಿವಾರ್ಯವಾಗಿ ಕಲುಷಿತ ನೀರನ್ನು ಬಳಕೆ ಮಾಡಿದ್ದು, ಬುಧವಾರ ಇನ್ನಿಬ್ಬರು ಅಸ್ವಸ್ಥಗೊಂಡಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ವಾಂತಿ–ಭೇದಿಗೆ ಕಾರಣವಾದ ಅಂಶಗಳ ಕುರಿತು ಪರಿಶೀಲನೆ ನಡೆಸಿದರು. ಕಲುಷಿತ ನೀರಿನ ಮಾದರಿಯನ್ನು ಆರೋಗ್ಯ ಇಲಾಖೆಯು ಪ್ರಯೋಗಾಲಯಕ್ಕೆ ಕಳುಹಿಸಿದೆ. ಸಮಗ್ರ ಕುಡಿಯುವ ನೀರು ಪೂರೈಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.

‘ಈ ಭಾಗದಲ್ಲಿನ ಹಳೆಯ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಎಂಜಿನಿಯರ್ ಜನಾರ್ದನ್ ಮೆಸ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT