ಸೋಮವಾರ, ಜನವರಿ 20, 2020
19 °C

ರೈಲ್ವೆ ಮೇಲು ಸೇತುವೆಗಳಿಗೆ ನೀಲನಕ್ಷೆ ಸಿದ್ಧ: ಸಂಸದ ಬಿ.ವೈ.ರಾಘವೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹೊಳೆಹೊನ್ನೂರು ಮಾರ್ಗದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. 

ಹೊಳೆಹೊನ್ನೂರು ಮಾರ್ಗದ ಗುಡ್ಡೇಕಲ್‌ನಿಂದ ಆರಂಭವಾಗಿ ವಿದ್ಯಾನಗರ ಬಿ.ಎಚ್.ರಸ್ತೆಗೆ ವೃತ್ತಾಕಾರದಲ್ಲಿ ಸೇತುವೆ ಸಂಪರ್ಕ ಕಲ್ಪಿಸಲಿದೆ. ₹ 40 ಕೋಟಿ ವೆಚ್ಚದಲ್ಲಿ 600 ಮೀಟರ್ ಸೇತುವೆ ನಿರ್ಮಾಣವಾಗಲಿದೆ. ಭದ್ರಾವತಿ ಮಾರ್ಗದ ಕಡದಕಟ್ಟೆ, ಸವಳಂಗ ರಸ್ತೆ, ಸೋಮಿನಕೊಪ್ಪ ರಸ್ತೆಯಲ್ಲೂ ಮೇಲು ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿಕಾರಿಪುರ ರೈಲು ಮಾರ್ಗ ಸ್ವಾಧೀನ ಆರಂಭ 

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭವಾಗಿವೆ. ಕೇಂದ್ರದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ರಾಜ್ಯ ಸರ್ಕಾರವೂ ನೆರವು ನೀಡುತ್ತಿದೆ. ₨ 994 ಕೋಟಿ ವೆಚ್ಚದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಸುಮಾರು 49 ಹಳ್ಳಿಗಳ 1,365 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಕೆಐಎಡಿಬಿಗೆ ಸ್ವಾಧೀನದ ಹೊಣೆ ನೀಡಲಾಗಿದೆ. 4 ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಗಿದು ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಶಿವಮೊಗ್ಗದಲ್ಲಿ ಕೋಚಿಂಗ್ ಡಿಪೊ 

ಶಿವಮೊಗ್ಗ ಹೊರವಲಯದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೊ ಆರಂಭಿಸಲು ₹62 ಕೋಟಿ ಬಿಡುಗಡೆಯಾಗಲಿದೆ. ಈ ವೆಚ್ಚ ₹100 ಕೋಟಿ ದಾಟಬಹುದು. ಈಗಿರುವ 16 ಎಕರೆ ಜಾಗದ ಜತೆಗೆ ಇನ್ನೂ 10 ಎಕರೆ ನೀಡಲಾಗುವುದು. ತಾಳಗುಪ್ಪ-ಸಿದ್ದಾಪುರ-ಹುಬ್ಬಳ್ಳಿ ಮಾರ್ಗದ ಸರ್ವೆ ಕಾರ್ಯಕ್ಕೆ ₹79 ಲಕ್ಷ ಬಿಡುಗಡೆಯಾಗಿದೆ. ಶಿವಮೊಗ್ಗ -ಶೃಂಗೇರಿ-ಮಂಗಳೂರು ರೈಲು ಮಾರ್ಗದ ಯೋಜನೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ರಸ್ತೆ ಮಾರ್ಗಗಳಿಗೆ  ₹45 ಕೋಟಿ

ಜಿಲ್ಲೆಯಲ್ಲಿ ಹಾದು ಹೋಗಿರುವ ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹45 ಕೋಟಿ ವಿಶೇಷ ಅನುದಾನ ನೀಡಿದೆ. ಸಾಗರ-ತಾಳಗುಪ್ಪ ಮಾರ್ಗಕ್ಕೆ ₹4.5 ಕೋಟಿ, ಸಾಗರ–ಬೈಂದೂರು ಮಾರ್ಗಕ್ಕೆ ₹8 ಕೋಟಿ, ಸಿಗಂದೂರು ರಸ್ತೆಗೆ ₹4.5 ಕೋಟಿ, ರಾಷ್ಟ್ರೀಯ ಹೆದ್ದಾರಿ ಸಾಗರ-ತುಪ್ಪೂರು ರಸ್ತೆ ಅಗಲಕ್ಕೆ ₹11 ಕೋಟಿ, ಶಿಕಾರಿಪುರ-ರಾಣೆಬೆನ್ನೂರು ರಸ್ತೆಗೆ ₹8 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗದ ಶ್ರೀರಾಂಪುರದವರೆಗೆ ರಾಷ್ಟ್ರೀಯ ಹೆದ್ದಾರಿ 206 ಅಭಿವೃದ್ಧಿಪಡಿಸಲಾಗುವುದು. 15 ಹಳ್ಳಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ₹96 ಕೋಟಿ ಪರಿಹಾರ ನೀಡಲಾಗುವುದು ಎಂದರು.

2,200 ಮೀಟರ್‌ಗೆ ಹಿಗ್ಗಿದ ವಿಮಾನ ರನ್‌ವೇ

ವಿಮಾನನಿಲ್ದಾಣ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈಟ್ಸ್ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಕಂಪನಿಗೆ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಹಿಂದೆ 1,200 ಮೀಟರ್ ರನ್‌ವೇ ಇತ್ತು. ಈಗ 2,200 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚು ಆಸನವುಳ್ಳ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುತ್ತದೆ. ₹25 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಒಟ್ಟು ವೆಚ್ಚ ₹45 ಕೋಟಿಯಿಂದ ₹140 ಕೋಟಿಗೆ ಹೆಚ್ಚಿಸಲಾಗಿದೆ. ನಿಲ್ದಾಣ ಮುಗಿದ ನಂತರ ವಿಮಾನಗಳ ಹಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ, ಸಲಹಾ ಸಮಿತಿ ಸದಸ್ಯ ಮಾಲತೇಶ್, ಎಸ್.ಎಸ್.ಜ್ಯೋತಿ ಪ್ರಕಾಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು