ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಸುತ್ತ ಕಲ್ಲು ಗಣಿಗಾರಿಕೆ: ನಿಮಿಷಾಂಬ ದೇಗುಲದ ಬಳಿ ಪ್ರತಿಭಟನೆ 9ಕ್ಕೆ

ಸಂಪೂರ್ಣ ಸ್ಥಗಿತಕ್ಕೆ ಒತ್ತಾಯ
Last Updated 8 ಜನವರಿ 2019, 11:23 IST
ಅಕ್ಷರ ಗಾತ್ರ

ರಾಮನಗರ: ಕೆಆರ್‌ಎಸ್‌ ಅಣೆಕಟ್ಟೆ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯೊಳಗೆ ನಡೆದಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಇದೇ 9ರಂದು ಬೆಳಗ್ಗೆ 9ಕ್ಕೆ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲದ ಬಳಿ ಕಾವೇರಿಯಲ್ಲಿ ಮುಳುಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್‌ ಗೌಡ ತಿಳಿಸಿದರು.

‘ಕೆಆರ್‌ಎಸ್‌ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ನಮ್ಮ ಸಂಘಟನೆ ವತಿಯಿಂದ ಏಳು ದಿನ ಕಾಲ 150 ಕಿ.ಮೀ.ಗೂ ಹೆಚ್ಚು ದೂರದ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿತ್ತು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸಹ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಆದಾಗ್ಯೂ ಗಣಿಗಾರಿಕೆ ನಡೆಯುತ್ತಲೇ ಇದೆ. ಅಲ್ಲಿನ ಗಣಿ ಪ್ರದೇಶಗಳಿಂದ ಬೃಹತ್‌ ಯಂತ್ರಗಳ ಸ್ಥಳಾಂತರ ಆಗಿಲ್ಲ. ಇದೆಲ್ಲದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡುತ್ತಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಕ್ರಮ ಕೈಗೊಂಡು ಅಕ್ರಮಕ್ಕೆ ತಡೆ ಒಡ್ಡಿದ್ದಾರೆ. ಹೀಗಾಗಿ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿಸಲು ಲಾಬಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಸಹ ಗಣಿ ಲಾಬಿಗೆ ಮಣಿದಿದ್ದಾರೆ ಎಂದು ದೂರಿದರು.

ಡಿಸ್ನಿಲ್ಯಾಂಡ್‌ಗೆ ವಿರೋಧ: ಕೆಆರ್‌ಎಸ್‌ ಬಳಿ ಸರ್ಕಾರವು ಅಮೆರಿಕಾ ಕಂಪನಿ ಮೂಲಕ ₨1600 ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಮನೋರಂಜನಾ ಪಾರ್ಕ್‌ ನಿರ್ಮಿಸುವುದು ಅಗತ್ಯವಿಲ್ಲ. ಇದರಿಂದ ಅಣೆಕಟ್ಟೆ ಪ್ರವೇಶಕ್ಕೆ ದುಬಾರಿ ಶುಲ್ಕವಾಗಿ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಇಲ್ಲಿ 125 ಅಡಿ ಎತ್ತರದ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳಿದ್ದು, ಇದರಿಂದ ಅಣೆಕಟ್ಟೆಯ ಬುನಾದಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.

ಅದರ ಬದಲಿಗೆ ಸರ್ಕಾರವು ಗಗನಚುಕ್ಕಿ, ಭರಚುಕ್ಕಿ ಬಳಿ ಮನೋರಂಜನಾ ಪಾರ್ಕ್‌ ನಿರ್ಮಿಸಬೇಕು. ಮೊದಲು ಮಂಡ್ಯ, ಮಳವಳ್ಳಿ, ಮದ್ದೂರು, ನಾಗಮಂಗಲ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್‌ಗೌಡ, ಪದಾಧಿಕಾರಿಗಳಾದ ರಂಜಿತ್‌ ಗೌಡ, ಬೆಂಕಿ ಶ್ರೀಧರ್, ಮರಿಅಂಕೇಗೌಡ, ಕೃಷ್ಣಪ್ರಸಾದ್, ಚೇತನ್‌, ವರುಣ್‌, ರಾಜೇಂದ್ರ ಪ್ರಸಾದ್‌ ಇದ್ದರು.

6 ಸೆಕೆಂಡ್ ಕಂಪನ
‘ಅಕ್ರಮ ಗಣಿಗಾರಿಕೆ ಪರಿಣಾಮ ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತ ಸುಮಾರು 6 ಸೆಕೆಂಡ್‌ಕಾಲ ಭೂಮಿ ಕಂಪಿಸಿದ್ದಾಗಿ ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ಸರ್ಕಾರಕ್ಕೆ ವರದಿ ನೀಡಿದ್ದು, ಗಣಿಗಾರಿಕೆ ನಿಲ್ಲಿಸುವಂತೆ ಸಲಹೆ ನೀಡಿದೆ. ಆದರೆ ಈ ವರದಿಯನ್ನು ಒಪ್ಪಬಾರದು. ಪುಣೆ ಮೂಲದ ಮತ್ತೊಂದು ಏಜೆನ್ಸಿಯಿಂದ ವರದಿ ತಯಾರಿಸಬೇಕು ಎಂದು ಗಣಿ ಮಾಲೀಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ತಮಗೆ ಬೇಕಾದ ಹಾಗೇ ವರದಿ ತಿರುಚಿಕೊಂಡು ಮತ್ತೆ ಗಣಿಗಾರಿಕೆ ಆರಂಭಿಸಲು ಹುನ್ನಾರ ನಡೆದಿದೆ’ ಎಂದು ರಮೇಶ್‌ಗೌಡ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT