ಸೋಮವಾರ, ಮಾರ್ಚ್ 8, 2021
24 °C
ವಾರಾಂತ್ಯ, ರಜೆಯ ದಿನಗಳಲ್ಲಿ ಕಿಕ್ಕಿರಿದು ಪ್ರಯಾಣಿಸುವ ಜನರು

ರಾಮನಗರ: ಹೆಚ್ಚುವರಿ ಬಸ್‌ಗಳ ಸೌಲಭ್ಯಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಶನಿವಾರ- ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಬೆಂಗಳೂರು ಕಡೆಗೆ ಹೋಗಲು ರಾಮನಗರ ಡಿಪೋದಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಇಲ್ಲಿನ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ರಜಾ ದಿನಗಳು ಮತ್ತು ಸೋಮವಾರ ಬೆಂಗಳೂರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳು ಇಲ್ಲದಿರುವುದರಿಂದ ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ ಎಂದು ವಿವೇಕಾನಂದನಗರದ ನಿವಾಸಿ ಸಿದ್ದರಾಜು ತಿಳಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಬಸ್‌ಗಳು ಮೈಸೂರಿನಲ್ಲಿಯೇ ಭರ್ತಿಯಾಗಿರುತ್ತವೆ. ಚನ್ನಪಟ್ಟಣ, ರಾಮನಗರದ ಪ್ರಯಾಣಿಕರು ಬಸ್‌ ಹತ್ತಲು ಸಾಧ್ಯವಿಲ್ಲದಷ್ಟು ಪ್ರಯಾಣಿಕರು ಬಸ್‌ಗಳಲ್ಲಿ ಇರುತ್ತಾರೆ. ಕಷ್ಟಪಟ್ಟು ಬಸ್‌ ಹತ್ತಿದರೂ ಸಹ ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲ ಎಂದು ತಿಳಿಸಿದರು.

ಅವಳಿ ನಗರಗಳಾದ ರಾಮನಗರ- ಚನ್ನಪಟ್ಟಣದಲ್ಲಿನ ಹೆಚ್ಚಿನ ಜನರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ರಜಾ ದಿನಗಳು ಮತ್ತು ವಾರದ ಕೊನೆಯ ದಿನ ಇಲ್ಲಿಗೆ ಬರುತ್ತಾರೆ. ಭಾನುವಾರ ಮಧ್ಯಾಹ್ನದಿಂದ ಮತ್ತು ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಮರಳಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಬಸ್‌ಗಾಗಿ ಪರದಾಡುವ ಪರಿಸ್ಥಿತಿ ಇದೆ ಎಂದರು.

ಕಷ್ಟಪಟ್ಟು ಬಸ್‌ ಹತ್ತಿದರೂ ಸಹ ಬೆಂಗಳೂರಿನವರೆಗೆ ಕುಳಿತುಕೊಳ್ಳಲು ಸೀಟು ಸಿಗದೆ ನಿಂತುಕೊಂಡೇ ಹೋಗಬೇಕಾಗಿದೆ. ಸಾಮಾನ್ಯ ದಿನಗಳಲ್ಲಿ ರಾಮನಗರದಿಂದ ಬೆಂಗಳೂರಿಗೆ ಒಂದು ಗಂಟೆಯ ಪ್ರಯಾಣ. ಆದರೆ ಈ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಎರಡು ಗಂಟೆಗೂ ಅಧಿಕ ಸಮಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಕಷ್ಟ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕ ಶ್ರೀಧರ್ ತಿಳಿಸಿದರು.

ಸಮೂಹ ಸಾರಿಗೆ ಉತ್ತೇಜಿಸುವ ದೃಷ್ಟಿಯಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ ಸೌಲಭ್ಯ ಕಲ್ಪಿಸಬೇಕಾದ ಕೆಎಸ್‌ಆರ್‌ಟಿಸಿ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಚ್ಛತೆ ಇಲ್ಲ: ‘ಇಲ್ಲಿನ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಅರೇಹಳ್ಳಿಯ ಪುಟ್ಟಸ್ವಾಮಿ ತಿಳಿಸಿದರು.

‘ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು