ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಕೆಆರ್‌ಟಿಸಿ: ರಾಯಚೂರು ವಿಭಾಗಕ್ಕೆ ₹159 ಕೋಟಿ ಆದಾಯ

ಒಂದು ವರ್ಷದಲ್ಲಿ ನಾಲ್ಕು ಕೋಟಿ ಮಹಿಳೆಯರ ಉಚಿತ ಪ್ರಯಾಣ
Published 15 ಜೂನ್ 2024, 6:57 IST
Last Updated 15 ಜೂನ್ 2024, 6:57 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆ ಜಾರಿಗೆ ಬಂದು ವರ್ಷ ತುಂಬಿದೆ. ಈ ಯೋಜನೆ ಆರಂಭವಾದ ದಿನದಿಂದ ಇವತ್ತಿನ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಕೆಕೆಆರ್‌ಟಿಸಿ)ದ ರಾಯಚೂರು ವಿಭಾಗಕ್ಕೆ ₹ 159 ಕೋಟಿ ಆದಾಯ ಬಂದಿದೆ.

ಒಂದು ವರ್ಷದ ಅವಧಿಯಲ್ಲಿ ಒಟ್ಟು 4,26,12,408 ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ. ಪ್ರಮುಖ ಮಾರ್ಗಗಳಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸುತ್ತಿರುವ ಕಾರಣ ಸಾರ್ವಜನಿಕರಿಗೂ ಅನುಕೂಲವಾಗಿದೆ. ನಿಗಮಕ್ಕೂ ಆದಾಯ ಬಂದಿದೆ.

2023ರ ಜೂನ್‌ನಲ್ಲೇ ಸಾರಿಗೆ ಸಂಸ್ಥೆಗೆ ಗರಿಷ್ಠ ₹ 6,78,66.726 ಆದಾಯ ಬಂದಿದೆ. ಮಹಿಳೆಯರೊಂದಿಗೆ ಅವರ ಪತಿ, ಸಹೋದರ ಹೀಗೆ ಪುರುಷರೂ ಪ್ರಯಾಣ ಮಾಡಿದ ಕಾರಣ ನಿಗಮಕ್ಕೆ ಹೆಚ್ಚಿನ ಆದಾಯ ಬಂದಿದೆ.

2024ರ ಜನವರಿಯಲ್ಲಿ ಅತಿ ಹೆಚ್ಚು 3,92,700 ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಆರಂಭವಾದ ಹೊಸದರಲ್ಲಿ ಮೊದಲ ತಿಂಗಳು 1.84 ಲಕ್ಷ ಮಹಿಳೆಯರು ಉಚಿತ ಪ್ರವಾಸ ಮಾಡಿದ್ದರು. ಉಳಿದ ತಿಂಗಳುಗಳಲ್ಲಿ ಸರಾಸರಿ 32ಲಕ್ಷದಿಂದ 36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ.

ಜಿಲ್ಲೆಗೆ ಒಟ್ಟು 143 ಹೊಸ ಬಸ್‌ಗಳು ಬಂದಿವೆ. ಶಕ್ತಿ ಯೋಜನೆ ಜಾರಿಯಾದ ನಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 83 ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗಿದೆ. ಬಸ್‌ಗಳ ಟ್ರಿಪ್‌ಗಳನ್ನು 152ಕ್ಕೆ ಹೆಚ್ಚಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ತಿಳಿಸಿದರು.

ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಹೋಗಿ ಬಂದಿದ್ದಾರೆ. ಜಿಲ್ಲೆಯ ಅತಿಹೆಚ್ಚು ಮಹಿಳೆಯರು ಮಂತ್ರಾಲಯ, ನೀರಮಾನ್ವಿಯ ಯಲ್ಲಮ್ಮ, ಧರ್ಮಸ್ಥಳ, ಹುಬ್ಬಳ್ಳಿಯ ಸಿದ್ಧಾರೂಢಮಠಕ್ಕೆ ಭೇಟಿಕೊಟ್ಟು ದರ್ಶನ ಪಡೆದಿದ್ದಾರೆ.

ಸ್ವಸಹಾಯ ಸಂಘಗಳ ಸದಸ್ಯೆಯರು ಗುಂಪು ಗುಂಪಾಗಿ ಪ್ರಯಾಣಿಸಿ ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗಕ್ಕೆ ಉಚಿತವಾಗಿ ಹೋಗಿ ಬಂದಿದ್ದಾರೆ. ಶಿವಮೊಗ್ಗ, ಹರಿಹರ, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರಿನ ಮಹಿಳೆಯರು ಮಂತ್ರಾಲಯಕ್ಕೆ ಬಂದು ಹೋಗಿದ್ದಾರೆ. ಶ್ರೀಶೈಲಕ್ಕೆ ಹೋಗುವವರು ಬೇರೆ ಬೇರೆ ಜಿಲ್ಲೆಗಳಿಂದ ರಾಯಚೂರಿಗೆ ಉಚಿತವಾಗಿ ಬಂದು ಇಲ್ಲಿಂದ ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.

ಮಂತ್ರಾಲಯ ಆಂಧ್ರಪ್ರದೇಶದಲ್ಲಿರುವ ಕಾರಣ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ, ನಂತರ ಸರ್ಕಾರ ಅದಕ್ಕೂ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ಮಾತ್ರ ಎರಡು ಬಾರಿ ಟಿಕೆಟ್‌ ಕೊಡಲಾಗುತ್ತಿದೆ. ಕರ್ನಾಟಕದ ಗಡಿಯ ವರೆಗೆ ಉಚಿತ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಗಡಿಯಿಂದ ಆಚೆಗೆ ಮಾತ್ರ ಟಿಕೆಟ್ ಪಡೆಯಲಾಗುತ್ತಿದೆ ಎಂದು ಬಸ್ಸಿನ ನಿರ್ವಾಹಕ ತಿಳಿಸಿದರು.

‘ಶಕ್ತಿ ಯೋಜನೆಯಿಂದ ಬಡ ಹಾಗೂ ಸಾಮಾನ್ಯ ಕುಟುಂಬದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. ಸಂಬಂಧಿಕರು, ಬಂಧು ಮಿತ್ರರನ್ನು ಭೇಟಿಯಾಗಲು ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಟ್ಟು ದೇವರ ದರ್ಶನ ಪಡೆಯುವ ಅವಕಾಶ ದೊರೆತಿದೆ‘ ಎಂದು ಮಂತ್ರಾಲಯಕ್ಕೆ ಭೇಟಿಕೊಟ್ಟು ಶಿವಮೊಗ್ಗಕ್ಕೆ ತೆರಳುತ್ತಿದ್ದ ಗೃಹಣಿಯರು ಸಂತಸ ಹಂಚಿಕೊಂಡರು.

Cut-off box - ಕೆಕೆಆರ್‌ಟಿಸಿಯಲ್ಲಿ ಒಂದು ವರ್ಷದಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಹಾಗೂ ನಿಗಮಕ್ಕೆ ಬಂದ ಆದಾಯ ( ರೂಪಾಯಿಗಳಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT