ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿಮಾನ ನಿಲ್ದಾಣ: ಎಎಐ ತಂಡದಿಂದ ಸ್ಥಳ ಪರಿಶೀಲನೆ

ರಾಯಚೂರು ವಿಮಾನ ನಿಲ್ದಾಣ: ಸಕಾರಾತ್ಮಕ ಪ್ರತಿಕ್ರಿಯೆ
Last Updated 19 ಮಾರ್ಚ್ 2021, 15:27 IST
ಅಕ್ಷರ ಗಾತ್ರ

ರಾಯಚೂರು: ನಗರ ಹೊರವಲಯದಲ್ಲಿರುವ ಯರಮರಸ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಅನುಮತಿ ದೊರೆಯುವ ಸಾಧ್ಯತೆಗಳ ಬಗ್ಗೆ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಂಡವು ಶುಕ್ರವಾರ ಭೇಟಿ ನೀಡಿದ ಬಳಿಕ ಆಶಾಭಾವ ವ್ಯಕ್ತಪಡಿಸಿತು.

ಆನಂತರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

ರಾಯಚೂರು ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿರುವ 400 ಎಕರೆ ಪ್ರದೇಶ ಸೂಕ್ತವೂ, ಉತ್ತಮವೂ ಆಗಿದೆ, ಅದರೊಂದಿಗೆ
ಹೆಚ್ಚುವರಿ ಭೂಮಿಯೂ ಬೇಕಾಗಬಹುದು ಎಂದು ನವದೆಹಲಿಯ ವಿಮಾನಯಾನ ಪ್ರಾಧಿಕಾರದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮಿಶ್ರಾ ತಿಳಿಸಿದರು.

ಉದ್ದೇಶಿತ ಸ್ಥಳದಲ್ಲಿ ವೈಟಿಪಿಎಸ್‍ನ ಚಿಮಣಿ ಹಾಗೂ ವಿದ್ಯುತ್ ಲೈನುಗಳು ಹಾಯ್ದುಹೋಗಿವೆ. ಸದ್ಯದ ಮಟ್ಟಿಗೆ ಕಣ್ಣಿಗೆ ಗೋಚರವಾಗುತ್ತಿರುವ ದೊಡ್ಡ ವಸ್ತುಗಳಾಗಿವೆ, ಹೀಗಾಗಿ ರನ್‍ವೇಯನ್ನು ಒಂದು ಬದಿ ಅಥವಾ ಮಧ್ಯದಲ್ಲಿಯೇ ಇರಿಸುವ ಬಗ್ಗೆ ಅಧ್ಯಯನ ಮಾಡಬೇಕಿದೆ, ವೈಟಿಪಿಎಸ್‍ನ ಸಂಪೂರ್ಣ ನಕಾಶೆ ಹಾಗೂ ಆ ಸ್ಥಳದ ಕಂದಾಯ ನಕಾಶೆಯಿಂದ ಸಾಕಷ್ಟು ಮಾಹಿತಿ ಲಭ್ಯವಾಗಲಿದೆ, ಅದನ್ನು ಒದಗಿಸುವಂತೆ ಕೋರಿದರು.

ಗಾಳಿಯ ಸಾಂಧ್ರತೆ ಹಾಗೂ ಗಾಳಿ ಬೀಸುವ ದಿಕ್ಕು ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ, ಅದನ್ನು ಪರಿಶೀಲಿಸಲಾಗುತ್ತಿದೆ, ಪಕ್ಕದಲ್ಲಿರುವ ಕಲಬುರ್ಗಿ ಹಾಗೂ ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದ ಮಾಹಿತಿಯೂ ಇದಕ್ಕೆ ಪೂರಕವಾಗಲಿದೆ ಎಂದರು.

ರಾಯಚೂರಿನಲ್ಲಿ ನಿರ್ಮಾಣವಾಗಲಿರುವ ನಿಲ್ದಾಣ ಭವಿಷ್ಯದಲ್ಲಿಯೂ ಉಪಯುಕ್ತವಾಗಬೇಕು, ಸರಕು, ಪ್ರಯಾಣಿಕ ಯಾನ ಸೇರಿದಂತೆ ವಾಣಿಜ್ಯ ಹಾಗೂ ದೇಶಿಯ ವಾಯುಯಾನ ದೃಷ್ಟಿಯಿಂದ ಲಾಭದಾಯಕವಾಗಿರಬೇಕು, ಭವಿಷ್ಯದಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೀತಿಯ ನಿಲ್ದಾಣವಾದರೆ ಉಪಯುಕ್ತ, ಏರ್‌ಬಸ್‌-320ಯಂತಹ ವಿಮಾನಗಳು ಇಳಿಯುವಂತಾಗಬೇಕು. ಹಾಗಾಗಿ ಸಕಲ ರೀತಿಯ ಉಪಯುಕ್ತ ವಿಮಾನ ನಿಲ್ದಾಣಕ್ಕೆ ಅನುಕೂಲಕರವಾಗುವಂತಹ ಅಂಶಗಳನ್ನು ಪತ್ತೆಮಾಡಿ, ಮುಂದಿನ ವಾರದೊಳಗೆ ಸಕರಾತ್ಮಕ ವರದಿ ನೀಡಲಾಗುವುದು ಎಂದು ತಿಳಿಸಿದರು.

ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದು ಐತಿಹಾಸಿಕ ನಿರ್ಧಾರವಾಗಿದೆ, ಅದರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅಪಾರ ಶ್ರಮವಹಿಸಿದ್ದು, ಉತ್ತಮ ಸಹಕಾರ ನೀಡುತ್ತಿದ್ದಾರೆ, ಈ ಭಾಗದ ವಾಣಿಜ್ಯ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಅಪಾರ ಲಾಭವಾಗಲಿದೆ ಎಂದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಮಾತನಾಡಿ, ಹಿಂದುಳಿದ ಪ್ರದೇಶಗಳಾದ್ದರಿಂದ ಶೈಕ್ಷಣಿಕವಾಗಿಯೂ ಇಲ್ಲಿ ಉನ್ನತಿಸಾಧಿಸಬಹುದು, ಆದ ಕಾರಣ ಜಿಲ್ಲೆಗೆ ವಿಮಾನ ನಿಲ್ದಾಣ ಅಗತ್ಯವಿರುವ ಎಲ್ಲಾ ಅಂಶಗಳ ಬಗ್ಗೆ ತಂಡದ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಚೆನ್ನೈ ವಿಮಾನ ನಿಲ್ದಾಣದ ಡಿಜಿಎಂ ಪಿ. ರಾಜ್‍ಕುಮಾರ್, ತಿರುಚ್ಚಿ ವಿಮಾನ ನಿಲ್ದಾಣದ ಕೆ. ಅರಾವಲಿ, ಶರದ್ ದುಬೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ಪಿ.ಟಿ. ಸಿಂಧು, ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ಮೂಲ ಸೌಕರ್ಯಭಿವೃದ್ದಿ ನಿಗಮದ ಕ್ಯಾಪ್ಟನ್ ಶಮಂತ್, ಬ್ರಿಗೇಡಿಯರ್ ಪೂರ್ವಿ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ರಾಯಚೂರು ಉಪವಿಭಾಗಾಧಿಕಾರಿ ಸಂತೋಷ್ ಕಾಮಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT